ಶನಿವಾರಸಂತೆ, ಆ. 10: ಪಟ್ಟಣದ ಜನತೆ ಶುಕ್ರವಾರ ವರಮಹಾಲಕ್ಷ್ಮೀ ವ್ರತಾಚರಣೆ ಹಾಗೂ ಪೂಜೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಮನೆಗಳಲ್ಲಿ ಕಳಸಕ್ಕೆ ಲಕ್ಷ್ಮೀಯ ಬೆಳ್ಳಿಯ ಮುಖವಾಡವಿರಿಸಿ, ರೇಷ್ಮೆ ಸೀರೆ ಉಡಿಸಿ, ಬಾಳೆಗಿಡ, ಮಾವಿನೆಲೆ ತೋರಣ ಕಟ್ಟಿ, ಕಮಲ, ಕನಕಾಂಬರ, ಮಲ್ಲಿಗೆ, ಸೇವಂತಿಗೆ ಹೂಗಳೊಂದಿಗೆ ಚಿನ್ನಾಭರಣ ತೊಡಿಸಿ ವಿಶೇಷವಾಗಿ ಅಲಂಕರಿಸಿದ್ದರು. ಮನೆಯಂಗಳದಲ್ಲಿ ಸುಂದರ ರಂಗೋಲಿ ಬಿಡಿಸಿದ್ದರು.

ಲಕ್ಷ್ಮೀ ದೇವಿಗೆ ಇಷ್ಟವಾದ ಬೇಳೆ ಹೋಳಿಗೆ, ಪಾಯಸ, ಕಜ್ಜಾಯ ಇತ್ಯಾದಿ ವಿಶೇಷ ಭಕ್ಷ್ಯಗಳನ್ನು ನೈವೇದ್ಯ ಮಾಡಿ ಬ್ರಾಹ್ಮೀ ಮುಹೂರ್ತದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು.

ಮನೆಗೆ ಮಹಿಳೆಯರು, ಹೆಣ್ಣುಮಕ್ಕಳನ್ನು ಆಹ್ವಾನಿಸಿ ಹೂ, ಗಾಜಿನ ಬಳೆ, ಅರಸಿನ- ಕುಂಕುಮ, ವೀಳ್ಯದೆಲೆ- ಅಡಿಕೆ, ಹಣ್ಣು ಜತೆ ಉಡುಗೊರೆ ನೀಡಿ, ಸಿಹಿ ಹಂಚಿ ಪರಸ್ಪರ ಶುಭ ಕೋರಿದರು.

ಪಟ್ಟಣದ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ, ಶ್ರೀರಾಮ ಮಂದಿರ, ವಿಜಯ ವಿನಾಯಕ, ಬೀರಲಿಂಗೇಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿದವು.