ಮಡಿಕೇರಿ, ಆ.10: ಇದೇ ತಾ. 3 ರಿಂದ ಅಡಿಯಿಟ್ಟಿರುವ ಆಶ್ಲೇಷ ಮಳೆಯ ಎಂಟೇ ದಿನಗಳ ಆರ್ಭಟಕ್ಕೆ ಕೊಡಗಿನ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಜೀವನದಿ ಕಾವೇರಿ ಹೊಳೆದಂಡೆಯ ಉದ್ದಕ್ಕೂ ಎಲ್ಲೆಡೆಯ ಹೋಗಿದ್ದಾರೆ. ಜೀವನದಿ ಕಾವೇರಿ ಹೊಳೆದಂಡೆಯ ಉದ್ದಕ್ಕೂ ಎಲ್ಲೆಡೆಯ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ಆಸರೆ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾ.ಪಂ. ವ್ಯಾಪ್ತಿಯ ತೋರ ಗ್ರಾಮದ ಕೊರ್ತಿಗಾಡು ಎಂಬಲ್ಲಿ ಭೂ ಸಮಾಧಿಯಾಗಿರುವ ಎಂಟು ಮಂದಿಗಾಗಿ ಇಂದು ಕೂಡ ಶೋಧ ಮುಂದುವರಿದಿದೆ.ಜಂಟಿ ಕಾರ್ಯಾಚರಣೆ : ಇಂದು ಬೆಳಿಗ್ಗೆಯಿಂದಲೇ ತೋರದಲ್ಲಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಎನ್.ಡಿ.ಆರ್.ಎಫ್., ಅಗ್ನಿಶಾಮಕದಳ, ಸೇನಾ ತುಕಡಿ ಜಂಟಿ ಕಾರ್ಯಾಚರಣೆ ಮೂಲಕ ಕಣ್ಮರೆಯಾಗಿರುವ ಮಂದಿ ಭೂ ಕುಸಿತ ಪ್ರದೇಶದಲ್ಲಿ; ಸಮಾಧಿಯಾಗಿರ ಬಹುದೆಂದು ಊಹಿಸಿರುವ ಮಣ್ಣಿನಡಿ ಹುಡುಕಾಟ ನಡೆಸುತ್ತಿದ್ದು, ಜೆಸಿಬಿ ಹಾಗೂ ಇಟಾಚಿ ಯಂತ್ರ ಬಳಕೆಯೊಂದಿಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.ದೊರಕದ ಸುಳಿವು : ದುರ್ಘಟನೆ ಸಂಭವಿಸಿರುವ ಪ್ರದೇಶದಲ್ಲಿ ಹತ್ತಾರು ಎಕರೆ ಕಾಫಿ ತೋಟ ಧ್ವಂಸಗೊಂಡು ಕಣ್ಮರೆಯಾಗಿರುವ ಕುಟುಂಬ ಸದಸ್ಯರಿದ್ದ ಮನೆಗಳ ಕುರುಹು ಕೂಡ ಗೋಚರಿಸದಿರುವ ಪರಿಣಾಮ, ಕಾರ್ಯಾಚರಣೆಗೂ ತೊಡಕಾಗಿದೆ. ಈ ಪ್ರದೇಶ ವಿಪರೀತ ಮಳೆಯಿಂದಾಗಿ ಗೊಸರುಮಯವಾಗಿದ್ದು, ಕಾಲ್ನಡಿಗೆ ಯಲ್ಲಿ ತೆರಳಲು ಅಸಾಧ್ಯ ರೀತಿ ಹೂತು ಹೋಗುತ್ತಿದೆ. ಹೀಗಾಗಿ ಪೊಲೀಸ್ ಇಲಾಖೆ ಶ್ವಾನದಳ ಹಾಗೂ ಲೋಹ ಶೋಧಕ ತಂಡವನ್ನು ಕಾರ್ಯಾ ಚರಣೆಗೆ ಬಳಸಿಕೊಂಡಿದೆ.ಮುಂದುವರಿದ ಆತಂಕ : ಭಾಗಮಂಡಲ, ಚೆರಿಯಪರಂಬು, ಪಾಲೂರು, ಕೊಟ್ಟಮುಡಿ, ಹೊದವಾಡ, ಬೊಳಿಬಾಣೆ ಮುಂತಾದೆಡೆಗಳಲ್ಲಿ ಜಲಾವೃತ ಪ್ರದೇಶಗಳಿಂದ ನೂರಾರು ಕುಟುಂಬ ಗಳನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆ ಸಾವಿರಾರು ಕುಟುಂಬಗಳಲ್ಲಿ ಆತಂಕ ಮುಂದುವರಿದಿದೆ. ಈ ಪ್ರದೇಶಗಳಲ್ಲಿ ಅಕ್ಷರಶಃ ಸಮುದ್ರದಂತೆ ಪರಿಸ್ಥಿತಿ ಗೋಚರಿಸತೊಡಗಿದೆ.

ಕತ್ತಲೆಯಲ್ಲಿ ಬದುಕು : ಕೊಡಗಿನ ಗಡಿ ಕರಿಕೆ, ಮಾಕುಟ್ಟ, ಪೆರುಂಬಾಡಿ, ಬೇಟೋಳಿ, ಕೆದಮುಳ್ಳೂರು ಮುಂತಾದ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ಹಳ್ಳಿಗಳಲ್ಲಿ ನಾಲ್ಕಾರು ದಿನಗಳಿಂದ ವಿದ್ಯುತ್ ಕಡಿತಗೊಂಡು ದೂರವಾಣಿ ಹಾಗೂ ಸಾಮಾಜಿಕ ಜಾಲತಾಣಗಳು ಸ್ಥಬ್ಧಗೊಂಡಿವೆ. ಈ ಭಾಗದ ಜನತೆಯ ಬದುಕಿನಲ್ಲಿ ಕಾರ್ಗತ್ತಲೆ ಆವರಿಸಿದಂತಾಗಿದೆ.

(ಮೊದಲ ಪುಟದಿಂದ)

ದೇವನೂರು ಜಲಾವೃತ : ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀಥ ನದಿ ಪ್ರವಾಹದ ಹೊಡೆತದೊಂದಿಗೆ ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡರೆ, ಅಲ್ಲಿನ ದೇವನೂರು ಕಿರು ಅಣೆಕಟ್ಟೆ ಒಡೆದು ಮತ್ತಷ್ಟು ಅನಾಹುತ ಸೃಷ್ಟಿಸಿದೆ.

ಮುಳುಗಿದ ಕುಶಾಲನಗರ : ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಅವರು ಬಣ್ಣಿಸಿದಂತೆ ಕುಶಾಲನಗರ ಹೋಬಳಿ ಅಕ್ಷರಶಃ ಮುಳುಗಿ ಹೋಗಿದೆ. ಕಾವೇರಿಯ ಪ್ರವಾಹದಿಂದ ಅಲ್ಲಿನ ಮುಳ್ಳುಸೋಗೆ, ಗುಮ್ಮನಕೊಲ್ಲಿ, ಕರಿಯಪ್ಪ ಬಡಾವಣೆ, ಶಾಯಿ ಬಡಾವಣೆ, ಜಿಲ್ಲೆಯ ಗಡಿ ಕೊಪ್ಪ ಮುಂತಾದೆಡೆಗಳಲ್ಲಿ ನಿಸರ್ಗಧಾಮ ತನಕ ಸಾವಿರಾರು ಮಂದಿ ಮನೆ - ಮಠ ತೊರೆದು ರಕ್ಷಣೆಗಾಗಿ ಪರಿತಪಿಸುವಂತಾಗಿದೆ.ಹೆಬ್ಬಾಲೆ ವ್ಯಾಪ್ತಿಯಲ್ಲಿ 350ಕ್ಕೂ ಅಧಿಕ ಮನೆಗಳಿಗೆ ನದಿ ಪ್ರವಾಹದ ನೀರು ನುಗ್ಗಿದು, ಕಣಿವೆ ರಾಮಲಿಂಗೇಶ್ವರ ದೇವಾಲಯ ಜಲಾವೃತಗೊಂಡಿದೆ.ಪ್ರವಾಹ ಇಳಿಮುಖ : ಈ ನಡುವೆ ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಕೀರೆಹೊಳೆಯ ನದಿ ಪಾತ್ರದಲ್ಲಿ ಪ್ರವಾಹ ಇಳಿಮುಖಗೊಂಡು, ಅಲ್ಲಿನ ಜನತೆ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲಿನ ಪೊನ್ನಂಪೇಟೆ ಬಳಿ ಹುದೂರು ಗ್ರಾಮದಲ್ಲಿ ಕಾರ್ಮಿಕನೊಬ್ಬ ಸಾವಿಗೀಡಾಗಿರುವ ದುರ್ಘಟನೆ ಸಂಭವಿಸಿದೆ.ಖಾಸಗಿ ಬಸ್ ವಿರಳ : ಜಲ ಪ್ರವಾಹದಿಂದ ತತ್ತರಿಸಿರುವ ದಕ್ಷಿಣ ಕೊಡಗಿನಲ್ಲಿ ಖಾಸಗಿ ಬಸ್‍ಗಳ ಸಂಚಾರವೂ ವಿರಳವಾಗಿದ್ದು, ವಿದ್ಯುತ್ ಸಮಸ್ಯೆಯಿಂದ ಸಾಮಾಜಿಕ ಜಾಲತಾಣಗಳು, ಮೊಬೈಲ್ ಇತ್ಯಾದಿ ಸ್ತಬ್ಧಗೊಂಡು ಜನರಿಗೆ ಹೊರ ಪ್ರಪಂಚದ ಆಗು ಹೋಗುಗಳ ಮಾಹಿತಿಗಾಗಿ ಪರಿತಪಿಸುವಂತಾಗಿದೆ.ಒಟ್ಟಿನಲ್ಲಿ ಪ್ರಸಕ್ತ ವರ್ಷದಲ್ಲಿನ ಆರಂಭಿಕ ಮುಂಗಾರು ಮಳೆಯ ಹಿನ್ನೆಡೆಯೊಂದಿಗೆ ತಾ. 3 ರಿಂದ ಆರಂಭಗೊಂಡಿರುವ ಆಶ್ಲೇಷ ಮಳೆಯು ಹಿರಿಯರು ಹೇಳುವಂತೆ ‘ಆಸೆ ಭಾಷೆಯಿಲ್ಲದೆ ಹೊಡೆಯುವ ಮಳೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ರೀತಿ ಇಡೀ ಜಿಲ್ಲೆಯ ಜನತೆಯ ಬದುಕು ತತ್ತರಗೊಳಿಸಿದ್ದು ವಾಸ್ತವ.