ಪೊನ್ನಂಪೇಟೆ, ಆ.9: ಪೊನ್ನಂಪೇಟೆಯ ಸುತ್ತ ಮುತ್ತ ಮಳೆಯ ರುದ್ರ ನರ್ತನ ಮುಂದುವರೆದಿದ್ದು ಸುತ್ತ ಮುತ್ತಲಿನ ಪ್ರದೇಶದ ಜನರು ಸಂಕಷ್ಟಕ್ಕೀಡಾಗಿದ್ದು ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ ಸಧ್ಯಕ್ಕೆ 14 ಜನ ಆಶ್ರಯ ಪಡೆದಿದ್ದಾರೆ. ಶಿವಕಾಲೋನಿಯ ಶಿವಲಿಂಗ ಮೂರ್ತಿ ಎಂಬವರ ಮನೆಗೆ ನೀರು ನುಗ್ಗಿದ್ದು ಮನೆಯ ಗೋಡೆ ಕುಸಿದು ಬೀಳುವ ಹಂತದಲ್ಲಿತ್ತು. ಈ ವಿಷಯ ತಿಳಿದ ಪೊನ್ನಂಪೇಟೆ ಕ್ಲಸ್ಟರ್‍ನ ಸಂಪನ್ಮೂಲ ಶಿಕ್ಷಕರಾದ ತಿರುನೆಲ್ಲಿಮಾಡ ಜೀವನ್ ಹಾಗೂ ರಾಮಕೃಷ್ಣ ಅವರನ್ನು ಪರಿಹಾರ ಕೇಂದ್ರಕ್ಕೆ ಕರೆತಂದರು.
ತೊರೆಬೀದಿಯ ಕನಕ ಹಾಗೂ ಸೋಮ ಎಂಬವರ ಮನೆಗೆ ಮಳೆನೀರು ನುಗ್ಗಿ ಹಿಂಬದಿಯ ಗೋಡೆ ಕುಸಿದಿರುವ ಕಾರಣ ಮನೆಯ ಸದಸ್ಯರೆಲ್ಲರೂ ಪೊನ್ನಂಪೇಟೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ನಿಸರ್ಗ ನಗರದ ರೋಸಿ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದಿದೆ. ಶಿವಕಾಲೋನಿಯ ಸಾವಿತ್ರಿ ಎಂಬುವವರ ಮನೆಗೂ ಹಾನಿಯಾಗಿದೆ. ಇವರೆಲ್ಲರೂ ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಪರಿಹಾರ ಕೇಂದ್ರದಲ್ಲಿ ಪೊನ್ನಂಪೇಟೆ ಕ್ಲಸ್ಟರ್ ಸಿ.ಆರ್.ಪಿ. ತಿರುನೆಲ್ಲಿಮಾಡ ಜೀವನ್ ಹಾಗೂ ಪೊನ್ನಂಪೇಟೆ ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಾಮಕೃಷ್ಣ ಬಿ. ಶೆಟ್ಟಿಗೇರಿ ಗ್ರಾಮ ಲೆಕ್ಕಾಧಿಕಾರಿ ಶಾಂತಮ್ಮ, ಅರ್ವತೊಕ್ಕಲು ಗ್ರಾಮ ಸಹಾಯಕಿ ಸರೋಜಿನಿ ಹಾಜರಿದ್ದಾರೆ. ಸ್ಥಳಕ್ಕೆ ರೆವಿನ್ಯೂ ಅಧಿಕಾರಿ ರಾಧಾಕೃಷ್ಣ, ಗ್ರಾಮ ಆರೋಗ್ಯಾಧಿಕಾರಿಗಳಾದ ಡಾ.ರೇಖಾ ಹಾಗೂ ಡಾ.ರವೀಂದ್ರ , ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೂಕಳೆರ ಸುಮಿತ್ರ ಭೇಟಿ ನೀಡಿದ್ದರು.
ನೀರಿಗೆ ಬಿದ್ದು ಸಾವು: ಹುದೂರು ಗ್ರಾಮದ ಸುಬ್ರಮಣಿ (50) ಎಂಬವರು ಬಿದಿರು ಕಣಿಲೆ ಕುಯ್ಯಲು ತೆರಳಿದ್ದ ಸಂದರ್ಭ ಮಂಜುವಂಡ ಅರುಣ ಎಂಬವರ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾರೆ.
ಐಟಿಐ ಕಾಲೇಜಿನಲ್ಲಿ ಜಲ: ಪೊನ್ನಂಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಟ್ಟಡದ ಹಿಂಭಾಗದ ಗೋಡೆಗಳಿಂದ ಜಲ ಉಂಟಾಗಿದ್ದು ಕಟ್ಟಡದ ಒಳಗೆಲ್ಲ ನೀರು ತುಂಬಿಕೊಂಡಿದೆ. ತರಗತಿಯ ಕೊಠಡಿಗಳು. ಪ್ರಾಂಶುಪಾಲರ ಕಛೇರಿ ಎಲ್ಲಾ ಜಲಮಯವಾಗಿದ್ದು ಅಲ್ಲಿನ ಸಿಬ್ಬಂದಿಗಳು ಕಟ್ಟಡದ ಒಳಗಿನ ನೀರನ್ನು ಹೊರಗೆ ಹಾಕುತ್ತಿದ್ದರೂ ಮತ್ತೆ ಮತ್ತೆ ನೀರು ತುಂಬಿಕೊಳ್ಳುತ್ತಿದ್ದು. ಕಳೆದ ಮೂರು ದಿನಗಳಿಂದಲೂ ಸಿಬ್ಬಂದಿಗಳು ನೀರು ಹೊರ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಕಟ್ಟಲಾಗಿದ್ದ ಕಟ್ಟದ ಹಿಂಬದಿಯ ಗೋಡೆಯಿಂದ ಇಷ್ಟೊಂದು ಪ್ರಮಾಣದ ನೀರು ಒಳ ನುಗ್ಗುತ್ತಿರುವದು ಸಿಬ್ಬಂದಿಗಳಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ
ಮತ್ತೂರು ಗ್ರಾಮದ ಆಲೇಮಾಡ ನಾಣಯ್ಯ ಎಂಬವರ ಕಾರ್ ಶೆಡ್ ಮೇಲೆ ಭಾರಿ ಗಾತ್ರದ ಮರ ಮುರಿದು ಬಿದ್ದ ಪರಿಣಾಮ ಅವರ ಮಹೇಂದ್ರ ಬೊಲೆರೋ ವಾಹನ ಹಾಗೂ ಪಂಪ್ ಸೆಟ್‍ಗೆ ಹಾನಿಯಾಗಿದೆ.
ಹಳ್ಳಿಗಟ್ಟು ಸಮೀಪ ಸೀತಾಕಾಲೋನಿಗೆ ನೀರು ನುಗ್ಗಿದ್ದು ಸುಮಾರು 60 ಜನ ಹುದೂರಿನ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.
-ಅಗ್ನಿ ಹರ್ಷ