ಸೋಮವಾರಪೇಟೆ, ಆ. 11: ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನಲ್ಲಿ ಒಟ್ಟು 810 ಕ್ವಿಂಟಾಲ್ ಭತ್ತದ ಬಿತ್ತನೆ ಬೀಜಗಳಾದ ತುಂಗಾ, ತನು, ಬಿ.ಆರ್(ಬಾಂಗ್ಲಾ ರೈಸ್), ಏಆರ್-64, ಎಂ.ಟಿ.ಯು-1001, ಅತಿರ 40 ಕ್ವಿಂಟಾಲ್, ಹೈಬ್ರಿಡ್ ತಳಿಯಾದ ವಿಎನ್ಆರ್-2233 20 ಕ್ವಿಂಟಾಲ್, ಮತ್ತು 60 ಕ್ವಿಂಟಾಲ್ ಮುಸುಕಿನ ಜೋಳ ತಳಿಗಳಾದ ಗಂಗಾಕಾವೇರಿ ಜಿಕೆ-3059, ಸಿಪಿ-818, ಪೈನಿಯರ್-30 ಬಿ07 ತಳಿಗಳನ್ನು ಸಹಾಯಧನದಲ್ಲಿ ವಿತರಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಾಜಶೇಖರ್ ತಿಳಿಸಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ಭತ್ತದ ನಾಟಿ ಪ್ರಗತಿಯಲ್ಲಿದ್ದು, ಭತ್ತದ ಬೆಳೆ ಗುರಿ 10,000 ಹೆಕ್ಟೇರ್ ಆಗಿದೆ. ಇದರಲ್ಲಿ 2100 ಹೆಕ್ಟೇರ್ ನಾಟಿಯಾಗಿದ್ದು, ನಾಟಿ ಮಾಡುವ ಮೊದಲು ರೈತರ ಭತ್ತದ ಸಸಿಮಡಿಗಳಲ್ಲಿ ಬೆಂಕಿರೋಗ, ಕೊಳವೆಗಳು, ಥ್ರಿಫ್ಸ್ ಕೀಟಗಳ ಬಾಧೆ ಕಂಡುಬರುವ ಸಾಧ್ಯತೆ ಇರುವದರಿಂದ ನಾಟಿ ಮಾಡುವ ಒಂದು ವಾರದ ಮುನ್ನ ಮುಂಜಾಗ್ರತೆ ಕ್ರಮವಾಗಿ 10 ಲೀ ನೀರಿಗೆ 10 ಗ್ರಾಂ. ಬ್ಯಾವಿಸ್ಟೀನ್ ಮತ್ತು 20 ಮಿ.ಲೀ. ಕ್ಲೋರೋಫೈರಿ ಪಾಸನ್ನು ಸಿಂಪರಣೆ ಮಾಡುವ ಮೂಲಕ ರೋಗ ಮತ್ತು ಕೀಟಾಭಾದೆಯನ್ನು ತಡೆಗಟ್ಟಬಹುದು ಎಂದು ಮಾಹಿತಿ ನೀಡಿದ್ದಾರೆ.
ನಾಟಿ ಆಗಿ ಒಂದು ತಿಂಗಳ ನಂತರ 100ಲೀ ನೀರಿಗೆ 100 ಗ್ರಾಂ ಬ್ಯಾವಿಸ್ಟೀನ್ ಮತ್ತು 200 ಮಿ.ಲೀ. ಕ್ಲೋರೋಪೈರಿಫಾಸ್ನ್ನು ಮಿಶ್ರಣ ಮಾಡಿ ಒಂದು ಎಕರೆ ಪ್ರದೇಶಕ್ಕೆ ಸಿಂಪಡಿಸಬೇಕು. ಇದರಿಂದ ಬೆಂಕಿ ರೋಗ ಹಾಗೂ ಕೀಟಬಾಧೆಯನ್ನು ತಡೆಗಟ್ಟಬಹುದು. ಎಲ್ಲಾ ಹೋಬಳಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಬ್ಯಾವಿಸ್ಟೀನ್ ಮತ್ತು ಕ್ಲೋರೋಫೈರಿಪಾಸನ್ನು ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ ಎಂದು ಡಾ. ಹೆಚ್.ಎಸ್. ರಾಜಶೇಖರ್ ತಿಳಿಸಿದರು.