ವೀರಾಜಪೇಟೆ, ಆ. 12: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ಬೆಳಗಿನಿಂದಲೇ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದು, ಜಲಾವೃತಗೊಂಡಿದ್ದ ಎಲ್ಲಾ ರಸ್ತೆಗಳಲ್ಲಿ ನಿನ್ನೆಯಿಂದಲೇ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳ ಸಂಚಾರ ಆರಂಭಗೊಂಡಿವೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಕಳೆದ 8 ದಿನಗಳಿಂದ ವಿದ್ಯುತ್ ಸಂಪರ್ಕ ಅಡಚಣೆಯಾಗಿ ಪಟ್ಟಣದ ಕೆಲವು ಹೊಟೇಲ್‍ಗಳು ಅಂಗಡಿಗಳನ್ನು ಮುಚ್ಚಲಾಗಿತ್ತು. ಇಂದಿನಿಂದ ಎಲ್ಲಾ ಹೊಟೇಲ್‍ಗಳು ಅಂಗಡಿಗಳು ಪುನರಾರಂಭಗೊಂಡಿವೆ.
ನಿನ್ನೆ ದಿನ ರಾತ್ರಿಯೂ ಇಲ್ಲಿನ ಮಲೆತಿರಿಕೆ ಬೆಟ್ಟದಲ್ಲಿ ಬರೆ ಕುಸಿದು ಎರಡು ಮನೆಗಳು ಜಖಂ ಗೊಂಡಿರುವದಾಗಿ ಪಟ್ಟಣ ಪಂಚಾಯಿತಿಯ ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ತಿಳಿಸಿದ್ದಾರೆ. ಮಳೆಯ ಪ್ರಮಾಣ ಕಡಿಮೆಯಾದರೂ ಬೆಟ್ಟದಲ್ಲಿ ಬರೆ ಕುಸಿಯುವದು ಕಡಿಮೆ ಯಾಗಿಲ್ಲವೆಂದು ಅವರು ತಿಳಿಸಿದ್ದಾರೆ.
ಬೇತ್ರಿ ಗ್ರಾಮದ ಕಾವೇರಿ ಹೊಳೆಯ ನೀರು ಇಳಿಮುಖಗೊಂಡಿದೆ. ಪಕ್ಕದ ತಂಡಾಗುಂಡಿ ಸೇತುವೆಯ ಮಳೆಯಿಂದ ಜಖಂಗೊಂಡಿದ್ದು ಕುಸಿಯುವ ಹಂತದಲ್ಲಿದೆ ಎಂದು ಬೇತ್ರಿ ಗ್ರಾಮಸ್ಥರು ತಿಳಿಸಿದ್ದಾರೆ.
-ಡಿ.ಎಂ.ಆರ್.