ಮಡಿಕೇರಿ, ಆ. 9: ಕೊಡಗಿನಲ್ಲಿ ಎರಡು ದಿನಗಳಿಂದ ತೀವ್ರಗೊಂಡಿರುವ ಮಳೆ ಪರಿಸ್ಥಿತಿ ಎದುರಿಸಲು ಒಂದು ತಿಂಗಳು ಮುಂಚಿತವಾಗಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದರೂ, ತುರ್ತು ಸೇವೆಗೆ ದೂರವಾಣಿ ಹಾಗೂ ಮೊಬೈಲ್‍ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಅವರ ಗಮನ ಸೆಳೆದರು. ಈ ದಿನ ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಕೇಂದ್ರ ಸಚಿವರು ಹಾಗೂ ರಾಜ್ಯ ಬಿಜೆಪಿ ವರಿಷ್ಠರ ಬಳಿ ಈ ಸಮಸ್ಯೆ ಪ್ರತಿಧ್ವನಿಸಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ವಿಷಯ ಪ್ರಸ್ತಾಪಿಸುತ್ತಿದ್ದಂತೆಯೇ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ ಧ್ವನಿಗೂಡಿಸಿದರು. ಈ ವೇಳೆ ಸಿಡಿಮಿಡಿಗೊಂಡ ಕೇಂದ್ರ ಸಚಿವರು, ತಕ್ಷಣ ಮುಖ್ಯಮಂತ್ರಿಗಳ ಕಾರ್ಯಾಲಯಕ್ಕೆ ಕರೆ ಮಾಡಿ, ಸಂಬಂಧಿಸಿದ ಅಧಿಕಾರಿಗೆ ನೋಟೀಸ್ ಜಾರಿಗೆ ಸಲಹೆ ಮಾಡಿದರು.

ಅಲ್ಲದೆ ಕರ್ನಾಟಕ ಪ್ರಾದೇಶಿಕ ಬಿ.ಎಸ್.ಎನ್.ಎಲ್. ಮಹಾ ಪ್ರಬಂಧಕರಿಗೆ ಕರೆ ಮಾಡಿ, ಕೊಡಗಿನ ಪರಿಸ್ಥಿಗಿ ವಿವರಿಸುತ್ತಾ, ಇಂಥ ಸಂದರ್ಭ ಮಾನವೀಯ ನೆಲೆಯಲ್ಲಿ ಸ್ಪಂದಿಸದೆ ಇದ್ದರೆ ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲು ನಿರ್ದೇಶಿಸಿದರು. ಕೊಡಗು ದ್ವೀಪದಂತಿರುವ ಪ್ರವಾಹ ಸಂದರ್ಭ ದೂರವಾಣಿ, ಮೊಬೈಲ್ ಸೇವೆಯೂ ಸ್ಥಗಿತಗೊಂಡರೆ ಜನರ ರಕ್ಷಣೆ ಹೇಗೆಂದು ಆಕ್ರೋಶ ವ್ಯಕ್ತಪಡಿಸಿದರು.

ತಕ್ಷಣ ಕೊಡಗು ವೃತ್ತ ಬಿ.ಎಸ್.ಎನ್.ಎಲ್. ಅಧಿಕಾರಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನು ಕಂಡು ಮಾಹಿತಿ ನೀಡಲು ಮುಂದಾಗುವಂತೆ ತಾಕೀತು ಮಾಡಿದರು. ಈ ವೇಳೆ ಡೀಸೆಲ್ ಕೊರತೆ ನೆಪ ಹೇಳದೆ ಎಲ್ಲ ವಿನಿಮಯ ಕೇಂದ್ರಗಳು ಹಾಗೂ ಟವರ್‍ಗಳನ್ನು ಕಾರ್ಯನಿರ್ವಹಿಸುವಂತೆ ನಿಗಾ ವಹಿಸಬೇಕೆಂದು ಕಟ್ಟಪ್ಪಣೆ ಮಾಡಿದರು.

ದೊರಕದ ನೆರವು : ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ನೂರಾರು ಕುಟುಂಬಗಳಿಗ ಸರಕಾರದಿಂದ ಕೇವಲ ರೂ. 3800 ಮಾತ್ರ ಪರಿಹಾರ ಲಭಿಸಿದ್ದು, ವರ್ಷ ಕಳೆದರೂ ಯಾವದೇ ಇತರ ಸೌಲಭ್ಯ ದೊರಕದಿರುವ ಬಗ್ಗೆ ಶಾಸಕ ಸಿ.ಟಿ. ರವಿ ಪ್ರಸ್ತಾಪಿಸಿದರು. ಈ ಬಗ್ಗೆ ಜಾಗ ದಾಖಲೆಗಳ ಕೊರತೆ, ಬಾಡಿಗೆ ಮನೆ ವಾಸದವರಿಗೆ ನೆರವು ನೀಡಲು ತಾಂತ್ರಿಕ ತೊಂದರೆ ಇದೆ ಎಂದು ಜಿಲ್ಲಾಧಿಕಾರಿ ಸ್ಪಷ್ಪಪಡಿಸಿದರು.

ಕೊರತೆ ಇಲ್ಲ : ಜಿಲ್ಲೆಯಲ್ಲಿ ಈಗಿನ ಪ್ರವಾಹ ಸ್ಥಿತಿ ಎದುರಿಸಲು ಈಗಾಗಲೇ ಮೂರು ಎನ್‍ಡಿಆರ್‍ಎಫ್ ತಂಡ ಕರೆಸಿಕೊಂಡಿದ್ದು, ಮಿಲಿಟರಿಯ ಒಂದು ತುಕಡಿ ತೊಡಗಿಸಿಕೊಳ್ಳಲಾಗಿದ್ದು, ಹಾಸನದಿಂದ ಅಗತ್ಯ ದೋಣಿ ವ್ಯವಸ್ಥೆ, ಮುಳುಗು ತಜ್ಞರ ಸಹಿತ ಕ್ಷಿಪ್ರ ಕಾರ್ಯ ತಂಡಗಳನ್ನು ರಚಿಸಿಕೊಂಡಿದ್ದು, ಜನತೆಯ ಮಾಹಿತಿ ಬೆನ್ನಲ್ಲೇ ರಕ್ಷಣೆಗೆ ಧಾವಿಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದರು.

ಕಹಿ ಅನುಭವ ಬೇಡ : ಕಳೆದ ವರ್ಷ ಪ್ರಾಕೃತಿಕ ವಿಕೋಪ ಸಂತ್ರಸ್ತರಿಗೆ ನೆರವು ಲಭಿಸದಿರುವದು, ಪರ್ಯಾಯ ಮನೆ ನಿರ್ಮಿಸದಿರುವದು, ತುರ್ತು ಸ್ಪಂಧನ ದೊರಕದ ಬಗ್ಗೆ ಮರು ವಿಮರ್ಶಿಸುವದು ಬೇಡವೆಂದು ತಿಳಿ ಹೇಳಿದ ಸಚಿವ ಡಿ.ವಿ. ಸದಾನಂದಗೌಡ, ಜಿಲ್ಲಾಡಳಿತ ಆಯ ಗ್ರಾ.ಪಂ. ಅಧಿಕಾರಿಗಳು, ಕಂದಾಯ ಇಲಾಖೆ, ಜನಪ್ರತಿನಿಧಿಗಳ ಅಭಿಪ್ರಾಯ ಕ್ರೋಢಿಕರಿಸಿ ಎಲ್ಲ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ತಿಳಿ ಹೇಳಿದರು. ಪ್ರಸಕ್ತ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಯಾವದಕ್ಕೂ ಹಣದ ಕೊರತೆಯಾಗದಂತೆ ಕಾಳಜಿ ವಹಿಸುವದಾಗಿ ಭರವಸೆ ನೀಡಿದರು.

ರಾಜ್ಯ ಬಿಜೆಪಿ ನಿಯೋಗದೊಂದಿಗೆ ಪಕ್ಷದ ವಿವಿಧ ಘಟಕಗಳ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.