ಮಡಿಕೇರಿ, ಆ. 10: ಕೊಡಗಿನ ವಾಣಿಜ್ಯ ನಗರಿ ಕುಶಾಲನಗರ ತನ್ನ ಭವಿಷ್ಯದ ಭರವಸೆಯನ್ನು ಕಳೆದುಕೊಂಡಿದೆ. ಕಳೆದ ಬಾರಿ ಹಾರಂಗಿ ಬಿಡುಗಡೆ ನೀರು ಹಾಗೂ ಕಾವೇರಿ ನದಿ ಹರಿವಿನ ಒಗ್ಗೂಡುವಿಕೆಯಿಂದ ಸಂಭವಿಸಿದ್ದ ಜಲಪ್ರಳಯಕ್ಕೆ ಕುಶಾಲನಗರ ತತ್ತರಿದೆÉ. ಈ ಬಾರಿ ತಲಕಾವೇರಿ ಮೂಲದಿಂದ ಹರಿದು ಬಂದ ನೀರಿನ ರಭಸಕ್ಕೆ ತೊಂದರೆಗೀಡಾಗಿ ಸಮಸ್ಯೆಗಳು ಇತಿಹಾಸ ನಿರ್ಮಾಣ ಮಾಡಿವೆ. ಕೊಡಗಿನಲ್ಲಿ ನಿವೃತ್ತಿ ಜೀವನಕ್ಕೆ ಸೂಕ್ತವಾದ ಊರು ಎಂದು ಹೆಮ್ಮ ಪಡುತ್ತಿದ್ದ ಕುಶಾಲನಗರ ಇದೀಗ ನರಕ ಸದೃಶ ತಾಣವಾಗಿ ಮಾರ್ಪಟ್ಟು, ಹಲವು ಬಡಾವಣೆಗಳಲ್ಲಿ ಖಾಯಂ ಆಗಿ ಮನೆಗಳನ್ನು ಬಿಟ್ಟು ತೆರಳುವ ಅನಿವಾರ್ಯತೆಯ ನೋವಿನಲ್ಲಿದ್ದಾರೆ.ಕಳೆದ ವರ್ಷದಿಂದ ಆರಂಭವಾಗಿದ್ದ ನೀರಿನ ಮೇಲ್ ಹರಿಯುವಿಕೆ, ಇದೀಗ ತಾವರೆಕೆರೆಯಲ್ಲದೆ ಗುಡ್ಡೆಹೊಸೂರು ವ್ಯಾಪ್ತಿಗೂ ಹಮ್ಮಿದ್ದರೆ, ಮತ್ತೊಂದು ಬದಿಯಲ್ಲಿ ಕೊಪ್ಪವನ್ನೂ ಆಕ್ರಮಿಸಿಕೊಂಡಿದೆ.ಕಳೆದ ಬಾರಿಯ ಮಳೆ ಅವಾಂತರದ ಪೆಟ್ಟು ಮಾಗುವ ಮುನ್ನವೇ ಈ ಬಾರಿ ಕೂಡ ಆತಂಕದ ಬದುಕನ್ನು ಎದುರಿಸಬೇಕಾದ ಕುಶಾಲನಗರದ ಹಲವು ಬಡಾವಣೆಗಳ ನಿವಾಸಿಗಳು, ವ್ಯಾಪಾರಸ್ಥರು, ನಿವೃತ್ತ ಜೀವನ ನಡೆಸುತ್ತಿರುವರು, ಭವಿಷ್ಯದ ಭರವಸೆಯನ್ನು ಕಳೆದುಕೊಂಡಿದ್ದಾರೆ.
‘ಕುಶಾಲನಗರ ಇದೀಗ ಮುಳುಗು ನಗರವಾಗಿದೆ. ಪರಿಸ್ಥಿತಿ ಭಯಾನಕವಾಗಿದೆ’ ಎಂದು ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ತೀವ್ರ ಆತಂಕ ವ್ಯಕ್ತಪಡಿಸಿದರು.
(ಮೊದಲ ಪುಟದಿಂದ) ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಕಳೆದ ವರ್ಷ ಹಾರಂಗಿ ಜಲಾಶಯದಿಂದ ಬಿಡುಗಡೆಯಾದ ನೀರು ನಗರವನ್ನು ಮುಳುಗಿಸಿದ್ದರೆ ಇದೀಗ ಕಾವೇರಿ ಭಾಗಮಂಡಲ ಮೊದಲಾದೆಡೆಗಳಿಂದ ಉಕ್ಕಿ ಹರಿದು ಕುಶಾಲನಗರದಲ್ಲಿ ಪ್ರವಾಹÀವುಂಟು ಮಾಡಿದೆ ಎಂದು ಅವರು ನುಡಿದರು.
ಇಂದಿನ ಕುಶಾಲನಗರ ಸ್ಥಿತಿ ಹೇಗಿದೆಯೆಂದರೆ ಹಾರಂಗಿರಸ್ತೆ ಹೊರತುಪಡಿಸಿ ಇತರ ಎಲ್ಲ ರಸ್ತೆಗಳು ಬಂದ್ ಆಗಿವೆ. ನಗರದಲ್ಲಿ ವಹಿವಾಟು ಪೂರ್ಣ ಸ್ಥಗಿತಗೊಂಡಿದೆ. ಸುಮಾರು ಒಂದು ಸಾವಿರ ಮನೆಗಳು ಮುಳುಗಡೆಯಾಗಿವೆ ಎಂದು ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್ ‘ಶಕ್ತಿ’ಗೆ ತಿಳಿಸಿದರು. ಎರಡನೇ ಬಾರಿಗೆ ಕುಶಾಲನಗರದ ಜನ ತತ್ತರÀಗೊಂಡಿದ್ದಾರೆ. ಇಂದಿನ ಸ್ಥಿತಿಯಲ್ಲಿ ಕರ್ನಾಟಕದಾದ್ಯಂತ ಅನಾಹುತವಾಗಿರುವದರಿಂದ ಜಿಎಸ್‍ಟಿಗೆ ವಿನಾಯಿತಿ, ಸಾಲದ ಮರು ಪಾವತಿ ಅವಧಿ ವಿಸ್ತರಣೆ, ಬಡ್ಡಿ ವಿನಾಯತಿ ಅಗತ್ಯವಿದೆ ಎಂದು ಮನವಿ ಮಾಡಿದರು,
ಕುಶಾಲನಗರದ ಕಾವೇರಿತಪ್ಪಲಿನ ಬಹುತೇಕ ಬಡಾವಣೆಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿ ಮುಳುಗಿವೆ. ಕೊಪ್ಪ ಸೇತುವೆ ನೀರಿನ ಹರಿವಿನ ರಭಸಕ್ಕೆ ಅಪಾಯದ ಸ್ಥಿತಿಯಲ್ಲಿದೆ. ಸೇತುವೆಯ ಮೇಲೆ ವಾಹನ ಸಂಚಾರ ಸ್ತಬ್ಧಗೊಳಿಸಲಾಗಿದೆ. ಕೊಪ್ಪ ಸೇತುವೆ ಬಳಿಯಿದ್ದ ಮೊಬೈಲ್ ಟವರ್ ತಾಂತ್ರಿಕ ಕೋಣೆಯ ಬಾಕ್ಸ್ ತೇಲುತ್ತಿದೆ. ಸಾಯಿ ಬಡಾವಣೆಯ ಮುಖ್ಯದ್ವಾರಕ್ಕೆ ಕೆಲವೇ ಅಡಿಗಳಷ್ಟೇ ನೀರು ಬರುವದು ಬಾಕಿ ಇದೆ. ಬಸಪ್ಪ ಬಡಾವಣೆಯಲ್ಲಿನ ಮುದ್ದಪ್ಪ ಅವರ ಮನೆಯ ಬಳಿಗೆ ನೀರು ಬಂದಿದೆ.
ವಕೀಲ ನಾಗೇಂದ್ರ ಬಾಬು ಅವರ ಮನೆಯ ರಸ್ತೆಯಲ್ಲಿ ಮೀನು ಪ್ರವೀಣ್ ಮನೆಯವರೆಗೆ ನೀರು ಬಂದಿದೆ. ಮಾರುಕಟ್ಟೆ ರಸ್ತೆಯ ಭುವನ್ ಸ್ಟೋರ್ ಸಂಪೂರ್ಣ ಜಲಾವೃತವಾಗಿದೆ. ಮಾರುಕಟ್ಟೆ ರಸ್ತೆಯ ಉದ್ದಕ್ಕೂ ಕಾವೇರಿ ನದಿ ನೀರು ನುಸುಳಲು ಕೆಲವೇ ಅಡಿ ಬಾಕಿ ಇದೆ. ಒಟ್ಟಾರೆ ಕುಶಾಲನಗರ ಮುಳುಗುತ್ತಿದೆ. ಇವತ್ತು ಕೂಡ ಮಳೆ ಎಡಬಿಡದೇ ಸುರಿದರೆ ಕುಶಾಲನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಲಿದೆ ಎಂದು ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ.
ಹೊಟೇಲ್ ಉದ್ಯಮಿ ದಾವೂದ್ ಕುಶಾಲನಗರದ ಜನರ ದುಸ್ಥಿತಿ ಕುರಿತು ವಿವರಿಸಿದರು. ತಮ್ಮ ಹೊಟೇಲ್ ಅನ್ನು ನೀರಿನ ನಡುವೆ ಬಿಟ್ಟು ಸಂಬಂಧಿಗಳ ಮನೆಯಲ್ಲಿ ಆಶ್ರಯ ಪಡೆದಿರುವ ದಾವೂದ್ ಅವರ ಪ್ರಕಾರ ಕೊಪ್ಪ ರಸ್ತೆಯಲ್ಲಿ ಬೃಹತ್ ರೆಸಾರ್ಟ್‍ಗಳು ಕೂಡ ನೀರಿನಲ್ಲಿ ಮುಳುಗಡೆಯಾಗಿವೆ. ಮಸೀದಿ, ಚರ್ಚ್‍ಗಳು, ಮುತ್ತಪ್ಪ ದೇವಾಲಯ ಕೂಡ ನೀರಿನಿಂದಾವೃತವಾಗಿವೆ. ಕೊಪ್ಪ ರಸ್ತೆಯಲ್ಲಿ 7 ಅಡಿಗಳಷ್ಟು ನೀರುತುಂಬಿದೆÉ. ಯೋಗಾನಂದ, ಇಂದಿರಾ, ಕುವೆಂಪು ಬಡಾವಣೆಯ ಮನೆಗಳು ಹಾಗೂ ಪಾಲಿಟೆಕ್ನಿಕ್ ಕಟ್ಟಡ ಕೂಡ ಜಲಾವೃತಗೊಂಡಿದೆ. ಈ ವಿಭಾಗದ ಜನ ಈಗಿನ ನೈಸರ್ಗಿಕ ವಿಕೋಪದಿಂದ ಮತ್ತೆ ಪುನಶ್ಚೇತನ ಪಡೆಯುವದೇ ಕಷ್ಟ ಸಾಧ್ಯವೆನಿಸಿದೆ ಎಂದು ದಾವೂದ್ ಆತಂಕ ವ್ಯಕ್ತಪಡಿಸಿದರು.