ಮಡಿಕೇರಿ, ಆ. 10: ಮೇಘಾ ಮಳೆಯಿಂದಾಗಿ ಕಾವೇರಿ ನದಿಯ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ನಾಪೋಕ್ಲು ಗ್ರಾ.ಪಂ. ವ್ಯಾಪ್ತಿಯ ಕೊಟ್ಟಮುಡಿ ಗ್ರಾಮ ಕಣ್ಮರೆಯಾಗಿದೆ. ಜನವಸತಿ ಪ್ರದೇಶವೀಗ ಸಾಗರದಂತೆ ಗೋಚರಿಸುತ್ತಿದ್ದು, ಎಲ್ಲೆಲ್ಲೂ ಬರೀ ನೀರು ಕಾಣುತ್ತಿದೆ. ನೂರಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, 65ಕ್ಕೂ ಅಧಿಕ ಮನೆಗಳು ಕಣ್ಣಿಗೆ ಕೂಡ ಗೋಚರಿಸುತ್ತಿಲ್ಲ. ಹಲವಾರು ಮಂದಿ ನಿರಾಶ್ರಿತರಾಗಿದ್ದು, ಪರಿಹಾರ ಕೇಂದ್ರಗಳಲ್ಲಿ, ಬಂಧುಗಳ, ಊರವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.ಮಹಾಮಳೆ ಆರಂಭವಾದ ನಾಲ್ಕು ದಿನಗಳಿಂದಲೇ ಕೊಟ್ಟಮುಡಿ ಹಾಗೂ ಸನಿಹದ ಹೊದವಾಡ ಗ್ರಾಮಗಳಲ್ಲಿ ಕಾವೇರಿ ಪ್ರವಾಹ ತಲೆದೋರಿದೆ. ಮುಂದುವರಿದ ಪ್ರವಾಹದ ರೀತಿ ಹೇಗಿದೆಯೆಂದೆ ಎರಡು ಅಂತಸ್ತಿನ ಮನೆಗಳೂ ಕೂಡ ಸಂಪೂರ್ಣ ಮುಳುಗಡೆಗೊಂಡಿವೆ. ಇಂದಿಗೆ ಮಳೆ ಕೊಂಚ ಬಿಡುವು ನೀಡಿದೆಯಾದರೂ ಪ್ರವಾಹ ಮಾತ್ರ ಏರುತ್ತಲೇ ಇದೆ. ಇತ್ತ ಕಾವೇರಿ ತೀರ ಪ್ರದೇಶದಲ್ಲಿ ಮಳೆಯಾಗುತ್ತಿರು ವದರಿಂದ ನೀರಿನ ಮಟ್ಟ ಏರಿಕೆಯಾಗುತ್ತಿದೆ.
ನಾಪೋಕ್ಲು-ಮಡಿಕೇರಿ ರಸ್ತೆಯಲ್ಲಿ ಕೊಟ್ಟಮುಡಿ ಸೇರಿ 4 ಕಿ.ಮೀ. ವರೆಗೆ ನೀರಿನಿಂದಾವೃತ ವಾಗಿದೆ. ರಸ್ತೆ ಬದಿಗಳಲ್ಲಿದ್ದ 65 ಮನೆಗಳು ಕಣ್ಣಿಗೆ ಕೂಡ ಕಾಣಿಸುತ್ತಿಲ್ಲ. ಅಲ್ಲಿರುವ ಮರ್ಕಜ್ ವಿದ್ಯಾ ಸಂಸ್ಥೆಯ ಹಿಂಭಾಗದಲ್ಲಿರುವ 27 ಮನೆಗಳೂ ಕೂಡ ನೀರಿನಿಂದಾವೃತ ವಾಗಿವೆ. ಇದರೊಂದಿಗೆ ಹೊದವಾಡ ದಲ್ಲೂ ಪ್ರವಾಹ ತಲೆದೋರಿದ್ದು, 15 ಮನೆಗಳು ಜಲಾವೃತಗೊಂಡಿವೆ.
ಅಲ್ಲಲ್ಲಿ ನಿರಾಶ್ರಿತರು: ಮಳೆಯಿಂದಾಗಿ ಮನೆಯೊಳಗೆ ನೀರು ನುಗ್ಗಿ ಇಲ್ಲಿ ಹಲವಾರು ಮಂದಿ ನಿರಾಶ್ರಿತರಾಗಿದ್ದಾರೆ. ಬಹುತೇಕ ಮಂದಿ ಅಲ್ಲಲ್ಲಿ ತಮ್ಮ ಸ್ನೇಹಿತರ, ಬಂಧುಗಳ ಮನೆಗಳಿಗೆ ತೆರಳಿದ್ದರೆ ಇನ್ನುಳಿದ ನೂರಕ್ಕೂ ಅಧಿಕ ಮಂದಿಗೆ ಕೊಟ್ಟಮುಡಿಯಲ್ಲೇ ಸುರಕ್ಷಿತವಾಗಿರುವ ಮನೆಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅಲ್ಲಿನ ಗ್ರಾ.ಪಂ. ಸದಸ್ಯ ಕೊಟ್ಟಮುಡಿ ಹಂಸ ಅವರ ನೇತೃತ್ವದ
(ಮೊದಲ ಪುಟದಿಂದ) ತಂಡ ವ್ಯವಸ್ಥೆ ಮಾಡಿಕೊಟ್ಟಿದ್ದು, ಯೋಗ ಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಇತ್ತ ಹೊದವಾಡದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ. 90 ರಷ್ಟು ಮಂದಿ ಈ ಪರಿಹಾರ ಕೇಂದ್ರದಲ್ಲಿದ್ದಾರೆ. ಇಲ್ಲಿ ನಿರಾಶ್ರಿತರಾದವರು ಉಟ್ಟ ಬಟ್ಟೆಯಲ್ಲೇ ಕಾಲ ಕಳೆಯುವಂತಾಗಿದೆ. ಪಂಚಾಯಿತಿ ಮಟ್ಟದಲ್ಲಿ ಸ್ಪಂದನ ಸಿಗುತ್ತಿದೆಯಾದರೂ ಸವಲತ್ತುಗಳು ಸಿಗುತ್ತಿಲ್ಲ. ಜಿಲ್ಲಾಡಳಿತ ಇತ್ತ ಗಮನ ಹರಿಸಿಲ್ಲ; ಎಂದು ಗ್ರಾಮಸ್ಥರು, ನಿರಾಶ್ರಿತರು ಅಳಲು ತೋಡಿಕೊಂಡಿದ್ದಾರೆ. ವಿದ್ಯುತ್ ಇಲ್ಲದೆ ಹಲವು ದಿನಗಳಾಗಿದ್ದು, ಯಾವದೇ ಸಂಪರ್ಕ ಇಲ್ಲದಂತಾಗಿದೆ. ಸ್ವಯಂ ಸೇವಕರಾಗಿ ದುಡಿಯುತ್ತಿರುವವರು ವಾಹನಗಳಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಂಡು ಅತ್ತಿಂದಿತ್ತ ಸಂಪರ್ಕ ಸಾಧಿಸಿಕೊಳ್ಳುವದಾಗಿದೆ.