ಕೂಡಿಗೆ, ಆ. 10 ಕೂಡುಮಂಗಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆನೆಕೆರೆ ಮತ್ತು ಚೋಳನಕೆರೆ ಒತ್ತುವರಿ ಆಗಿದ್ದು, ಇವುಗಳನ್ನು ತೆರವುಗೊಳಿಸಲು ಕಂದಾಯ ಇಲಾಖೆ ಮುಂದಾಗಬೇಕು ಎಂದು ಇಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆನೆಕೆರೆ ಮತ್ತು ಚೋಳನಕೆರೆಯು ಪುರಾತನ ಹಿನ್ನೆಲೆಯುಳ್ಳ ಕೆರೆಯಾಗಿದ್ದು, ನೂರಾರು ಎಕರೆ ಪ್ರದೇಶಗಳಲ್ಲಿ ಬೇಸಾಯ ಮಾಡಲು ಅನುಕೂಲವಾದ ಕೆರೆಯಾಗಿದೆ. ಅಲ್ಲದೆ, ಕೆರೆಯು ಮಳೆಯಿಂದ ತುಂಬಿದಾಗ ಜಲಮೂಲಗಳಲ್ಲಿ ನೀರು ಭತ್ತಿಹೋಗ ದಂತೆ ಅನುಕೂಲವಾಗುತಿತ್ತು. ದನಕರುಗಳಿಗೆ ವರ್ಷಪೂರ್ತಿ ನೀರು ಕುಡಿಯಲು ಸಿಗುತ್ತಿತ್ತು. ಆದರೆ, 50ಕ್ಕೂ ಹೆಚ್ಚು ಎಕರೆ ಪ್ರದೇಶವಾಗಿರುವ ಕೆರೆಯು ಇದೀಗ ಕೇವಲ 10 ಎಕರೆ ಪ್ರದೇಶವಾಗಿ ಪರಿವರ್ತನೆಯಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಗಳಲ್ಲಿ ಮತ್ತು ಗ್ರಾಮ ಸಭೆಗಳಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕಂದಾಯ ಇಲಾಖೆಗೆ ಪ್ರಸ್ತಾವನೆ ಕಳುಹಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯವರು ಸರ್ವೇ ಇಲಾಖೆಯವರಿಗೆ ಕಡತಗಳನ್ನು ವರ್ಗಾಯಿಸಿ, ಸ್ಥಳಕ್ಕೆ ಬಂದು ಸರ್ವೇ ಕಾರ್ಯ ಮುಗಿಸಿ ಅಂದಾಜು ಒಂದು ವರ್ಷವೇ ಕಳೆದಿದೆ. ಆದರೆ, ಇದುವರೆಗೂ ಯಾವದೇ ಒತ್ತುವರಿ ತೆರವಿಗೆ ಕಾರ್ಯೋನ್ಮುಖರಾಗಿಲ್ಲ. ಗ್ರಾಮ ಸಭೆಗಳಲ್ಲಿ ಆನೆಕೆರೆ ಮತ್ತು ಚೋಳನಕೆರೆಯ ಒತ್ತುವರಿ ತೆರವಿಗೆ ಮತ್ತು ಅಭಿವೃದ್ಧಿ ಪಡಿಸಲು ಹೂಳು ತೆಗೆಸುವಿಕೆಯ ಮೂಲಕ ನೀರಿನ ಸಂಗ್ರಹಕ್ಕೆ ವಿವಿಧ ಕ್ರಿಯಾಯೋಜನೆ ಗಳನ್ನು ತಯಾರಿಸಲಾಗಿದೆ.

ಕ್ರಿಯಾಯೋಜನೆ ಅನುಷ್ಠಾನ ಗೊಳ್ಳಲು ಕಂದಾಯ ಇಲಾಖೆಯಿಂದ ಸಮರ್ಪಕ ಜಾಗ ಗುರುತಿಸುವಿಕೆ ಆದ ಕಾರಣ ಯಾವದೇ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಜಿಲ್ಲಾ ಪಂಚಾಯ್ತಿ ಮತ್ತು ಸರ್ಕಾರ ಕೆರೆಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದೆ. ಗ್ರಾಮ ಪಂಚಾಯ್ತಿ ವತಿಯಿಂದ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೆರೆಗಳ ಅಭಿವೃದ್ಧಿಗೆ ಹಣವನ್ನು ಕಾದಿರಿಸಿ, ಕಾಮಗಾರಿಯನ್ನು ಕೈಗೊಳ್ಳುವಂತೆ ಗ್ರಾ.ಪಂ ಸದಸ್ಯರು ಮಾಸಿಕ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸುತ್ತಿದ್ದಾರೆ ಹೊರತು ಯಾವದೇ ರೀತಿಯ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ಗಮನಹರಿಸಿ ಸಾರ್ವಜನಿಕರಿಗೆ ಮತ್ತು ರೈತರಿಗೆ ಸದುಪಯೋಗವಾಗಲಿರುವ ಈ ಕೆರೆಗಳ ಒತ್ತುವರಿ ತೆರವುಗೊಳಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ