ಮಡಿಕೇರಿ, ಆ. 10: ಹಾಲುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಂಡಂಗೇರಿ ಗ್ರಾಮ ಈ ಗ್ರಾಮದ ಒತ್ತಿನಲ್ಲಿರುವ ಮೂರ್ನಾಡು ಗ್ರಾ.ಪಂ.ಗೆ ಸೇರಿದ ಐಕೊಳ ಮಾನಿ ವಿಭಾಗದಲ್ಲಿ ಕಾವೇರಿ ಪ್ರವಾಹದಿಂದಾಗಿ ಅಲ್ಲಿನ ಸನ್ನಿವೇಶ ಭಯಾನಕವಾಗಿದೆ. ಕೊಂಡಂಗೇರಿ ಸುತ್ತಮುತ್ತಲಿನ 300ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಈ ಪೈಕಿ ಹಲವು ಮನೆಗಳು ನೀರಿನಲ್ಲಿ ಕೊಚ್ಚಿ ಹೋಗಿರುವದಾಗಿ ವರದಿಯಾಗಿದೆ. ಸನಿಹದ ಐಕೊಳದಲ್ಲೂ ಸುಮಾರು 27ಕ್ಕೂ ಅಧಿಕ ಮನೆಗಳು ಮುಳುಗಡೆಗೊಂಡಿದ್ದು, ಈ ಪ್ರದೇಶದಲ್ಲಿ ಮನೆಗಳು ಇದ್ದ ಕುರುಹೇ ಕಂಡುಬರುತ್ತಿಲ್ಲ ಎಂದು ಸ್ಥಳೀಯರಾದ ಸುಕೂರ್ ಅವರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.ಕಳೆದ ಮೂರು ದಿನಗಳಿಂದಲೂ ಇಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಸ್ಥಳೀಯ ಮದರಸ ಹಾಗೂ ಕೊಂಡಂಗೇರಿ ಶಾಲೆಯಲ್ಲಿ
(ಮೊದಲ ಪುಟದಿಂದ) ನೂರಾರು ಮಂದಿ ಆಶ್ರಯ ಪಡೆದಿದ್ದಾರೆ. ಪ್ರವಾಹ ಪರಿಸ್ಥಿತಿಯಿಂದ ಅಪಾಯಕ್ಕೆ ಸಿಲುಕಿದ್ದ ಜನತೆಯನ್ನು ಸ್ಥಳೀಯರೇ ಪ್ರಾಣಾಪಾಯ ಲೆಕ್ಕಿಸದೆ ತೆಪ್ಪದ ಮೂಲಕ ಸಾಗಿಸುವ ಪ್ರಯತ್ನ ನಡೆಸಿದ್ದಾರೆ. ಪರಿಸ್ಥಿತಿ ಇಷ್ಟು ಬಿಗಡಾಯಿಸಿದ್ದರೂ ಇಲ್ಲಿಗೆ ಯಾವದೇ ರಕ್ಷಣಾ ಪಡೆಗಳಿಂದ ಸಹಾಯ ದೊರೆತಿಲ್ಲ. ಜಿಲ್ಲಾಡಳಿತದ ಪ್ರಮುಖರು, ಜನಪ್ರತಿನಿಧಿಗಳು ಕೂಡ ಇತ್ತ ಬಂದಿಲ್ಲ. ಭಯಭೀತರಾಗಿರುವ ಜನತೆ ತೀರಾ ಅತಂತ್ರತೆಯಲ್ಲಿದ್ದಾರೆ. ಸುಮಾರು ನೂರು ಎಕರೆಯಷ್ಟು ತೋಟ - ಗದ್ದೆಗಳು ಜಲಾವೃತಗೊಂಡಿವೆ. ಜನತೆ ಉಟ್ಟಬಟ್ಟೆಯಲ್ಲಿ ಮದರಸ ಹಾಗೂ ಶಾಲೆಗಳಲ್ಲಿ ಪ್ರಸ್ತುತ ಆಶ್ರಯಪಡೆದಿದ್ದಾರೆ.
ಕೊಪ್ಪ, ಅಮ್ಮತ್ತಿ ರಸ್ತೆ, ಕೊಂಡಂಗೇರಿ ಜಂಕ್ಷನ್ ಸೇರಿದಂತೆ ವಿವಿಧೆಡೆಯಲ್ಲಿನ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದೆ. ಕೊಂಡಂಗೇರಿ - ಸಿದ್ದಾಪುರ ಹಾಗೂ ಮೂರ್ನಾಡು ರಸ್ತೆಯಲ್ಲಿ ನೀರು ತುಂಬಿ ಸಂಪೂರ್ಣ ಬಂದ್ ಆಗಿದೆ. ವೃದ್ಧರು ಮಕ್ಕಳು ಸೇರಿದಂತೆ 500 ಕ್ಕೂ ಹೆಚ್ಚು ಮಂದಿ ಸರಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.