ಮಡಿಕೇರಿ, ಆ. 12: ಮಡಿಕೇರಿ - ಭಾಗಮಂಡಲ ಚೇರಂಗಾಲ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟ ತಪ್ಪಲು ಮುಂದಿನ ಕೆಲವೇ ದಿನಗಳಲ್ಲಿ ಸಂಪೂರ್ಣ ಕುಸಿಯುವ ಎಲ್ಲಾ ಲಕ್ಷಣಗಳು ಕಂಡು ಬಂದಿದ್ದು, ಈ ಬೆಟ್ಟ ತಪ್ಪಲಿನಲ್ಲಿ ವಾಸಿಸುತ್ತಿರುವ ಕೋಳಿಕಾಡು ಎಂಬ ಕಾಲೋನಿಯ 70 ಕುಟುಂಬಗಳ 300 ಮಂದಿ ಸಂಕಷ್ಟ ಎದುರಿಸಲು ವೇದಿಕೆ ಸಿದ್ಧವಾಗಿದೆ! ಬ್ರಹ್ಮಗಿರಿ ಬೆಟ್ಟ ತಪ್ಪಲು ಕೆಲವೇ ದಿನಗಳಲ್ಲಿ ಕುಸಿದುಬೀಳಲು ಕ್ಷಣಗಣನೆಯಲ್ಲಿದೆ. ಬೆಟ್ಟ ತಪ್ಪಲಲ್ಲಿರುವ ಕೋಳಿಕಾಡು ಎಂಬ ಗ್ರಾಮವೇ ನಾಮಾವಶೇಷವಾಗುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗಿದೆ. ಆಡಳಿತ ವ್ಯವಸ್ಥೆ ಮತ್ತು ಸರಕಾರ ಈಗಲೇ ಎಚ್ಚೆತ್ತುಕೊಳ್ಳದೇ ಹೋದಲ್ಲಿ ಬ್ರಹ್ಮಗಿರಿ ಬೆಟ್ಟ, ಕಾವೇರಿ ಮಾತೆ ಉಗಮ ತಾಣ ಮತ್ತು ಗುಪ್ತಗಾಮಿನಿ ಕಾವೇರಿಗೂ ಉಳಿಗಾಲವಿಲ್ಲ ಎಂಬ ಆತಂಕ ಕೋಳಿಕಾಡು ಮತ್ತು ಭಾಗಮಂಡಲ ನಿವಾಸಿಗಳನ್ನು ಕಾಡುತ್ತಿದೆ.

ಬ್ರಹ್ಮಗಿರಿ ಬೆಟ್ಟ ತಪ್ಪಲು ಪಶ್ಚಿಮ ಘಟ್ಟ ವ್ಯಾಪ್ತಿಗೆ ಒಳಪಟ್ಟಿದ್ದು, ಅತ್ಯಂತ ಸೂಕ್ಷ್ಮ ಪರಿಸರ ತಾಣಗಳಲ್ಲಿ ಒಂದಾಗಿದೆ. ವಾರ್ಷಿಕ 500 ಇಂಚಿಗೂ ಹೆಚ್ಚು ಮಳೆ ಸುರಿಯುವ ಈ ಬೆಟ್ಟ ಸಾಲು ನೈಸರ್ಗಿಕವಾಗಿ ಸದೃಢವಾಗಿದ್ದು ಮಾನವನ ಬೃಹತ್ ಹಸ್ತಕ್ಷೇಪಕ್ಕೆ ಒಳಗಾದರೆ ಇಡೀ ಬೆಟ್ಟವೇ ಕುಸಿಯಲಿದೆ. ಇದುವೇ ಭಾಗಮಂಡಲ ಮತ್ತು ಕೋಳಿಕಾಡು ಕಾಲೋನಿ ನಿವಾಸಿಗಳ ಆತಂಕಕ್ಕೆ ಕಾರಣವಾಗಿದೆ.

ಯಾಕೆಂದರೆ ಮಡಿಕೇರಿಯ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಆಗಿ ಸಂಪಾಜೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್ ಎಂಬವರಿಗೆ ಕಳೆದ 20 ವರ್ಷಗಳ ಹಿಂದೆ ಕಾವೇರಿ ಉಗಮ ತಾಣದಿಂದ ಕೇವಲ 1 ಕಿ.ಮೀ. ಕೆಳ ಭಾಗದ ಚೇರಂಗಾಲದ ಸರ್ವೆ ನಂಬರ್ 37/2 ರಲ್ಲಿ 4 ಎಕರೆ ಭೂಮಿ ಮಂಜೂರಾಗಿತ್ತು. ಇದರೊಂದಿಗೆ ಚೇರಂಗಾಲ ನಿವಾಸಿಗಳಾದ ಶೋಭಾ ಪ್ರಭು ಅವರ ಪತಿಯ ಹೆಸರಲ್ಲಿ 2.53 ಎಕರೆ, ಕುಂಬನ ರುಕ್ಷ್ಮಿಣಿ ಹೆಸರಲ್ಲಿ 3.35, ಕುಂಬನ ಪೂವಮ್ಮ ಹೆಸರಿಗೆ 3.10 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದ್ದು, ಉಳಿದ ಪ್ರದೇಶ ದಾಖಲೆ ಸರಕಾರಿ ಜಮೀನು ಎಂಬ ಹೆಸರಲ್ಲಿದೆ.

ಆದರೆ ಸರಕಾರಿ ಹುದ್ದೆಯಲ್ಲಿರುವ ಸತೀಶ್ ತಮಗೆ ಮಂಜೂರಾದ ಜಮೀನಿನಲ್ಲಿ 1 ಎಕರೆ ಪ್ರದೇಶದಲ್ಲಿ ಮರ ಕಡಿದು, (ಮೊದಲ ಪುಟದಿಂದ) ಜೆಸಿಬಿ ಯಂತ್ರ ಬಳಸಿಕೊಂಡು ಬೆಟ್ಟವನ್ನು ಕೊರೆದು ಎರಡು ಫುಟ್‍ಬಾಲ್ ಮೈದಾನದಷ್ಟು ಅಗಲ ವಿಸ್ತರಿಸಿ ಬೃಹತ್ ರೆಸಾರ್ಟ್ ನಿರ್ಮಿಸಲು ಮುಂದಾಗಿದ್ದಾರೆ.

ಈ ಸ್ಥಳಕ್ಕೆ ತೆರಳುವ ಮಾರ್ಗದಲ್ಲಿಯೇ ಬೇರೆ ವ್ಯಕ್ತಿಯೊಬ್ಬರು ಸರಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದು, ರೆಸಾರ್ಟ್ ದಾರಿಗಾಗಿ ಆ ವ್ಯಕ್ತಿಯ ಜಾಗವನ್ನೂ ಬಳಸಿಕೊಳ್ಳಲಾಗಿದ್ದು, ಸರಕಾರಿ ಭೂಮಿ ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಯ ಹೆಸರಿಗೂ ದಾಖಲೆ ಮಾಡಿಕೊಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ, ರೆಸಾರ್ಟ್‍ಗಾಗಿ ಸುಮಾರು 15 ಎಕರೆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ ಎಂದೂ ಸ್ಥಳೀಯರು ದೂರಿದ್ದಾರೆ.

ಪ್ರವೇಶ ದ್ವಾರದಲ್ಲೇ ಕಾಟೇಜ್ ಒಂದನ್ನು ನಿರ್ಮಿಸಲಾಗಿದೆ. ಮಾತ್ರವಲ್ಲದೇ, ಬೆಟ್ಟದ ತುದಿಯಲ್ಲಿ ಭಾರಿ ಅಳತೆಯ ಕೆರೆಯನ್ನು ಕೂಡ ತೋಡಲಾಗಿದ್ದು, ನೀರು ತುಂಬುವ ಮೊದಲೇ ಒಡೆಯಲಾರಂಭಿಸಿದೆ. ಇವೆಲ್ಲವನ್ನು ಅಕ್ರಮವಾಗಿ ಮಾಡುತ್ತಿದ್ದಾರೆ ಎಂದು ಕೋಳಿಕಾಡು ಮತ್ತು ಭಾಗಮಂಡಲ ಗ್ರಾಮಸ್ಥರು ಆರೋಪಿಸಿದ್ದಾರೆ. ಬೆಟ್ಟ ಕೊರೆದು ಮಣ್ಣು ತೆಗೆದಿರುವ ಪ್ರದೇಶದ ಭೂಗರ್ಭದಲ್ಲಿಯೇ ತೀರ್ಥ ಕುಂಡಿಕೆಯಿಂದ ಕಾವೇರಿ ಮಾತೆ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದು, ಕೆಳ ಭಾಗದ ನಾಗತೀರ್ಥವನ್ನು ಸೇರುತ್ತದೆ.

ಬೆಟ್ಟ ಕೊರೆದ ಭಾಗದ ನೂರಾರು ಟನ್ ಮಣ್ಣನ್ನು ಕೋಳಿಕಾಡು ಕಾಲೋನಿಯ ಮೇಲ್ಭಾಗದಲ್ಲಿ ಬೆಟ್ಟದ ಅಂಚಿಗೇ ಸುರಿಯಲಾಗಿದೆ. ಈ ಭಾಗದಲ್ಲಿ ಭಾರೀ ಬಿರುಕುಗಳು ಕೂಡ ಮೂಡಿದ್ದು, ಯಾವದೇ ಕ್ಷಣದಲ್ಲಿ ಭಾರೀ ಭೂಕುಸಿತವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಬಿರುಕು ಬಿಟ್ಟಿರುವ ಭಾಗ ಕುಸಿದು ಬಿದ್ದರೆ ಕೆಳಭಾಗದಲ್ಲಿರುವ ಕೋಳಿಕಾಡು ಕಾಲೋನಿ ಸಂಪೂರ್ಣ ಭೂ ಸಮಾಧಿಯಾಗಲಿದ್ದು, 300ಕ್ಕೂ ಹೆಚ್ಚು ಮಂದಿ ಸಂಕಷ್ಟಕ್ಕೀಡಾಗಲಿದ್ದಾರೆ.

ಕಳೆದ 2 ತಿಂಗಳ ಹಿಂದೆಯಷ್ಟೇ ಈ ಕಾಮಗಾರಿಗಳನ್ನು ನಡೆಸಿದ್ದು, ಅರಣ್ಯ ಇಲಾಖೆಯು ಆಕ್ಷೇಪ ವ್ಯಕ್ತಪಡಿಸಿ 2 ನೋಟೀಸ್ ಕೂಡ ನೀಡಿದ್ದು, ಈ ನೋಟೀಸ್‍ಗೆ ಸತೀಶ್ ಉತ್ತರಿಸಲಿಲ್ಲವೆನ್ನಲಾಗಿದೆ. ಮಂಜೂರಾದ ಜಮೀನಿನಲ್ಲಿ ಯಾವದೇ ಬೆಳೆ ಇಲ್ಲದಿದ್ದರೂ ಕೂಡ ಕಳೆದ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಲ್ಲಿ ಬೆಳೆಹಾನಿ ಹೆಸರಲ್ಲಿ 15,800 ರೂ.ಗಳನ್ನು ಪರಿಹಾರ ರೂಪದಲ್ಲಿಯೂ ಪಡೆದುಕೊಂಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ 3 ದಿನಗಳ ಹಿಂದೆ ಭಾಗಮಂಡಲ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದಾಗ ಭಾರೀ ಕೆಸರು ಮಿಶ್ರಿತ ನೀರು ಕೋಳಿಕಾಡು ಕಾಲೋನಿಗೆ ಹರಿದು ಬಂದಿದೆ. ಇದೇ ನೀರು ಕಾವೇರಿ ನದಿಗೂ ಸೇರುತ್ತಿರುವದು ಕಂಡು ಬಂದಿದೆ.

ಎಲ್ಲಿಯೂ ಭೂಕುಸಿತವಾಗದಿದ್ದರೂ ಮಣ್ಣು ನೀರು ಹರಿದು ಬರುತ್ತಿರುವದು ಭಾಗಮಂಡಲ ನಿವಾಸಿಗಳ ಸಂಶಯಕ್ಕೂ ಕಾರಣವಾಗಿದೆ.

ಭಾಗಮಂಡಲ ನಿವಾಸಿಯಾದ ನಾಗೇಶ್ ಗೆಳೆಯರನ್ನು ಕರೆದುಕೊಂಡು ತಲಕಾವೇರಿಗೆ ತೆರಳುತ್ತಿದ್ದಾಗ ಚೇರಂಗಾಲದಲ್ಲಿ ಭಾರೀ ಕೆಸರು ಮಿಶ್ರಿತ ನೀರು ಹರಿದು ಬರುತ್ತಿರುವದು ಗೋಚರಿಸಿದೆ. ಗುಡ್ಡದ ಮೇಲೆ ತೆರಳಿ ನೋಡಿದಾಗ ಅಂದಾಜು 1 ಎಕರೆ ಪ್ರದೇಶದಲ್ಲಿ ಭಾರೀ ಮಣ್ಣು ತೆಗೆದಿರುವದು ಪತ್ತೆಯಾಗಿದೆ. ಬೆಟ್ಟ ಕೊರೆದ ಪರಿಣಾಮ ಸುಮಾರು 50 ಮೀಟರ್ ಉದ್ದಕ್ಕೆ ಬೆಟ್ಟ ಬಿರುಕು ಬಿಟ್ಟಿದೆ. ಬಳಿಕ ಈ ವಿಚಾರ ಕೋಳಿಕಾಡು ಮತ್ತು ಭಾಗಮಂಡಲ ನಿವಾಸಿಗಳಿಗೆ ತಿಳಿಯುವಂತಾಗಿದೆ.

ಈ ಹಿನೆÀ್ನಲೆಯಲ್ಲಿ ರೆಸಾರ್ಟ್ ನಿರ್ಮಿಸುವ ಪ್ರದೇಶಕ್ಕೆ ಭಾಗಮಂಡಲ ಮಾಜೀ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್ ಜೋಯಪ್ಪ, ನಾಗೇಶ್, ಕೋಳಿಕಾಡು ಕಾಲೋನಿ ನಿವಾಸಿಗಳು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಭಾಗಮಂಡಲ ನಿವಾಸಿಗಳು ತೆರಳಿ ಪರಿಶೀಲನೆ ನಡೆಸಿದರು. ಪರಿಸರ ಸೂಕ್ಷ್ಮ ವಲಯದಲ್ಲಿ ಹೀಗೆ ಬೆಟ್ಟ ಅಗೆದು ಹಾಕಲು ಅನುಮತಿ ನೀಡಿದವರು ಯಾರು?, ಸರಕಾರಿ ಉದ್ಯೋಗಿಯ ಹೆಸರಿನಲ್ಲಿ ಇತರ ಮಂದಿ ಕೂಡಾ ಈ ರೆಸಾರ್ಟ್ ನಿರ್ಮಾಣದ ಹಿಂದಿದ್ದಾರೆಯೇ? ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.

ತಕ್ಷಣವೇ ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಈ ಬಗ್ಗೆ ಗಮನ ಹರಿಸಿ ಕಾಮಗಾರಿಯನ್ನು ತಡೆಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕೋಳಿಕಾಡು ದುರಂತ

1974ರ ಕೋಳಿಕಾಡು ದುರಂತ ಮತ್ತೊಮ್ಮೆ ಮರುಕಳಿಸಲಿದೆ ಎಂಬ ಆತಂಕವನ್ನು ಭಾಗಮಂಡಲ ಮತ್ತು ಕೋಳಿಕಾಡು ನಿವಾಸಿಗಳು ಹೊರಗೆಡವಿದ್ದಾರೆ.

1974ರ ಆಗಸ್ಟ್ ತಿಂಗಳು. ಆಗ ಆಶ್ಲೇಷ ಮಳೆಯ ಆರ್ಭಟಕ್ಕೆ ಬ್ರಹ್ಮಗಿರಿ ತಪ್ಪಲು ಮಳೆ ತಾಳಲಾರದೇ ಅಕ್ಷರಶಃ ನಲುಗಿಹೋಗಿತ್ತು. ಇದೇ ಚೇರಂಗಾಲದ ಕೋಳಿಕಾಡು ಕಾಲೋನಿಯಲ್ಲಿ ಅಂದು 60 ಮನೆಗಳಿದ್ದು, ಬ್ರಹ್ಮಗಿರಿ ಬೆಟ್ಟಶ್ರೇಣಿ ಕುಸಿದು ಬಿದ್ದು ಸ್ಥಳದಲ್ಲೇ 7 ಮಂದಿ ಸಜೀವ ಭೂ ಸಮಾಧಿಯಾಗಿದ್ದರು.

ಈ ಘೋರ ದುರಂತವನ್ನು ಕಂಡು ಅಂದು ಕೊಡಗು ಜಿಲ್ಲೆಯೇ ನಡುಗಿ ಹೋಗಿತ್ತು. ಮೃತದೇಹಗಳು ಭಾರೀ ಮಣ್ಣಿನಡಿ ಸಿಲುಕಿದ್ದರಿಂದ ಅಲ್ಲಿನ ಸ್ಥಳೀಯರು ಹತ್ತು ಹಲವು ದಿನಗಳ ಕಾರ್ಯಾಚರಣೆ ನಡೆಸಿ ಮೃತದೇಹಗಳನ್ನು ಹೊರತೆಗೆದಿದ್ದರು.

ಇಂದಿಗೂ ಈ ಘಟನೆ ಕೋಳಿಕಾಡು ದುರಂತ ಎಂದೇ ಭಾಗಮಂಡಲದ ಗ್ರಾಮಸ್ಥರ ಮನದಲ್ಲಿ ಮರೆಯಲಾಗದ ಕರಾಳ ನೆನಪಾಗಿ ಉಳಿದುಕೊಂಡಿದೆ. ಈ ರೆಸಾರ್ಟ್ ಕಾಮಗಾರಿ ಮತ್ತು ಭಾರೀ ಪ್ರಮಾಣದ ಮಣ್ಣನ್ನು ಅವೈಜ್ಞಾನಿಕವಾಗಿ ತೆಗೆದು, ಕೋಳಿಕಾಡು ಕಾಲೋನಿಯ ಬೆಟ್ಟದ ಮೇಲೆ ಸುರಿದಿರುವದರಿಂದ ಚೇರಂಗಾಲ ಗ್ರಾಮದ ಜನರಲ್ಲಿ ಮತ್ತೊಮ್ಮೆ ಕೋಳಿಕಾಡು ದುರಂತ ನಡೆಯುವ ಆತಂಕವೂ ಮನೆ ಮಾಡಿದೆ. ಹೀಗಾಗಿಯೇ ಭಾಗಮಂಡಲ, ಚೇರಂಗಾಲ, ಕೋಳಿಕಾಡು ನಿವಾಸಿಗಳು ಆಡಳಿತ ವ್ಯವಸ್ಥೆ ಈಗಲೇ ಎಚ್ಚರ ವಹಿಸಬೇಕೆಂದು ಆಗ್ರಹಿಸಿದ್ದಾರೆ.

-ಐಮಂಡ ಗೋಪಾಲ್ ಸೋಮಯ್ಯ.