ಗೋಣಿಕೊಪ್ಪಲು, ಆ. 11: ಕೊಡಗು ಜಿಲ್ಲೆ ಎಂದೂ ಕಂಡರಿಯದ ಅತಿವೃಷ್ಟಿ ಹಾಗೂ ಭೂಕುಸಿತದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಪುನರ್ವಸತಿ ಕಾಮಗಾರಿ ಹಾಗೂ ಅಭಿವೃದ್ಧಿ ಕಾಮಗಾರಿ ಕಳೆದ ಸರಕಾರದ ಅವಧಿಯಲ್ಲಿ ಆಮೆಗತಿಯಲ್ಲಿ ಸಾಗಿತ್ತು. ಈ ನಿಟ್ಟಿನಲ್ಲಿ ಬದಲಾವಣೆ ತರಬೇಕೆಂದರೆ ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರವು ಜಿಲ್ಲೆಗೆ ಸಚಿವ ಸ್ಥಾನವನ್ನು ನೀಡಬೇಕೆಂದು ಕೊಡಗು ಜಿಲ್ಲಾ ರೈತ ಸಂಘದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಆಗ್ರಹಿಸಿದ್ದಾರೆ.
ಬೇರೆ ಜಿಲ್ಲೆಯಿಂದ ನೇಮಕಗೊಂಡ ಉಸ್ತುವಾರಿ ಮಂತ್ರಿಗಳು ಅಧಿಕಾರಿಗಳ ಹಾಗೂ ಜನಸಾಮಾನ್ಯರ ಸಂಪರ್ಕವಿಲ್ಲದೆ ಕೊಡಗು ಜಿಲ್ಲೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕೊಡಗು ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ. ಜಮ್ಮಾ ಭೂಮಿ ಸಮಸ್ಯೆಗಳು, ಅವನತಿಯಂಚಿಯಲ್ಲಿರುವ ಕಾಫಿ ಉದ್ಯಮ, ಆನೆ ಮಾನವ ಸಂಘರ್ಷ, ನೆರೆ ಸಂತ್ರಸ್ತರ ಪುನರ್ವಸತಿ ಇತ್ಯಾದಿ ಸಮಸ್ಯೆಗಳು ಬಗೆಹರಿಯಬೇಕಾದರೆ ಕೊಡಗಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಇಲ್ಲಿಯವರನ್ನೇ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕು.
ಇದರಿಂದ ಕೊಡಗಿನ ಅಭಿವೃದ್ಧಿ ಕೆಲಸಗಳನ್ನು ಸಮರ್ಪಕವಾಗಿ ಮಾಡಲು ಅವಕಾಶವಾಗಲಿದೆ. ಆದುದರಿಂದ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕ ಆಗ್ರಹಿಸಿದೆ.