ಮಡಿಕೇರಿ, ಆ. 9: ಜಿಲ್ಲೆಯಲ್ಲಿ ಆಶ್ಲೇಷ ಮಳೆ ಕಳೆದ ವರ್ಷದ ಅನಾಹುತವನ್ನೂ ಮೀರಿಸಿ ಮೇಘ ಸ್ಫೋಟದೊಂದಿಗೆ ಭಾರೀ ಆರ್ಭಟದೊಂದಿಗೆ ಧರೆಗಳಿದಿದೆ. ಶ್ರಾವಣ ಶುಕ್ರವಾರ ಕೊಡಗಿನ ಜನತೆಗೆ ಭೀಕರ ದಿನವಾಗಿ ಪರಿಣಮಿಸಿದೆ. ವರಮಹಾಲಕ್ಷ್ಮೀ ವ್ರತದ ಸಂಭ್ರಮ ಮಾಯವಾಗಿ ಸಾವು, ನೋವುಗಳ ಆಕ್ರಂದನ ಜನತೆಯನ್ನು ಮಂಕಾಗಿಸಿದೆ. ಒಂದೆಡೆ ವೀರಾಜಪೇಟೆ ತಾಲೂಕಿನ ಹೆಗ್ಗಳ ಬಳಿ ತೋರ ಪ್ರದೇಶದಲ್ಲಿ ಓರ್ವ ಮಹಿಳೆ ಮತ್ತು ಓರ್ವ ಯುವತಿ ಮನೆಗಳ ಮೇಲಿನ ಭೂಕುಸಿತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೊಂದೆಡೆ ಭಾಗಮಂಡಲ ಸಮೀಪದ ಕೋರಂಗಾಲ ಗ್ರಾಮದಲ್ಲಿ ಪತಿ, ಪತ್ನಿ ಹಾಗೂ ಇತರ ಮೂವರು ಪುರುಷರು ಭೂಕುಸಿತದಿಂದ ಪ್ರಪಾತ ಸೇರಿದ ಮನೆಯ ಅವಶೇಷದಡಿ ಬಲಿಯಾಗಿದ್ದಾರೆ.ಹೆಗ್ಗಳ ಗ್ರಾಮದ ತೋರ ಪ್ರದೇಶದಲ್ಲಿ ಪರಮೇಶ್ ಎಂಬವರ ಕುಟುಂಬದ ಮಮತಾ ಎಂಬ 40 ವರ್ಷದ ಮಹಿಳೆ ಹಾಗೂ ಲಿಖಿತ ಎಂಬ 15 ವರ್ಷದ ಯುವತಿ ಮನೆ ಮೇಲೆ ಭೂಕುಸಿತ ಉಂಟಾಗಿ ಸಾವಿಗೀಡಾಗಿದ್ದಾರೆ.

ಕೋರಂಗಾಲ ಗ್ರಾಮದಲ್ಲಿ ಅತ್ತೆಡಿ ಯಶವಂತ್ (44) ಎಂಬ ಕೃಷಿಕರ ಮನೆ ನೆಲಕ್ಕೆ ಅಪ್ಪಳಿಸಿ ಸಂಪೂರ್ಣ ನಾಮಾವಶೇಷವಾಗಿದ್ದು, ಭೂಮಿಯಡಿಯಲ್ಲಿ ಸಿಲುಕಿ ಯಶವಂತ್ ದುರ್ಮಣಗೊಂಡಿದ್ದಾರೆ. ಇವರನ್ನು ರಕ್ಷಿಸಲು ಬಂದ ಸನಿಹದ ನಿವಾಸಿಗಳಾದ ಕೃಷಿಕ ಬೋಳನ ಬಾಲಕೃಷ್ಣ (55), ಅವರ ಪತ್ನಿ ಯಮುನಾ (40) ಇಬ್ಬರು ಬಲಿಯಾಗಿದ್ದಾರೆ. ಅಲ್ಲದೆ ತಲಕಾವೇರಿ ದೇವಾಲಯದಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ನಡುವಟ್ಟಿ ರಾಜ (45) ಹಾಗೂ ಕೃಷಿಕ ಕಾಳನ ಉದಯ ಕುಮಾರ್ (43) ಇವರುಗಳು ಮೃತರಾಗಿದ್ದಾರೆ.

ತೋರ ಗ್ರಾಮದಲ್ಲಿ ಕಾಣೆಯಾದವರು : ಹೆಗ್ಗಳ ಸನಿಹದ ತೋರ ಗ್ರಾಮದಲ್ಲಿ ಎಂಟು ಮಂದಿ ಕಾಣೆಯಾಗಿದ್ದಾರೆ. ಹರೀಶ್ ಎಂಬವರ ಕುಟುಂಬದ ಶಂಕರ (55), ಅಪ್ಪು (55), ಲೀಲ (50) ಹಾಗೂ ಹರೀಶ್ ಎಂಬವರ ಗರ್ಭಿಣಿ ಪತ್ನಿ (ಹೆಸರು ಲಭ್ಯವಿಲ್ಲ) ಹಾಗೂ ಪ್ರಭು ಎಂಬವರ ಕುಟುಂಬದ ದೇವಕಿ (65), ಅನು (35), ಅಮೃತ (13) ಹಾಗೂ ಆದಿತ್ಯ (10) ಕಾಣೆಯಾಗಿದ್ದಾರೆ.

ತೋರದಲ್ಲಿ ಸಿಲುಕಿದ್ದ ಸಂತ್ರಸ್ತರ ರಕ್ಷಣೆಗಾಗಿ ಭಾರತೀಯ ಸೇನೆ, ಎನ್‍ಡಿಆರ್‍ಎಫ್, ಪೊಲೀಸ್ ಇಲಾಖೆ ಧಾವಿಸಿದ್ದು, ಸುಮಾರು 300 ಕುಟುಂಬಗಳನ್ನು ರಕ್ಷಿಸಿತು. ಆದರೆ ದುರದೃಷ್ಟವಶಾತ್ ನಾಲ್ಕೈದು ಮನೆಗಳ ಮೇಲೆ ಭೂಕುಸಿತವಾಗಿದ್ದು, ಇಬ್ಬರು ಮೃತಪಟ್ಟು, ಎಂಟು ಮಂದಿ ಕಾಣೆಯಾಗಿರುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಪತ್ರಿಕಾ ಹೇಳಿಕೆಯಲ್ಲಿ ಖಚಿತಪಡಿಸಿದ್ದಾರೆ. ಸಂಜೆ ತಡವಾಗಿದ್ದು, ಪ್ರತಿಕೂಲ ಹವಾಮಾನದ ಕಾರಣ, ಶೋಧ ಮತ್ತು ರಕ್ಷಣಾ ಕಾರ್ಯವನ್ನು ಶನಿವಾರ (ಇಂದು) ಮುಂದುವರೆಸುವದಾಗಿ ತಿಳಿಸಿದ್ದಾರೆ.

ಕೋರಂಗಾಲದ ದಾರುಣ ಸ್ಥಿತಿ : ‘ಶಕ್ತಿ’ ಪರವಾಗಿ ಜಿ. ರಾಜೇಂದ್ರ ಹಾಗೂ ಕೆ.ಜೆ.ಸುಬ್ಬಯ್ಯ ಅವರುಗಳು ಇಂದು ಕೋರಂಗಾಲದ ದುರ್ಘಟನೆಯ ಸ್ಥಳಕ್ಕೆ ತೆರಳಬೇಕಾದರೆ, ತೀರಾ ಬವಣೆ ಪಡಬೇಕಾಯಿತು. ಭಾಗಮಂಡಲದವರೆಗೂ ರಸ್ತೆ ದುರವಸ್ಥೆಯಾಗಿದ್ದು, ಅನೇಕ ಕಡೆ ಭೂಕುಸಿತ, ಮರ ಬೀಳುವಿಕೆ ಕಂಡು ಬಂದಿತು. ದಾರಿಯುದ್ದಕ್ಕೂ ಪ್ರಮುಖ ಇಂಜಿನಿಯರ್‍ಗಳಾದ ಇಬ್ರಾಹಿಂ, ಚನ್ನಕೇಶವ, ಶಿವರಾಂ ಇವರುಗಳು ಅಲ್ಲಲ್ಲಿ ರಸ್ತೆ ದುರಸ್ತಿ ಕಾರ್ಯ ಮಾಡಿಸುತ್ತಿದ್ದದು ಕಂಡು ಬಂದಿತು. ಆದರೆ ಭಾಗಮಂಡಲ ಸನಿಹದಲ್ಲಿ ರಸ್ತೆ ನಡುವೆಯೇ

(ಮೊದಲ ಪುಟದಿಂದ) ಜಲ ಉದ್ಭವಿಸಿದ್ದು, ಇಂದು ಕೆಲವು ವಾಹನಗಳು ಅದರ ನಡುವೆ ಸಿಲುಕಿ ಕೊಂಡ ಪ್ರಸಂಗವೂ ಎದುರಾಯಿತು. ಶನಿವಾರದಿಂದ ಬಹುಪಾಲು ಭಾಗಮಂಡಲಕ್ಕೆ ರಸ್ತೆ ಸಂಪರ್ಕವೇ ಸ್ಥಗಿತಗೊಳ್ಳುವ ಅಪಾಯ ಕಂಡು ಬಂದಿದೆ. ಮುಂದೆ ತೆರಳುತ್ತಿದ್ದಂತೆಯೇ ಭಾಗಮಂಡಲ ಸನಿಹದ ಸೇತುವೆಯು ಜಲಪ್ರವಾಹಕ್ಕೆ ಸಿಲುಕಿದ್ದು, ಅಲ್ಲಿಂದ ಜೀಪಿನಲ್ಲಿ ತೆರಳಬೇಕಾಯಿತು. ಭಾಗಮಂಡಲ ದಿಂದ ಕೋರಂಗಾಲಕ್ಕೆ ತೆರಳಲು ‘ರ್ಯಾಫ್ಟ್’ ನೆರವು ಅನಿವಾರ್ಯವಾಯಿತು.

ರ್ಯಾಫ್ಟಿಂಗ್ ಪರಿಣಿತರುಗಳಾದ ಸತೀಶ್, ರೊಪೇಶ್ ಹಾಗೂ ಕುಡೆಕಲ್ ಭರತ್ ಇವರುಗಳು ‘ಶಕ್ತಿ’ಗೆ ಸಹಕಾರವಿತ್ತು ಆಚೆ ಬದಿಗೆ ತೆರಳಲು ಮತ್ತು ಬಳಿಕ ವಾಪಾಸು ಕರೆತರಲು ನೆರವಾದರು. ಅಲ್ಲಿಂದ ಮತ್ತೆ ಕೋರಂಗಾಲದ ದುರ್ಘಟನೆ ಸ್ಥಳಕ್ಕೆ ತೆರಳಲು ಹಲವು ಕಿ.ಮೀ. ಕ್ರಮಿಸ ಬೇಕಿದೆ, ಸ್ವಲ್ಪ ದೂರ ತೆರಳುತ್ತಿದ್ದಂತೆ ಬಾಡಿಗೆ ಜೀಪು ನಿರ್ವಹಿಸುತ್ತಿರುವ ತೀರ್ಥರಾಮ ಎಂಬವರು ನಮಗೆ ನೆರವಾಗಿ ಕರೆದೊಯ್ದರು. ಅಲ್ಲಿಂದ ಮತ್ತೆ ಇಳಿಜಾರು, ಕೆಸರು, ಕೊಸರು ಪ್ರದೇಶದಲ್ಲಿ ಸುತ್ತಲೂ ನೀರಿನ ಪ್ರವಾಹ ನಡುವೆ ನಡೆದು ನೋಡಿದಾಗ ಅಲ್ಲಿ ನಾಲ್ಕು ಶವಗಳನ್ನು ಇರಿಸಿಕೊಂಡು, ಸಂಬಂಧಿಕರು ನಿಕಟವರ್ತಿಗಳು ಅಳುತ್ತಿದ್ದ ದೃಶ್ಯ ಎದುರಾಯಿತು.

ಆಡಳಿತ ನಡೆಸುವವರು ಇಂಥ ಕುಗ್ರಾಮಕ್ಕೆ ಉತ್ತಮ ರಸ್ತೆ, ಸಂಚಾರ ವ್ಯವಸ್ಥೆ ಕಲ್ಪಿಸಲು ಕೂಡ, ಸ್ವಾತಂತ್ರ್ಯ ಕಳೆದು 72 ವರ್ಷಗಳಾದರೂ, ಮನಸ್ಸು ಮಾಡದಿರುವ ಬಗ್ಗೆ ವ್ಯಥೆಯಾಯಿತು. ಒಂದೆಡೆ ನಾಲ್ಕು ಶವಗಳು, ಮತ್ತೊಂದೆಡೆ ಭೂಕುಸಿತದಿಂದ ಪ್ರಪಾತಕ್ಕಿಳಿದ, ಕಣ್ಣಿಗೆ ಕಂಡು ಬಾರದಿದ್ದ ಮತ್ತೊಂದು ಶವದ ಪತ್ತೆಗಾಗಿ ಶೋಧಕಾರ್ಯ ಬಿರುಸಿನಿಂದ ನಡೆದಿತ್ತು. ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಕಾಳನ ರವಿ ಅವರು ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಮೃತ ಯಶವಂತ್ ಅವರ ಪತ್ನಿ ಶಶಿಕಲಾ, ಪುತ್ರರುಗಳಾದ ಶ್ರೇಯಸ್ (12) ನಿಶಾಂತ್ (5), ಯಶವಂತ್ ಸಹೋದರ ರಾಧಾಕೃಷ್ಣ, ಮತ್ತೋರ್ವ ಮೃತ ನಡುವಟ್ಟಿ ರಾಜಾ ಅವರು ಪುತ್ರಿ ಲತಾ, ಅಳಿಯ ಪ್ರಸಾದ್ ಇವರುಗಳನ್ನು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಕಾಳನ ರವಿ ಅವರ ಈ ಅಮೋಘ ಕಾರ್ಯಕ್ಕೆ ದುಃಖದ ನಡುವೆಯೂ ಗ್ರಾಮಸ್ಥರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದುದು ಗೋಚರಿಸಿತು.

ರಾಜಾ ದುರಂತ ಕತೆ : ನಡುವಟ್ಟಿ ರಾಜಾ ಅವರದ್ದು ಒಂದು ದುರಂತ ಕತೆಯಾಗಿದೆ. ಕಳೆದ ವರ್ಷ ಮಳೆ ಅನಾಹುತದಲ್ಲಿ ಇವರು ತಮ್ಮ ಮನೆ ಆಸ್ತಿಯನ್ನು ಹೆಬ್ಬೆಟ್ಟಗೇರಿಯಲ್ಲಿ ಕಳೆದುಕೊಂಡಿದ್ದರು. ಅವರ ಮಗಳು ಲತಾ ಮತ್ತು ಅಳಿಯ ಪ್ರಸಾದ್ ಕೋರಂಗಾಲದಲ್ಲಿ ನೆಲೆಸಿದ್ದು, ಅಲ್ಲಿಗೆ ಬಂದು ಯಶವಂತ್ ನೆಲೆಸಿದ್ದರು. ಸರಕಾರ ರಾಜಾ ಅವರಿಗೆ ಮನೆಯನ್ನೇ ನೀಡಲಿಲ್ಲ. ಕಳೆದ ವರ್ಷ ಮನೆ - ಆಸ್ತಿ ಕಳೆದುಕೊಂಡು ಅನಿವಾರ್ಯ ವಾಗಿ ಕೋರಂಗಾಲಕ್ಕೆ ಬಂದು ನೆಲೆಸಿದ್ದ ರಾಜ ಇಹಲೋಕವನ್ನೇ ತ್ಯಜಿಸಲು ಆಡಳಿತ ವ್ಯವಸ್ಥೆಯೇ ಕಾರಣವೆಂದು ಕಾಳನ ರವಿ ಮತ್ತಿತರರು ದುಃಖಪೂರಿತರಾಗಿ ನುಡಿದರು.

ಈ ಕುಗ್ರಾಮವನ್ನು ಕೇಳುವವರೇ ಇಲ್ಲ; ಕಂಟ್ರೋಲ್ ರೂಂಗೆ ಕರೆ ಮಾಡಿದರೂ, ಆಲಿಸುವವರೇ ಇಲ್ಲ; ಈ ಗ್ರಾಮದ ನಿವಾಸಿಗಳು ಅನಾಥರಾಗಿದ್ದಾರೆ ಎಂದು ರವಿ ಮತ್ತು ಗ್ರಾಮಸ್ಥರು ‘ಶಕ್ತಿ’ಯೊಂದಿಗೆ ನೋವಿನ ನುಡಿಯಾಡಿದರು. ಮೃತರುಗಳ ಪೈಕಿ ಬಾಲಕೃಷ್ಣ ಮತ್ತು ಯಮುನಾ ಎಂಬವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರರಿದ್ದಾರೆ. ಪ್ರಥಮ ಪುತ್ರಿ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದು, ದ್ವಿತೀಯ ಪುತ್ರಿ ಸುಳ್ಯದಲ್ಲಿ ಪಿ.ಯು.ಸಿ. ಓದುತ್ತಿದ್ದಾರೆ. ಮೃತ ಕಾಳನ ಉದಯಕುಮಾರ್ ಅವರಿಗೆ ಆರನೇ ತರಗತಿ ಓದುತ್ತಿರುವ ಪುತ್ರನಿದ್ದಾನೆ.

ಕಾವೇರಿ ಶಾಪ : ಇಂದು ಸಾವಿನ ದುರಂತದ ನಡುವೆ ಊರಿನ ಮಂದಿ ಕಾವೇರಿ ತವರೂರಿನ ಜನರಿಗೆ ಕಾವೇರಿಯ ಶಾಪ ತಲೆದೋರಿದೆ ಎಂದು ಭಾವುಕ; ಉದ್ವೇಗದ ಮಾತುಗಳನ್ನಾಡಿದುದು ಕೇಳಿ ಬಂದಿತು. ಇತ್ತೀಚೆಗೆ ಭಾಗಮಂಡಲದ ಗೋಪುರದ ಭಾಗವೊಂದಕ್ಕೆ ಮಿಂಚು ಹೊಡೆದು ಕಲಶವೊಂದು ಪತನಗೊಂಡಿದೆ. ತಲಕಾವೇರಿಯಲ್ಲಿ ಸಾಂಪ್ರದಾಯಿಕವಾಗಿ ಕಾವೇರಿ ಸನ್ನಿಧಿಯಲ್ಲಿ ಭಕ್ತಿಪೂರ್ವಕವಾಗಿ ನಡೆಯುತ್ತಿದ್ದ ಕುಂಕುಮಾರ್ಚನೆಯನ್ನು ಇಚ್ಚಾನುಸಾರ ಸಮಿತಿ ಸ್ಥಳಾಂತರಿಸಿದೆ. ಹಿಂದಿನ ಸಂಪ್ರದಾಯಗಳನ್ನು ಮುರಿದು, ಭಕ್ತರ ಬಾವನೆಗಳಿಗೆ ದಕ್ಕೆ ಉಂಟಾಗಿದೆ. ಶಿವಲಿಂಗದ ವಿಚಾರದಲ್ಲಿಯೂ ತಪ್ಪು ಪ್ರಶ್ನೆಗಳ ಮೂಲಕ ತಪ್ಪು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕಾವೇರಿಯ ತವರೂರಿನ ನಾಡಿನ ಜನರು ಶಾಪಗ್ರಸ್ಥರಾಗಿದ್ದಾರೆ ಎಂದು ಊರಿನ ಜನ ಪ್ರಖರ ನುಡಿಯಾಡಿದರು. ಈ ಬಗ್ಗೆ ಸೂಕ್ತ ಪರಿಹಾರ ಕ್ರಮ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅನಾಹುತ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಈ ಬಗ್ಗೆ ಗ್ರಾಮಸ್ಥರುಗಳ ಪರವಾಗಿ ಕಾಳನ ರವಿ, ರಾಜಾ ರೈ, ಅಂಬ್ರಾಟಿ ಮೋಟಯ್ಯ, ಪ್ರಸನ್ನ, ಜಗನ್ನಾಥ್, ಗೋಪಾಲ್, ರಂಜಿತ್ ಮೊದಲಾದವರು ‘ಶಕ್ತಿ’ಯೊಂದಿಗೆ ತಮ್ಮ ಮನದಾಳದ ಅಳಲು ತೋಡಿಕೊಂಡರು.