*ಗೋಣಿಕೊಪ್ಪಲು, ಆ. 10: ಲಕ್ಷ್ಮಣತೀರ್ಥ ನದಿ ಪ್ರವಾಹ ಕಾಫಿ ತೋಟದ ಕೆರೆಗಳನ್ನು ಆವರಿಸಿ ಲಕ್ಷಾಂತರ ರೂಪಾಯಿ ನಷ್ಟ ಮಾಡಿದೆ. ಬಾಳೆಲೆ ನಿಟ್ಟೂರು ನಡುವೆ ಇರುವ ಜಾಗಲೆಯ ಅಳಮೇಂಗಡ ಬೋಸ್ ಮಂದಣ್ಣ ತಮ್ಮ ಕಾಫಿ ತೋಟಕ್ಕೆ ನೀರು ಹಾಯಿಸಲು ಗದ್ದೆಯಲ್ಲಿ ಎರಡು ಬೃಹತ್ ಕೆರೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಲಕ್ಷ್ಮಣತೀರ್ಥ ನದಿ ಬಯಲಿನಲ್ಲಿರುವ ಈ ಕೆರೆಗಳಿಗೆ ಭಾರೀ ಪ್ರಮಾಣದಲ್ಲಿ ಪ್ರವಾಹ ಬಂದು ಕೆರೆಗಳನ್ನು ಸಂಪೂರ್ಣವಾಗಿ ಮುಚ್ಚಿ ಹಾಕಿದೆ.

ಈ ಬಗ್ಗೆ ತಮ್ಮ ನೋವು ತೋಡಿಕೊಂಡ ಬೋಸ್ ಮಂದಣ್ಣ ಸುಮಾರು ಎರಡು ಎಕರೆಯಷ್ಟು ವಿಶಾಲವಾಗಿದ್ದ ಎರಡು ಕೆರೆಗಳಲ್ಲಿ ಸಾವಿರಾರು ಮೀನುಗಳನ್ನು ಬಿಟ್ಟು ಸಾಕಾಲಾಗುತ್ತಿತ್ತು. ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಾಫಿ ಮತ್ತು ಭತ್ತದದಲ್ಲಿ ಉಂಟಾಗುತ್ತಿದ್ದ ನಷ್ಟವನ್ನು ಮೀನಿನಲ್ಲಿ ಸರಿದೂಗಿಸಿಕೊಳ್ಳಲಾಗುತ್ತಿತ್ತು. ಇಂತಹ ಆದಾಯ ತರುವ ಲಕ್ಷಾಂತರ ಮೌಲ್ಯದ ಮೀನುಗಳು ನದಿ ಪ್ರವಾಹಕ್ಕೆ ತುತ್ತಾಗಿ ಎಲ್ಲವೂ ಕೆರೆಯಿಂದ ಹೊರಹೋಗಿವೆ. ಇದರಿಂದ ಭಾರೀ ಪ್ರಮಾಣದ ನಷ್ಟವಾಗಿದೆ ಎಂದು ಬೇಸರದಿಂದ ನುಡಿದರು. 1962ರಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ಇಂತಹ ಪ್ರವಾಹ ಬಂದಿತ್ತು. ಅದನ್ನು ಬಿಟ್ಟರೆ ಇದೇ ಮೊದಲ ಬಾರಿಗೆ ಈ ರೀತಿಯ ಪ್ರವಾಹ ಬಂದಿರುವದು ಎಂದು ಬೋಸ್ ಮಂದಣ್ಣ ತಿಳಿಸಿದರು.

-ಎನ್.ಎನ್. ದಿನೇಶ್