ಮಡಿಕೇರಿ, ಆ. 9: ಕೆಲವೊಂದು ಅನಾಹುತಗಳಿಗೆ ಸ್ಥಳಿಯ ಸಂಸ್ಥೆ, ಸ್ಥಳಿಯ ರಾಜಕಾರಣ ಹಾಗೂ ಜಿಲ್ಲಾಡಳಿತ ನೇರವಾಗಿ ಹೊಣೆ ಯಾಗಿರುತ್ತಾರೆ. ವಿಪರ್ಯಾಸವೆಂದರೆ ಅನಾಹುತಕ್ಕೆ ಕಾರಣರಾದವರೇ ಕಾನೂನು ಪಾಲಕರೂ ಆಗಿರುತ್ತಾರೆ. ಇನ್ನು ನ್ಯಾಯದ ಮಾತು ದೂರವೇ ಬಿಡಿ. ಗೋಣಿಕೊಪ್ಪಲಿನಲ್ಲಿ ಕಳೆದ 20 ವರ್ಷಗಳಿಂದ ಇಲ್ಲಿನ 2ನೇ ವಿಭಾಗದಲ್ಲಿ ಹರಿಯುವ ‘ಕೀರೆಹೊಳೆಯ’ ದಡದಲ್ಲಿ ಬರುವ ಗೋಣಿಕೊಪ್ಪದ ಮಾರುಕಟ್ಟೆ, ಕೊಪ್ಪ, ಈ ಭಾಗದಲ್ಲಿ ಪ್ರತಿ ಮಳೆಗಾಲದಲ್ಲೂ. ವಿಶೇಷವಾಗಿ ಹೆಚ್ಚು ಮಳೆ ಬಿದ್ದು ವರುಷ ಇಲ್ಲಿನ ನಿವಾಸಿಗಳಿಗೆ ಪರಿಹಾರ ಕೇಂದ್ರ ತೆರೆಯಲಾಗುತ್ತದೆ. ಜೀವ ಉಳಿಸಿಕೊಳ್ಳುವ ಸಲುವಾಗಿ ಇಲ್ಲಿನ ನಿವಾಸಿಗಳು ಈ ಸಮಸ್ಯೆಗೆ ತಮ್ಮನ್ನು ತಾವು ದೂಡಿಕೊಂಡಿರುವ ತಪ್ಪಿಗೆ ಬೇರೆ ವಿಧಿಯಿಲ್ಲದೆ ಅಲ್ಲಿಯೇ ಮಳೆಗಾಲ ಕಳೆಯುವ ಅನಿವಾರ್ಯತೆ. ಅಷ್ಟಕ್ಕೂ ಇದು ಹೊಳೆ ಜಾಗವೆಂದು ಗೊತ್ತಿದ್ದೂ, ಎರಡು ದಶಕಗಳ ಹಿಂದೆ ಇದನ್ನು ಒತ್ತುವರಿ ಮಾಡಿಕೊಂಡು ಮನೆ ಕಟ್ಟಿಕೊಂಡು ಹೀಗೆ ಪಜೀತಿಗೆ ಸಿಲುಕಿಕೊಂಡಿರುವವರು ಇವರುಗಳೇ. ಆzರೂ ಈ ಸಮಸ್ಯೆಗೆ ಮೂಲ ಕಾರಣಕರ್ತರು ಅಂದು ಒತ್ತವರಿ ಮಾಡಿಕೊಂಡ ಸಂದರ್ಭ ಹಣದ ಆಸೆಗೋ, ಓಟ್ ಬ್ಯಾಂಕ್ ರಾಜಕೀಯ ನಡೆಸುವ ಸಲುವಾಗಿಯೋ ಇವರ ಹೆಸರಿಗೆ ಹೊಳೆಯ ಜಾಗವನ್ನು ಒತ್ತುವರಿ ಮಾಡಿಕೊಟ್ಟು ಜಾಗವನ್ನು ಅವರವರ ಹೆಸರಿಗೆ ವರ್ಗ ಮಾಡಿ ಕೊಟ್ಟವರಿಗೆ ನೇರವಾಗಿ ಸಲ್ಲುತ್ತದೆ.
ಈ ನಡುವೆ ಕ್ಷೇತ್ರದ ಶಾಸಕರಾದ ಕೆ.ಜಿ ಬೋಪಯ್ಯನವರು ಸುಮಾರು 8 ವರ್ಷಗಳ ಹಿಂದೆ ಈ ಕುರಿತು ಗಮನಿಸಿ ಇಲ್ಲಿನ ನಿವಾಸಿಗಳಿಗೆ ಬೇರೆ ಕಡೆ ಬದಲಿ ನಿವಾಸವನ್ನು ಒದಗಿಸುವ ಕುರಿತು ಒಂದಿಷ್ಟು ಗಮನಹರಿಸಿದ್ದರು ಅವರ ಈ ಯೋಜನೆ ಹಾಗೂ ಮಳೆಗಾಲದ ಅಲ್ಲಿನ ಜನರಿಗೆ ಶಾಶ್ವತ ಪರಿಹಾರ ಒದಗಿಸುವ ಆಶಯ ಕಾರ್ಯರೂಪಕ್ಕೆ ಈವರೆಗೂ ಬರಲಿಲ್ಲ. ಮಳೆಗಾಲದಲ್ಲಿ ಈ ಸಮಸ್ಯೆಯ ಕುರಿತು ಶಾಶ್ವತ ಪರಿಹಾರದ ಕುರಿತು ಒಂದಿಷ್ಟು ಮಾತುಕತೆಯಾಗುತ್ತದೆಯೇ ಹೊರತು. ನಂತರ ಮಳೆಗಾಲ ಮುಗಿದ ಮೇಲೆ ಈ ಕುರಿತು ಯಾರು ಕೂಡ ತಲೆಕೆಡಿಸಿಕೊಳ್ಳುವದಿಲ್ಲ ಯಥಾಪ್ರಕಾರ ಈ ವಿದ್ಯಾಮಾನ ಮುಂದಿನ ಮಳೆಗಾಲಕ್ಕೆ ಮುಂದುವರೆಯುತ್ತದೆ. 8 ವರ್ಷಗಳ ಹಿಂದೆ ಈ ಗ್ರಾಮದ ಅದ್ಯಕ್ಷರಾಗಿದ್ದ ರಾಜೇಶ್ ಅವರ ಅವಧಿಯಲ್ಲಿ ರಾಜೇಶ್ರವರು ಹಾಗೂ ಅಂದಿನ ಗ್ರಾಮ ಪಂಚಾಯಿತಿ ಸದಸ್ಯ ರಾಗಿದ್ದ (ಅವರು ಹಾಲಿ ಜಿಲ್ಲಾ ಪಂಚಾಯತಿ ಸದಸ್ಯರಾಗಿರುವ) ಸಿ.ಕೆ ಬೋಪಣ್ಣನವರು ಮುತುವರ್ಜಿವಹಿಸಿ, ಜಿಲ್ಲಾಡಳಿತಕ್ಕೆ ಮನವಿ ಮಾಡಿ ಸರ್ವೆ ಕಾರ್ಯ ಈ ಸ್ಥಳದಲ್ಲಿ ನಡೆದಿದೆ. ಆ ಸಂದರ್ಭ ಅಂದಿನ ಉಪ ವಿಭಾಧಿಕಾರಿಯಾಗಿದ್ದ ಡಾ. ಎಂ.ಆರ್. ರವಿಯವರು ಖುದ್ದು ಹಾಜರಿದ್ದು, ಈ ಸರ್ವೆ ಕಾರ್ಯವನ್ನು ಮಾಡಿಸಿದ್ದರು. ಈ ಸ್ಥಳಗಳು ಕೀರೆಹೊಳೆ ಒತ್ತುವರಿ ಜಾಗವೆಂದು ಆ ಸರ್ವೆಯಲ್ಲಿ ಸಾಬೀತಾಗಿ, ಅಲ್ಲಿ ಒತ್ತುವರಿ ಮಾಡಿಕೊಂಡಿರುವ ಸುಮಾರು 48 ಕುಟುಂಬಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದರೂ ಅವರಾರು ಅಲ್ಲಿಂದ ಕದಲಲಿಲ್ಲ. ಆ 48 ಕುಟುಂಬದಲ್ಲಿ ಬಹುತೇಕರು ಸ್ಥಿತಿವಂತರಾಗಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲ ರಾಜಕೀಯ ವ್ಯಕ್ತಿಗಳ ಕಾಣದ ಕೈ ಕೆಲಸ ಮಾಡುತ್ತಿರುವದಾಗಿಯೂ ಸ್ಥಳಿಯ ಮಟ್ಟದಲ್ಲಿ ಸುದ್ದಿಯಾಗಿದೆ. ಅದೇ ಜಾಗದಲ್ಲಿ ಬಡವರು ಇದ್ದಿದ್ದರೆ ಇಷ್ಟರಲ್ಲಾಗಲೇ ರಾತ್ರೋ ರಾತ್ರಿ ಜೆ.ಸಿ.ಬಿ ಯಂತ್ರದ ಮೂಲಕ ಗುಡಿಸಿ ಗುಂಡಾಂತರ ಮಾಡಿ. ಅವರ ಮೇಲೆ ಲಾಠಿ ಬೀಸಿ ಓಡಿಸಿರುತ್ತಿದ್ದರೇನೋ. ಗೋಣಿಕೊಪ್ಪದ ಶಿಕ್ಷಣ ಸಂಸ್ಥೆ ಯೊಂದು ಇದೇ ಜಾಗದಲ್ಲಿ ಸುಮಾರು ಒಂದೂವರೆಗೂ ಹೆಚ್ಚು ಎಕರೆ ಪ್ರದೇಶವನ್ನು ಬಳಸಿಕೊಂಡಿರುವದು ಎಲ್ಲರಿಗೂ ತಿಳಿದ ಸತ್ಯ. ಹೀಗೆ ಅಕ್ರಮವಾಗಿ ಒತ್ತುವರಿಯಾಗಿರುವ ಸ್ಥಳದಲ್ಲೇ ಗ್ರಾಮ ಪಂಚಾಯಿತಿ ಇನ್ನು ಸ್ವಲ್ಪ ಮುಂದೆ ಹೋಗಿ ತಡೆಗೋಡೆ ನಿರ್ಮಿಸಲು ಅವಕಾಶ ಮಾಡಿಕೊಟ್ಟು ತಡೆಗೋಡೆಯನ್ನು ನಿರ್ಮಿಸಲಾಗಿತ್ತು. ಅದೀಗ ಈ ಮಳೆಗೆ ಕುಸಿದು ನೆಲ್ಲಕಚ್ಚಿ ಮಕಾಡೆ ಮಲಗಿದೆ.
25 ವರ್ಷಗಳ ಹಿಂದೆ ಕೀರೆಹೊಳೆ ಹಾಗೂ ಕೈತೊಡು ಹೊಳೆಗಳು ಸರಾಗವಾಗಿ ಹರಿಯುತ್ತಿದ್ದವು. 1960ರ ಸಮಯದಲ್ಲಿ ಗೋಣಿಕೊಪ್ಪಲು ಭಾರೀ ಮಳೆಯಿಂದಾಗಿ ಅರ್ಧದಷ್ಟು ಮುಳುಗಡೆಯಾಗಿತ್ತು ಎಂದು ಆಗಿದ್ದ ಹಿರಿಯರು ಹೇಳುತ್ತಾರೆ. ಆಗ ಈ ರೀತಿ ಒತ್ತುವರಿಗಳು ಹಾಗೂ ಅನಧಿಕೃತ ಕಟ್ಟಡಗಳು ಇರಲಿಲ್ಲ. ಆ ಸಂದರ್ಭ ದಲ್ಲಿ ಅಮ್ಮತ್ತಿ, ಹೊಸೂರು, ಕಳತ್ಮಾಡು, ಹಾತೂರು ವಿಭಾಗದಲ್ಲಿ ಅತೀ ಹೆಚ್ಚು ಮಳೆ ಆದರೆ ಮಾತ್ರ ಗೋಣಿಕೊಪ್ಪ ಮುಳುಗಡೆಯಾಗುತ್ತಿ ತ್ತಂತೆ. ಈಗ ಕಾಲ ಬದಲಾಗಿದೆ. ನೀರು ಹರಿಯುವ ತೋಡುಗಳು, ಗದ್ದೆಗಳು ಬಡಾವಣೆಗಳಾಗಿ ಮಾರ್ಪಾಡು ಆಗಿ ಆಗಿನ ಅರ್ಧಮಳೆ ಆದರೆ ಗೋಣಿಕೊಪ್ಪ ಪೂರ್ತಿ ಮುಳುಗುವ ಅಪಾಯವಿದೆ. ಈ ಬಾರಿ ಪೊನ್ನಂಪೇಟೆಯಲ್ಲಿ ಸುರಿದ ದಾಖಲೆ ಮಳೆ ಇಲ್ಲಿ ಏನಾದರು ಸುರಿದಿದ್ದರೆ ಅಥವಾ ಮುಂದೆ ಎಂದಾದರೂ ಸುರಿದರೆ ಕಾದಿದೆ ಭಾರಿ ದೊಡ್ಡ ಅಪಾಯ.
ಈ ಕೀರೆಹೊಳೆಯಲ್ಲಿ ಪ್ರತಿ ಮಳೆಗಾಲಕ್ಕೂ ಮುಂಚೆ ನೀರಿನ ಹರಿವು ದಡದಿಂದ ಮೇಲೆ ಕ್ರಮಿಸುವ ದನ್ನು ತಡೆಯಲು ಇಲ್ಲಿನ ಕೆಲ ಅಧಿಕಾರಿಗಳು ಹಾಗೂ ರಾಜಕೀಯ ವ್ಯಕ್ತಿಗಳು ಹೊಳೆಯ ಹೂಳೆತ್ತುವ ಕೆಲಸವನ್ನು ಅತಿಯಾಗಿ ಕಾಳಜಿವಹಿಸಿ ಮಾಡುತ್ತಿದ್ದರು. ನೀರುನುಗ್ಗಿ ಎಲ್ಲಿ ಅನಾಹುತ ಆದೀತು ಎನ್ನುವ ಅವರ ಭಯದಿಂದ ಈ ಕಾರ್ಯ ಪ್ರತಿವರ್ಷವೂ ನಡೆಯು ತ್ತಿತ್ತು. ಈ ವರ್ಷ ಸರಿಯಾಗಿ ಹೂಳೆತ್ತದೆ. ಜೊತೆಗೆ ಹೆಚ್ಚು ಮಳೆಯಾದ ಕಾರಣ ನೀರು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು ಕಾರಣಕರ್ತರು ಭಯಬೀತರಾಗಿ ದ್ದಾರೆ. ಗೋಣಿಕೊಪ್ಪಲು ಸುತ್ತಮುತ್ತ ಇದ್ದ ಗದ್ದೆಗಳೆಲ್ಲಾ ಪರಿವರ್ತನೆ ಗೊಂಡು ನಿವೇಶನಗಳಾಗಿರುವದೂ ಕೂಡ ಇಂದಿನ ದುಸ್ಥಿತಿಗೆ ಕಾರಣವಾಗಿದೆ. ಸರಾಗವಾಗಿ ಹರಿಯುತ್ತಿದ್ದ ನೀರಿಗೆ ದಾರಿ ಇಲ್ಲದೆ, ವೈಜ್ಞಾನಿಕ ಮಾರ್ಗ ಬಳಸಿ ವ್ಯವಸ್ಥೆಯೂ ಇಲ್ಲದೆ ಇರುವದು ಇತರ ಜನರೂ ತೊಂದರೆ ಪಡೆಯುವಂತಾಗಿದೆ. ಬೃಹತ್ ಕಟ್ಟಡಗಳು ವಾಸದ ಮನೆಗಳೂ ಕೂಡಾ ಇಂತಹ ಬಡಾವಣೆಗಳಲ್ಲಿ ನಿರ್ಮಾಣಗೊಂಡಿದ್ದು, ಈಗಿನ ಮಳೆಗೆ ಮುಳುಗಡೆಯಾಗಿವೆ. ಮುಂದಿನ ದಿನಗಳಲ್ಲಿ ಬಡಾವಣೆ ನಿರ್ಮಾಣದಂತಹ ಕೆಲಸಕ್ಕೆ ಅವಕಾಶ ಕೊಡುವ ಮೊದಲು ಸಂಬಂಧಿಸಿ ದವರು ಗಮನ ಹರಿಸಿದರೆ ಗೋಣಿಕೊಪ್ಪಕ್ಕೆ ಒಳಿತು.
-ವಿಶೇಷ ವರದಿ : ಶ್ರೀಧರ್ ನೆಲ್ಲಿತ್ತಾಯ