ಸಿದ್ದಾಪುರ, ಆ. 10: ಮಹಾಮಳೆಯ ಪ್ರವಾಹಕ್ಕೆ ಸಿಲುಕಿ ನದಿದಡದ ಮನೆಗಳು ಸೇರಿದಂತೆ ನೂರಾರು ಮನೆಗಳು ಕುಸಿದಿದ್ದು, ನದಿ ಪಾಲಾಗಿವೆ. ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ಜೀವನದಿ ಕಾವೇರಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಪ್ರವಾಹದಿಂದಾಗಿ ಸಿದ್ದಾಪುರದ ಕರಡಿಗೋಡು- ಗುಹ್ಯ ಹಾಗೂ ನೆಲ್ಯಹುದಿಕೇರಿಯ ಬೆಟ್ಟದಕಾಡು, ಕುಂಬಾರಗುಂಡಿ ಹಾಗೂ ಕೊಂಡಂಗೇರಿಯ ನದಿದಡದ ಮನೆಗಳು ಸೇರಿದಂತೆ ಸಾವಿರಾರು ಮನೆಗಳು ಜಲಾವೃತಗೊಂಡಿವೆ. ನೂರಕ್ಕೂ ಅಧಿಕ ಮನೆಗಳು ಪ್ರವಾಹಕ್ಕೆ ಸಿಲುಕಿ ಮುಳುಗಡೆಗೊಂಡಿದ್ದು, 100ಕ್ಕೂ ಅಧಿಕ ಮನೆಗಳು ಕುಸಿದು ನೆಲಸಮವಾಗಿವೆ. ಪ್ರವಾಹದಿಂದ ನದಿ ಪಾತ್ರಗಳು ಅಕ್ಷರಶಃ ದ್ವೀಪದಂತಾಗಿದೆ. ಕರಡಿಗೋಡಿನಲ್ಲಿ ನೂರಾರು ಮನೆಗಳು ಮುಳುಗಡೆಗೊಂಡಿದ್ದು, ಕೆಲವು ಮನೆಗಳು ನೀರು ಆವೃತಗೊಂಡು ಕಣ್ಣಿಗೆ ಕಾಣದಷ್ಟು ಎತ್ತರದಲ್ಲಿ ಮುಳುಗಿದೆ. 30ಕ್ಕೂ ಅಧಿಕ ಮನೆಗಳು ಪ್ರವಾಹಕ್ಕೆ ಸಿಲುಕಿ ಕುಸಿದಿದ್ದು, ಮನೆಗಳ ಸಾಮಗ್ರಿಗಳು ಬೆಲೆಬಾಳುವ ವಸ್ತುಗಳು ರಭಸದಿಂದ ಹರಿಯುವ ನೀರಿನಲ್ಲಿ ಕೊಚ್ಚಿ ಹೋಗುತ್ತಿವೆ. ನದಿದಡದ ನಿವಾಸಿಗಳ ಜೀವನ ದುಸ್ತರವಾಗಿದೆ. ಗುಹ್ಯ ಗ್ರಾಮದಲ್ಲಿ ಕೂಡ ಈ ಬಾರಿ ಕಂಡರಿಯದಷ್ಟು ಪ್ರವಾಹ ಬಂದು ಗುಹ್ಯ ಕಕ್ಕಟ್ಟುಕಾಡು ಗುಹ್ಯದ ಕೂಡುಗದ್ದೆ ವ್ಯಾಪ್ತಿಯಲ್ಲಿ ನೂರಾರು ಮನೆಗಳು ಜಲಾವೃತಗೊಂಡಿವೆ. 50ಕ್ಕೂ ಅಧಿಕ ಮನೆಗಳು ಕುಸಿದು ನೆಲಕಚ್ಚಿವೆ. ಹಠಾತ್ತನೆ ಏರಿಕೆಯಾದ ಪ್ರವಾಹದಿಂದಾಗಿ ಮನೆಯ ಮಂದಿ ತಾವು ತೊಟ್ಟಿದ್ದ ಬಟ್ಟೆಯಲ್ಲೇ ಮನೆಯಿಂದ ಓಡಿ ಬಂದು ತಮ್ಮ ಪ್ರಾಣವನ್ನು ರಕ್ಷಿಸಿಕೊಂಡಿದ್ದಾರೆ. ಆದರೆ, ಪ್ರವಾಹದ ನೀರು ಮನೆಯ ಒಳಕ್ಕೆ ನುಗ್ಗಿದ ಪರಿಣಾಮ ಮನೆಯ ವಸ್ತುಗಳು ನೀರುಪಾಲಾಗಿವೆ ಎಂದು ಬಡ ಮಹಿಳೆಯರು ಕಣ್ಣೀರು ಬಿಡುತ್ತಿದ್ದಾರೆ. ನದಿದಡದ ಸುತ್ತಮುತ್ತಲಿನ ಕಾಫಿ ತೋಟಗಳು, ಕೃಷಿ ಮಾಡಿದ ಗದ್ದೆಗಳು ಮುಳುಗಿವೆ.

ನೆಲ್ಯಹುದಿಕೇರಿ : ನೆಲ್ಯಹುದಿಕೇರಿ ಗ್ರಾ.ಪಂ.ಯ ವ್ಯಾಪ್ತಿಯಲ್ಲಿ 300ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ. ನೂರಾರು ಮನೆಗಳು ನೀರಿನಲ್ಲಿ ಮುಳುಗಿವೆ 50ಕ್ಕೂ ಅಧಿಕ ಮನೆಗಳು ಕುಸಿಯುತ್ತಿವೆ. ಪ್ರವಾಹದ ರಭಸದಿಂದಾಗಿ ಮುಳುಗಿರುವ ಹಾಗೂ ಜಲಾವೃತಗೊಂಡ ಮನೆಗಳ ನಿವಾಸಿಗಳಿಗೆ ತೆರಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನೆಲ್ಯಹುದಿಕೇರಿಯ ಪಟ್ಟಣದ ಸಮೀಪಕ್ಕೂ ಪ್ರವಾಹ ಹರಿದು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ನೆಲ್ಯಹುದಿಕೇರಿಯ ನದಿದಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರವಾಹ ಅಪಾಯದ ಮಟ್ಟದಲ್ಲಿದೆ.

ಆಗಿಂದಾಗ್ಗೆ ಮನೆಗಳು ಕುಸಿಯುತ್ತಿರುವ ಶಬ್ಧಗಳು ಕೇಳಿ ಬರುತ್ತಿದೆ ಎಂದು ಸಂತ್ರಸ್ತರು ದುಃಖಿಸುತ್ತಿದ್ದಾರೆ. ಸಮೀಪದಲ್ಲಿ ಇದ್ದಂತಹ ಕಾಫಿ ತೋಟಗಳಲ್ಲಿ ನರ್ಸರಿಯ ಗಿಡಗಳು ನೀರಿನಲ್ಲಿ ಮುಳುಗಿದ್ದು, ನಷ್ಟ ಸಂಭವಿಸಿದೆ. ಪ್ರವಾಹದಿಂದಾಗಿ ಜಲಾವೃತಗೊಂಡಿದ್ದ ಮನೆಗಳ ಗೋಡೆಗಳು ಬಿರುಕುಬಿಟ್ಟು ಹಿಂಬದಿ ಕುಸಿಯುತ್ತಿದೆ. ನೆಲ್ಯಹುದಿಕೇರಿಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ವಿವಿಧೆಡೆ ಪರಿಹಾರ ಕೇಂದ್ರ ತೆರೆಯಲಾಗಿದೆ. ಸಂತ್ರಸ್ತರಿಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಸಂತೋಷ್, ನೋಡಲ್ ಅಧಿಕಾರಿ ಕುಮಾರ್ ಕಂಬಳಿ- ಚಾಪೆ ವಿತರಿಸಿದರು.

ನೆಲ್ಯಹುದಿಕೇರಿಯ ವಿವಿಧೆಡೆಯ ಪರಿಹಾರ ಕೇಂದ್ರಗಳಲ್ಲಿ ಸಾವಿರಾರು ಮಂದಿ ನಿರಾಶ್ರಿತರು ಆಶ್ರಯ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಕಳೆದ ನಾಲ್ಕು ದಿನಗಳಿಂದ ಜಿ.ಪಂ. ಸದಸ್ಯೆ ಸುನಿತಾ ಮಂಜುನಾಥ್ ಭೇಟಿ ನೀಡಿ ಸಹಕರಿಸುತ್ತಿದ್ದಾರೆ. ಸ್ಥಳೀಯ ಗ್ರಾಮ ಪಂಚಾಯಿತಿ, ತಾ.ಪಂ. ಸದಸ್ಯರುಗಳು ಕೂಡ ಹಗಲಿರುಳು ಶ್ರಮಿಸುತ್ತಿದ್ದಾರೆ. ಮಳೆ ಇದೇ ರೀತಿ ಮುಂದುವರೆದಲ್ಲಿ ಮತ್ತಷ್ಟು ಮನೆಗಳು ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಪರಿಹಾರ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ತಹಶೀಲ್ದಾರ್ ಗೋವಿಂದರಾಜ್ ಹಾಗೂ ಕಂದಾಯ ಪರಿವೀಕ್ಷಕ ಮಧುಸೂದನ್ ಗ್ರಾಮಲೆಕ್ಕಿಗ ಸಂತೋಷ್, ನೋಡಲ್ ಅಧಿಕಾರಿ ಕುಮಾರ್ ತಿಳಿಸಿದರು.

ನಾಡಕಚೇರಿಯ ಕೆಲಸ ಸ್ಥಗಿತ

ಕಳೆದ 5 ದಿನಗಳಿಂದ ಸುರಿಯುತ್ತಿರುವ ಮಹಾಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಅಮ್ಮತ್ತಿ ಹೋಬಳಿ ನಾಡಕಚೇರಿಯಲ್ಲಿ ಯಾವದೇ ಸಾರ್ವಜನಿಕರ ಕೆಲಸ- ಕಾರ್ಯಗಳಯ ನಡೆಯುತ್ತಿಲ್ಲ. ಈ ಹಿಂದೆ ಕಚೇರಿಯಲ್ಲಿದ್ದ ಯು.ಪಿ.ಎಸ್.ಗಳು ಕಳೆದ ಕೆಲವು ತಿಂಗಳಿನಿಂದ ದುರಸ್ತಿ ಆಗಿದೆ. ಕಳೆದ ಒಂದು ತಿಂಗಳ ಹಿಂದೆ ಅಮ್ಮತ್ತಿಯಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೊಸ ಯುಪಿಎಸ್ ವ್ಯವಸ್ಥೆ ಕಲ್ಪಿಸಲಾಗುವದೆಂದು ತಿಳಿಸಿದ್ದರು. ಆದರೆ ಒಂದೂವರೆ ತಿಂಗಳು ಕಳೆದರೂ ಹೊಸ ಯುಪಿಎಸ್ ಬಾರದ ಹಿನ್ನೆಲೆಯಲ್ಲಿ ವಿದ್ಯುತ್ ಅವಲಂಬಿಸಿಕೊಂಡಿರುವ ನಾಡಕಚೇಯಲ್ಲಿ ವಿದ್ಯುತ್ ಇಲ್ಲದೆ ಜನ ಸಾಮಾನ್ಯರ ತುರ್ತು ಕೆಲಸಗಳು ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಹರಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

ಚೆನ್ನಯ್ಯನಕೋಟೆ ಸರ್ಕಾರಿ ಶಾಲೆಯ ಮೇಲೆ ಬೃಹತ್‍ಗಾತ್ರದ ಮರವೊಂದು ಬಿದ್ದ ಪರಿಣಾಮ ಹೆಂಚುಗಳು ಹಾಗೂ ಮರಗಳು ನಾಶಗೊಂಡಿವೆ. ಅದೃಷ್ಟವಶಾತ್ ಶಾಲೆಗೆ ರಜೆ ಇದ್ದ ಕಾರಣ ಯಾವದೇ ಅಪಾಯಗಳು ಸಂಭವಿಸಲಿಲ್ಲ. ಗುಹ್ಯ ಗ್ರಾಮದ ಕೂಡುಗದ್ದೆಯಲ್ಲಿ ವಾಸವಾಗಿರುವ ತನಿಯಪ್ಪ ಎಂಬವರ ಮನೆ ಕುಸಿದಿರುತ್ತದೆ. ಮಹಾಮಳೆಯಿಂದಾಗಿ ಸಿದ್ದಾಪುರದ ಸುತ್ತಮುತ್ತಲಿನ ನಿವಾಸಿಗಳು ಭಯಭೀತರಾಗಿದ್ದು, ಪ್ರವಾಹವು ನದಿದಡದ ಮನೆಗಳನ್ನು ಬಿಡದೇ ಅಪಾಯದಿಂದ ಸುರಿಯುತ್ತಿರುವದರಿಂದ ಸಿದ್ದಾಪುರದ ಪ್ರಾಚೀನ ಕಾಲದ ಸೇತುವೆ ಸುತ್ತಲಿನಲ್ಲಿ ನೀರು ಅಧಿಕವಾಗಿದ್ದು, ಸೇತುವೆಯು ಶಿಥಿಲಗೊಂಡು ಆತಂಕ ಸೃಷ್ಟಿಸಿದೆ.

ಜಿಲ್ಲಾಡಳಿತ ಭೇಟಿ

ಕೊಂಡಂಗೇರಿಯಲ್ಲಿ ಈ ಬಾರಿಯ ಮಹಾಮಳೆಗೆ ಸಿಲುಕಿ ನೂರಾರು ಮನೆಗಳು ಜಲಾವೃತಗೊಂಡಿವೆ. 20ಕ್ಕೂ ಅಧಿಕ ಮನೆಗಳು ಕುಸಿತಗೊಂಡಿರುತ್ತದೆ. ಕೊಂಡಂಗೇರಿ- ಮೂರ್ನಾಡು, ಕೊಂಡಂಗೇರಿ - ಸಿದ್ದಾಪುರ ರಸ್ತೆ ಸಂಪೂರ್ಣ ಬಂದ್ ಆಗಿದೆ. ಸಿದ್ದಾಪುರ ಹಾಗೂ ಕೊಂಡಂಗೇರಿಯ ಪರಿಹಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯ ಭೇಟಿ ನಿಡಿ, ಕಂದಾಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಅಲ್ಲದೆ, ನಿರಾಶ್ರಿತರ ಬಗ್ಗೆ ವಿಚಾರಿಸಿದರು.

ನೆಲ್ಯಹುದಿಕೇರಿಯ ಬೆಡ್ಡದಕಾಡು ರಸ್ತೆಯಲ್ಲಿರುವ ಧನೇಶ್ ಎಂಬವರ ಮನೆಯು ಕುಸಿದು ಬಿದ್ದಿದೆ. ಮನೆಯಲ್ಲಿದ್ದ ನಗದು ಹಾಗೂ ಮನೆ ಸಾಮಗ್ರಿಗಳು ನೀರು ಪಾಲಾಗಿವೆ. ವಾಸು ಎಂಬವರ ಮನೆಯು ಸಂಪೂರ್ಣ ಜಲಾವೃತಗೊಂಡಿದ್ದು, ಅವರಿಗೆ ಸೇರಿದ 2 ಕಾರುಗಳು ನೀರಿನಲ್ಲಿ ಮುಳುಗಿರುತ್ತದೆ. ಹಲವಾರು ಮಂದಿಯ ವಾಹನಗಳು ನೀರಿನಲ್ಲಿ ಸಿಲುಕಿರುತ್ತದೆ,

-ಚಿತ್ರ ವರದಿ : ವಾಸು.