ಗೋಣಿಕೊಪ್ಪಲು, ಆ. 10: ಕಳೆದ ಐದು ದಿನಗಳಿಂದ ಒಂದೇ ಸಮನೆ ಸುರಿದ ಮಳೆರಾಯ ಶನಿವಾರ ಕೊಂಚ ಮಟ್ಟಿಗೆ ಬಿಡುವು ನೀಡಿದ್ದ.
ಕಳೆದ ಎರಡು ದಿನಗಳಿಂದ ಸಂಪರ್ಕ ಕಡಿತಗೊಂಡಿದ್ದ ಗೋಣಿಕೊಪ್ಪ, ಪೊನ್ನಂಪೇಟೆ ಹಾಗೂ ಗೋಣಿಕೊಪ್ಪ ಪಾಲಿಬೆಟ್ಟ ರಸ್ತೆ ಮಾರ್ಗ ತೆರೆದುಕೊಂಡಿದೆ.
ಗೋಣಿಕೊಪ್ಪಲುವಿನ ಕೀರೆಹೊಳೆ ಹಾಗೂ ಬೈಪಾಸ್ ರಸ್ತೆಯ ತೋಡಿನಿಂದ ಉಕ್ಕಿ ಹರಿದ ನೀರು ಎರಡು ರಸ್ತೆಯಲ್ಲಿ ಹರಿಯಲಾ ರಂಬಿಸಿದ ಹಿನ್ನೆಲೆಯಲ್ಲಿ ಈ ರಸ್ತೆ ಮಾರ್ಗವನ್ನು ಮುಚ್ಚಲಾಗಿತ್ತು.ಗೋಣಿಕೊಪ್ಪಲುವಿನಿಂದ ದ.ಕೊಡಗಿನ ವಿವಿಧ ಗ್ರಾಮೀಣ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್‍ಗಳು ರಸ್ತೆ ಸುರಕ್ಷಿತ ಇಲ್ಲದ ಕಾರಣ ಎರಡು ದಿನಗಳಿಂದ ತನ್ನ ಒಡಾಟವನ್ನು ರದ್ದುಗೊಳಿಸಿದ್ದವು. ನಗರದಲ್ಲಿ ಬೇಕರಿ ಹೊರತುಪಡಿಸಿ ಇನ್ನಿತರ ಅಂಗಡಿ ಮುಂಗಟ್ಟು ತೆರೆದಿದ್ದವು. ವಿದ್ಯುತ್ ಪೂರೈಕೆ ಇಲ್ಲದ ಕಾರಣ ಕುಡಿಯುವ ನೀರಿಗಾಗಿ ಜನತೆ ಕಷ್ಟ ಪಡುತ್ತಿದ್ದರು.
ಪರಿಹಾರ ಕೇಂದ್ರದಲ್ಲಿ ಕುಡಿಯಲು ಹಾಗೂ ಸಂತ್ರಸ್ತರಿಗೆ ಊಟ ತಯಾರು ಮಾಡಲು ನೀರು ಇಲ್ಲದೆ ಪಂಚಾಯಿತಿ ಟ್ಯಾಂಕರ್ ಮೂಲಕ ಸ್ಥಳೀಯ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಅವರ ಮನೆಯ ಬೋರ್‍ವೆಲ್‍ನಿಂದ ನೀರನ್ನು ಸರಬರಾಜು ಮಾಡಲಾಯಿತು.
ಪರಿಹಾರ ಕೇಂದ್ರದಲ್ಲಿ ಕಾವೇರಿ ಕಾಲೇಜಿನ
(ಮೊದಲ ಪುಟದಿಂದ) ಎನ್.ಎನ್.ಎಸ್. ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು. ನಗರದಲ್ಲಿ ಬ್ಯಾಂಕ್‍ಗಳಿಗೆ ರಜೆ ಇದ್ದ ಕಾರಣ ಹಣ ಪಡೆಯುವ ಸಲುವಾಗಿ ಆಗಮಿಸಿದ ಗ್ರಾಮೀಣ ಪ್ರದೇಶದ ಜನರು ಕಷ್ಟ ಪಡುತ್ತಿದ್ದರು. ಎ.ಟಿ.ಎಂ. ಕೇಂದ್ರಗಳು ಸಂಪೂರ್ಣವಾಗಿ ಮುಚ್ಚಿದ್ದವು. ನಾಗರಿಕರು ತಮ್ಮ ಮೊಬೈಲ್‍ಗಳನ್ನು ಚಾರ್ಜ್ ಮಾಡಿಕೊಳ್ಳಲು ಅಂಗಡಿ, ಮುಂಗಟ್ಟುಗಳಲ್ಲಿ ಸರತಿ ಸಾಲಿನಲ್ಲಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ 6ನೇ ವಿಭಾಗದಲ್ಲಿ ಕೀರೆಹೊಳೆ ತುಂಬಿ ಬಂದ ಹಿನ್ನೆಲೆಯಲ್ಲಿ 9 ಕುಟುಂಬಗಳ 21 ಜನರಿಗೆ ಪತ್ರಕರ್ತ ವಿ.ವಿ. ಅರುಣ್ ಕುಮಾರ್ ತನ್ನ ವಾಸದ ಮನೆಯಲ್ಲಿ ಸಂತ್ರಸ್ತರಿಗೆ ಉಳಿದುಕೊಳ್ಳಲು ಅವಕಾಶ ಕಲ್ಪಿಸಿದ್ದಾರೆ. ಕೆಲವು ದಾನಿಗಳು ಇವರಿಗೆ ಕಂಬಳಿ, ಹೊದಿಕೆ ವಿತರಣೆ ಮಾಡಿದರು.
1ನೇ ವಿಭಾಗದ ನೇತಾಜಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೆಲವು ಉದ್ಯೋಗಿಗಳು ಮನೆ ಖಾಲಿ ಮಾಡಿ ಸುರಕ್ಷಿತ ಬಡಾವಣೆಯಲ್ಲಿರುವ ಬಾಡಿಗೆ ಮನೆಗಳಿಗೆ ಸ್ಥಳಾಂತರವಾಗಿದ್ದಾರೆ.
ಕಳೆದ ನಾಲ್ಕು ದಿನಗಳ ಹಿಂದೆ ಕೂಲಿ ಕೆಲಸಕ್ಕಾಗಿ ಆಗಮಿಸಿದ ತಮಿಳುನಾಡಿನ ಒಂದು ಕುಟುಂಬವು ನಗರದ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು ಶನಿವಾರ ಈ ಕುಟುಂಬಕ್ಕೆ ಸ್ಥಳೀಯ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಕೆ.ಪಿ. ಜಲೀಲ್ ಅವರು ಆರ್ಥಿಕ ಸಹಾಯ ನೀಡುವ ಮೂಲಕ ಈ ಕುಟುಂಬವನ್ನು ತಮಿಳುನಾಡಿಗೆ ಕಳುಹಿಸಿಕೊಡಲಾಯಿತು.
ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತಿದ್ದ ನಗರದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.
ಮಳೆ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ಚೆಸ್ಕಾಂ ಸಿಬ್ಬಂದಿಗಳು ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮಾಡಲು ಶ್ರಮಿಸುತ್ತಿದ್ದರು. ಮುಂಜಾನೆ ವೇಳೆ ದಿನ ಪತ್ರಿಕೆ ಪಡೆಯಲು ಓದುಗರು ನಗರಕ್ಕೆ ಆಗಮಿಸಿದರಾದರೂ ಯಾವದೇ ಪತ್ರಿಕೆ ಸರಬರಾಜು ಇಲ್ಲದ ಕಾರಣ ವಾಪಸು ತೆರಳಿದರು. ಪ್ರತಿನಿತ್ಯ ಕೂಡಿಗೆಯಿಂದ ನಗರಕ್ಕೆ ಸರಬರಾಜುವಾಗುವ ಹಾಲು ವಿತರಣೆ ಆಗಲಿಲ್ಲ.
ಮೋಡ ಮುಸುಕಿದ್ದು ಮಳೆರಾಯ ಮತ್ತೇನು ಮಾಡಿಯಾನು.? ಎಂದು ಜನತೆ ಮಾತನಾಡುತ್ತಿದ್ದಾರೆ. ಚಿತ್ರ, ವರದಿ- ಹೆಚ್.ಕೆ.ಜಗದೀಶ್