ಚೆಟ್ಟಳ್ಳಿ, ಆ. 8: ಮಳೆಯಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ಸಂತ್ರಸ್ತರ ಸೇವೆಗೆ ಕುಶಾಲನಗರದ ಎಸ್.ಡಿ.ಪಿ.ಐ. ಹಾಗೂ ಎಸ್.ಕೆ.ಎಸ್.ಎಸ್.ಎಫ್ ಸಂಘಟನೆ ವತಿಯಿಂದ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕುಶಾಲನಗರದ ಹದಿನೈದಕ್ಕೂ ಹೆಚ್ಚು ಬಡಾವಣೆಗಳಿಗೆ ನೀರು ನುಗ್ಗಿದ್ದು, ಕಳೆದ ಮೂರು ದಿನಗಳಿಂದ ಸಂತ್ರಸ್ತರ ರಕ್ಷಣೆಗೆ ಹಾಗೂ ಮನೆ ಸಾಮಗ್ರಿಗಳನ್ನು ಸ್ಥಳಾಂತರಿಸಲು ಎಸ್.ಡಿ.ಪಿ.ಐ.ನ ರೆಸ್ಕ್ಯೂ ಆಂಡ್ ರಿಲೀಫ್ ತಂಡ ಹಾಗೂ ಎಸ್.ಕೆ.ಎಸ್.ಎಸ್.ಎಫ್.ನ ವಿಖಾಯ ತಂಡ ಸಂಪೂರ್ಣ ಸಹಕಾರವನ್ನು ನೀಡುತ್ತಾ ಬಂದಿದೆ. ನೆರೆ ಸಂತ್ರಸ್ತರ ಸೇವೆಗಾಗಿ ಸದಾ ಸಿದ್ದರಿದ್ದೇವೆ ಎಂದು ಎರಡೂ ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ. ವೀರಾಜಪೇಟೆ ತಾಲೂಕಿನ ಕೆದಮುಳ್ಳೂರಿನಲ್ಲಿ ಪ್ರವಾಹದಲ್ಲಿ ಸಿಲುಕಿದ ವೃದ್ಧರು ಮತ್ತು ಪುಟ್ಟಾಣಿ ಮಕ್ಕಳು ಸೇರಿದಂತೆ 30ಕ್ಕಿಂತ ಹೆಚ್ಚು ಮಂದಿಯನ್ನು ರಕ್ಷಿಸಿದ ಮಡಿಕೇರಿಯ ಪಿ.ಎಫ್.ಐ. ಮತ್ತು ಎಸ್.ಡಿ.ಪಿ.ಐ. ರೆಸ್ಕ್ಯೂ ತಂಡ ರಕ್ಷಿಸಿದೆ. - ಇಸ್ಮಾಯಿಲ್