ಮಡಿಕೇರಿ, ಆ. 9: ಪ್ರಸಕ್ತ ವರ್ಷದ ಆಗಸ್ಟ್ 4ರ ತನಕವೂ ಜಿಲ್ಲೆಯಲ್ಲಿ ಮಳೆಯ ಅಬ್ಬರ ಹೆಚ್ಚು ಕಂಡುಬಂದಿರಲಿಲ್ಲ. ದಕ್ಷಿಣ ಕೊಡಗಿನ ಬ್ರಹ್ಮಗಿರಿ ವ್ಯಾಪ್ತಿಯ ಪ್ರದೇಶಗಳಲ್ಲಿ ಮಾತ್ರ ಒಂದಷ್ಟು ಹೆಚ್ಚು ಮಳೆ ಯಾಗುತ್ತಿದ್ದುದು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲ ಕ್ಷೀಣಗೊಂಡಂತಿತ್ತು. ಆದರೆ, ಕಳೆದ ಭಾನುವಾರದಿಂದ ಈಚೆಗೆ ಕೇವಲ ನಾಲ್ಕೈದು ದಿನಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗಿ ಹೋಗಿದೆ. ದಿಢೀರನೆ (ಮೊದಲ ಪುಟದಿಂದ) ತನ್ನ ಪ್ರತಾಪ ತೋರಲಾರಂಭಿಸಿದ ಮಳೆ ಇದೀಗ ಪ್ರತಿಯೊಬ್ಬರನ್ನು ಕಂಗೆಡುವಂತೆ ಮಾಡಿದೆ.ಬಹುತೇಕ ಜಿಲ್ಲೆಯ ಎಲ್ಲಾ ಕಡೆಗಳಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಅದೂ ದಿನವೊಂದಕ್ಕೆ ಸುಮಾರು 12 ಇಂಚಿನಿಂದ 15 ಇಂಚಿಗಿಂತಲೂ ಅಧಿಕ ಮಳೆಯಾಗುತ್ತಿರುವದು ಇತ್ತೀಚಿನ ವರ್ಷಗಳಲ್ಲಿನ ದಾಖಲೆಯಾಗಿದೆ. ಅದರಲ್ಲೂ ಮಳೆಯ ಪ್ರಮಾಣ ಕಡಿಮೆ ಇರುತ್ತಿದ್ದ ಪೊನ್ನಂಪೇಟೆ, ಗೋಣಿಕೊಪ್ಪಲುವಿನಂತಹ ಕಡೆಗಳಲ್ಲಿಯೂ 24 ಗಂಟೆಗಳ ಅವಧಿಯಲ್ಲಿ ಸುಮಾರು ಎಂಟತ್ತು ಇಂಚು ಮಳೆಯಾಗುತ್ತಿರುವದು ಕಂಡು ಬಂದಿದೆ.
ಭಾಗಮಂಡಲದಲ್ಲಿ 1962ರ ಬಳಿಕ
ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ ಭಾಗಮಂಡಲ ಹೋಬಳಿ ಈ ಬಾರಿ ಪ್ರಾಕೃತಿಕ ವಿಕೋಪದಿಂದ ತತ್ತರಿಸುತ್ತಿದೆ. 1962ರ ನಂತರ ಇಲ್ಲಿಗೆ ಈ ರೀತಿಯ ಮಳೆಯಾಗುತ್ತಿದೆ; ಅದೂ ಆಗಿನ ಸಂದರ್ಭ ಸುರಿದಿದ್ದ ಮಳೆಗಿಂತ ಈ ಪ್ರಮಾಣ ಅಧಿಕವೆಂದು ಅಲ್ಲಿನ ಭಾಸ್ಕರ್ ಶೆಟ್ಟಿ ನೆನಪಿಸುತ್ತಾರೆ.
ಈ ವ್ಯಾಪ್ತಿಯಲ್ಲಿಯೂ ಕಳೆದ ಕೆಲವು ದಿನಗಳಿಂದ 10 ರಿಂದ 12 ಇಂಚು ಮಳೆಯಾಗಿದ್ದು, ಇದೀಗ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯಲ್ಲಿ 16 ಇಂಚಿನಷ್ಟು ಮಳೆ ಈ ಹೋಬಳಿ ವ್ಯಾಪ್ತಿಯಲ್ಲಿ ಬಿದ್ದಿದೆ. ಪರಿಣಾಮವಾಗಿ ಭಾಗಮಂಡಲ ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳೂ ಭಾರೀ ಪ್ರಮಾಣದ ನೀರಿನಿಂದ ಜಲಾವೃತಗೊಂಡಿದೆ. ಇಲ್ಲಿನ ಎಲ್ಲಾ ಸಂಪರ್ಕ ರಸ್ತೆಗಳು ಮುಚ್ಚಲ್ಪಟ್ಟಿದ್ದು, ಅಯ್ಯಂಗೇರಿಯ ಎರಡುಕಡೆ, ನಾಪೋಕ್ಲು, ಬೋಳಿಬಾಣೆ, ಬಲ್ಲಮಾವಟಿ, ಸಣ್ಣಪುಲಿಕೋಟು, ಅಂಬ್ರಾಟಿ ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಆಯಾ ವಿಭಾಗದಲ್ಲಿ ಸುಮಾರು 50-60 ಕುಟುಂಬಗಳು ದಿಗ್ಭಂಧನಕ್ಕೆ ಒಳಗಾಗಿ ಅತಂತ್ರತೆಯಲ್ಲಿ ಜೀವಭಯ ಎದುರಿಸುವಂತಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ನೋಡನೋಡುತ್ತಿರುವಂತೆಯೇ ಏರಿಕೆಯಾಗುತ್ತಿರುವ ನೀರಿನ ಮಟ್ಟವನ್ನು ಗಮನಿಸಿ ಗಾಬರಿಯಿಂದ ಪೂಜೆ - ಪುನಸ್ಕಾರದೊಂದಿಗೆ ಮಳೆ ಇಳಿಮುಖವಾಗಲು ಪ್ರಾರ್ಥಿಸುತ್ತಿರುವಂತಹ ಕರುಣಾಜನಕ ಪರಿಸ್ಥಿತಿ ಏರ್ಪಟ್ಟಿದೆ.
ಇನ್ನೂ ಹಲವೆಡೆಗಳಲ್ಲಿ ಇದೇ ಸ್ಥಿತಿ
ಭಾಗಮಂಡಲ ಹೋಬಳಿಯ ಪರಿಸ್ಥಿತಿ ಇದಾದರೆ, ದಕ್ಷಿಣ ಕೊಡಗಿನ ಶ್ರೀಮಂಗಲ, ಪೊನ್ನಂಪೇಟೆ, ಹುದಿಕೇರಿ ಹೋಬಳಿ, ಮಡಿಕೇರಿ ತಾಲೂಕಿನ ಮಡಿಕೇರಿ ಹೋಬಳಿ, ನಾಪೋಕ್ಲು ಹೋಬಳಿ, ಸೋಮವಾರಪೇಟೆ ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗಳಲ್ಲಿಯೂ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಕಡೆಗಳಲ್ಲಿಯೂ ದಿನವೊಂದಕ್ಕೆ 10 ಇಂಚಿಗಿಂತಲೂ ಅಧಿಕ ಮಳೆಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಸುರಿದಿರುವ ಮಳೆ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಸರಾಸರಿ 7.2 ಇಂಚು ಮಳೆ ಸುರಿದಿದೆ. ಮಡಿಕೇರಿ ತಾಲೂಕಿನಲ್ಲಿ 10.18 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 9.60 ಇಂಚು ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 3.60 ಇಂಚಿನಷ್ಟು ಸರಾಸರಿ ಮಳೆಯಾಗಿದೆ.
ಹೋಬಳಿವಾರು
ಭಾಗಮಂಡಲ ಹೋಬಳಿಯಲ್ಲಿ ಅತ್ಯಧಿಕ 16 ಇಂಚು, ಶ್ರೀಮಂಗಲ 13.04, ನಾಪೋಕ್ಲು 13.03, ಪೊನ್ನಂಪೇಟೆ 10.60, ಶಾಂತಳ್ಳಿ 9.44, ಮಡಿಕೇರಿ 7.70, ಸಂಪಾಜೆ 4.60, ವೀರಾಜಪೇಟೆ 10.80, ಹುದಿಕೇರಿ 11.60, ಕೊಡ್ಲಿಪೇಟೆ 6.60, ಅಮ್ಮತ್ತಿ 7.8, ಸೋಮವಾರಪೇಟೆ 5.29 ಇಂಚಿನಷ್ಟು ಮಳೆಯಾಗಿದೆ. ಸುಂಟಿಕೊಪ್ಪ 3.84, ಶನಿವಾರಸಂತೆ 3.69, ಕುಶಾಲನಗರದಲ್ಲಿ 2.21 ಇಂಚು ಮಳೆ ಸುರಿದಿದೆ.
ಹಾರಂಗಿ ಜಲಾಶಯ
ಹಾರಂಗಿ ಜಲಾಶಯಕ್ಕೆ ಬೆಳಿಗ್ಗೆಯ ವರದಿಯಂತೆ 25,623 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದು, ನದಿಗೆ 16,041 ಕ್ಯೂಸೆಕ್ಸ್ ಹಾಗೂ ನಾಲೆಗೆ 800 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ.