ವೀರಾಜಪೇಟೆ, ಆ. 12: ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋರ ಗ್ರಾಮದ ಚೂರಿಕೆಂದುಟಿ ಎಂಬಲ್ಲಿನ ಬೆಟ್ಟ ಕುಸಿತದಿಂದ ನಾಲ್ಕು ದಿನಗಳ ಹಿಂದೆ ಜೀವಂತ ಸಮಾಧಿಯಾಗಿದ್ದ ಅನಸೂಯ (35) ಎಂಬವರ ಮೃತದೇಹ ಈ ಮಧ್ಯಾಹ್ನ ಪತ್ತೆಯಾಗಿದೆ. ಅಲ್ಲದೆ ಕಟ್ಟೆಮಾಡುವಿನಲ್ಲಿ ವ್ಯಕ್ತಿ ಯೊಬ್ಬರು ಸಾವಿಗೀಡಾಗಿರುವದು ತಡವಾಗಿ ಬೆಳಕಿಗೆ ಬಂದಿದೆ. (ಮೊದಲ ಪುಟದಿಂದ) ಇದರಿಂದಾಗಿ ಜಿಲ್ಲೆಯಲ್ಲಿ ಪ್ರವಾಹ - ಭೂ ಕುಸಿತದಿಂದ ಸಾವಿಗೀಡಾದವರ ಸಂಖ್ಯೆ 9ಕ್ಕೆ ಏರಿದೆ. ತೋರ ಗ್ರಾಮದ ನಿವಾಸಿ ವರ್ತಕ ಹಾಗೂ ಕೃಷಿಕ ಪ್ರಭುಕುಮಾರ್ ಅವರ ದುರ್ದೈವಿ ಪತ್ನಿ ಅನುಸೂಯ ಅವರ ಪಾರ್ಥಿವ ಶರೀರವನ್ನು ಘಟನೆ ಸ್ಥಳದಿಂದ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ತಂದು ಮರಣೋತ್ತರ ಪರೀಕ್ಷೆ ಬಳಿ ಕುಟುಂಬ ವರ್ಗಕ್ಕೆ ಒಪ್ಪಿಸಲಾಯಿತು. ಅಲ್ಲದೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ಕಳೆದ ನಾಲ್ಕು ದಿನಗಳ ಹಿಂದೆ ತಾ. 9ರಂದು ತೋರ ಬೆಟ್ಟ ಕುಸಿತದಿಂದ ಈಗಾಗಲೇ ಕಣ್ಮರೆಯಾಗಿರುವ ಎಂಟು ಮಂದಿಯ ಪತ್ತೆಗಾಗಿ ಕಾರ್ಯಾಚರಣೆ ನಿರಂತರವಾಗಿ ನಡೆದಿತ್ತು. ಆ ಪೈಕಿ ಇಂದು ಪ್ರಭುಕುಮಾರ್ ಪತ್ನಿಯ ಶವ ಪತ್ತೆಯಾಗಿದ್ದು, ಇನ್ನುಳಿದಂತೆ ಅವರ ತಾಯಿ ದೇವಕಿ (65) ಹಾಗೂ ಪುತ್ರಿಯಾರಾದ ಅಮೃತ (13) ಹಾಗೂ ಆಧಿತ್ಯ (10) ಈ ಮೂವರ ಬಗ್ಗೆ ಯಾವದೇ ಸುಳಿವು ಲಭಿಸದಾಗಿದೆ.
ಪರಿಹಾರ ನೀಡಿಕೆ : ಇಂದು ಅನಸೂಯ ಅವರ ಶವ ಪತ್ತೆಯಾಗಿ ಇಲ್ಲಿ ಆಸ್ಪತ್ರೆಗೆ ತರುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಅತ್ತ ಧಾವಿಸಿದ ಸಾರ್ವಜನಿಕರು ಹಾಗೂ ಮೃತರ ಬಂಧುಗಳು ಅನುಸೂಯ ಅವರ ಅಗಲಿಕೆಗೆ ಕಂಬನಿಯೊಂದಿಗೆ; ಅಂತಿಮ ನಮನ ಸಲ್ಲಿಸಿದರು. ವಿಧಾನಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ತಹಶೀಲ್ದಾರ್ ಪುರಂದರ ಸಮ್ಮುಖದಲ್ಲಿ ಪತಿ ಪ್ರಭುಭಟ್ ಅವರಿಗೆ ರೂ. 5 ಲಕ್ಷ ಮೊತ್ತದ ನೆರವಿನ ಚೆಕ್ ಹಸ್ತಾಂತರಿಸಿದರು.
ಅಧಿಕಾರಿಗಳು ಭೇಟಿ : ತೋರದಲ್ಲಿ ಕಣ್ಮರೆಯಾಗಿರುವ ಇತರ ಏಳು ಮಂದಿಗಾಗಿ ಕಾರ್ಯಾಚರಣೆ ಬಗ್ಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರುಗಳು ತೆರಳಿ ಮಾಹಿತಿ ಪಡೆದುಕೊಂಡರು.
ಅಲ್ಲದೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅಧಿಕಾರಿಗಳ ತಂಡ ಕಳೆದ ನಾಲ್ಕು ದಿನಗಳಿಂದ ಮೂರು ಹಿಟಾಚಿ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೆರಡು ಹೆಚ್ಚಿನ ಯಂತ್ರಗಳೊಂದಿಗೆ ತಾ. 13 ರಂದು (ಇಂದು) ಶೋಧ ಮುಂದುವರಿಸಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರ ಸಹಕಾರದೊಂದಿಗೆ ಪೊಲೀಸ್, ಮಿಲಿಟರಿ, ಎನ್.ಡಿ.ಆರ್.ಎಫ್. ಅಗ್ನಿಶಾಮಕ, ಗೃಹರಕ್ಷಕ ತಂಡ ಜಂಟಿಯಾಗಿ 80ಕ್ಕೂ ಹೆಚ್ಚು ಮಂದಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ ಎಂದು ವಿವರಿಸಿದರು.