ಸೋಮವಾರಪೇಟೆ, ಆ. 10: ಸಮೀಪದ ಐಗೂರು ಗ್ರಾಮ ಪಂಚಾಯಿತಿಯ ಸದಸ್ಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದಲ್ಲದೇ ಪಿ.ಡಿ.ಓ. ಅವರನ್ನು ಜಾತಿನಿಂದನೆ ಮಾಡಿದ ಆರೋಪಿಯ ವಿರುದ್ಧ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಆಡಳಿತದವರು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ಸುರೇಶ್, ಜಿಲ್ಲಾಧಿಕಾರಿ ಗಳ ಅದೇಶದಂತೆ ಪಂಚಾಯಿತಿ ಗ್ರಾಮ ವಿಪತ್ತು ನಿರ್ವಹಣಾ ಸಮಿತಿ ಸದಸ್ಯರು ಸಭೆ ನಡೆಸಿ, ಅಪಾಯದ ಸ್ಥಿತಿಯಲ್ಲಿದ್ದ ಮರವನ್ನು ಕಡಿಯುವಂತೆ ಐಗೂರು ಗ್ರಾಮದ ಸೋಮಯ್ಯ ಅವರಿಗೆ ಸೂಚಿಸಲು ಅವರ ಮನೆಯ ಹತ್ತಿರ ತೆರಳಿದ ಸಂದರ್ಭ ಪಂಚಾಯಿತಿ ಸದಸ್ಯ ಕೆ.ಪಿ. ದಿನೇಶ್ ಅವರ ಮೇಲೆ, ಸೋಮಯ್ಯ ಅವರು ಹಲ್ಲೆ ನಡೆಸಿದ್ದಲ್ಲದೆ, ಪಿ.ಡಿ.ಓ. ಯಾದವ್ ಅವರ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸುವದರೊಂದಿಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿದರು.
ಸೋಮಯ್ಯ ಅವರ ಜಾಗದಲ್ಲಿರುವ ಮರ ತಮ್ಮ ಮನೆಯ ಮೇಲೆ ಬೀಳುವ ಹಂತದಲ್ಲಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪಾರ್ವತಿ ಎಂಬವರು ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿ, ಮರ ತೆರವುಗೊಳಿ ಸುವಂತೆ ಸೂಚಿಸಿದ ಸಂದರ್ಭ ಸೋಮಯ್ಯ ಅವರು ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಗ್ರಾ.ಪಂ. ಸದಸ್ಯ ದಿನೇಶ್ ಮೇಲೆ ಹಲ್ಲೆ ನಡೆಸಿದ ಬಗ್ಗೆ ಸೋಮವಾರಪೇಟೆ ಪೊಲೀಸರಿಗೆ ದೂರು ನೀಡಲಾಗಿದೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ, ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದರು.
ಜನಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವ ಹಂತಕ್ಕೆ ತಲಪಿರುವದು ಖಂಡನೀಯ. ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಕೆ.ಪಿ. ರಾಯ್, ಡಿ.ಎಸ್. ಚಂಗಪ್ಪ, ಉಪಾಧ್ಯಕ್ಷೆ ಎನ್.ಎಂ. ಶೋಭ, ಸದಸ್ಯ ಗೋಪಾಲ್ ಆಗ್ರಹಿಸಿದ್ದಾರೆ.