ಮಡಿಕೇರಿ, ಆ. 9: ಕೊಡಗು ಜಿಲ್ಲೆಯಲ್ಲಿ ವಿಪರೀತ ಮಳೆಯೊಂದಿಗೆ ಜಲಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿರುವ 604 ಕುಟುಂಬಗಳ ಒಟ್ಟು 2136 ಸಂತ್ರಸ್ತರಿಗೆ 25 ಕಡೆಗಳಲ್ಲಿ ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದೆ.
ಮಡಿಕೇರಿ ತಾಲೂಕಿನಲ್ಲಿ ಒಟ್ಟು 9 ಪರಿಹಾರ ಕೇಂದ್ರದೊಂದಿಗೆ 157 ಕುಟುಂಬಗಳ 574 ಮಂದಿಗೆ ಆಸರೆ ಕಲ್ಪಿಸಲಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಅವಶ್ಯಕತೆ ಇರುವ 4 ಪರಿಹಾರ ಕೇಂದ್ರದೊಂದಿಗೆ 62 ಕುಟುಂಬಗಳ 213 ಮಂದಿಗೆ ಆಸರೆ ಒದಗಿಸಲಾಗಿದೆ. ವೀರಾಜಪೇಟೆ ತಾಲೂಕಿನ ಹನ್ನೆರಡು ಕಡೆಗಳಲ್ಲಿ ಪರಿಹಾರ ಕೇಂದ್ರ ಆರಂಭಿಸಿದ್ದು, 385 ಕುಟುಂಬಗಳೊಂದಿಗೆ 1349 ಮಂದಿ ಆಸರೆ ಹೊಂದಿದ್ದಾರೆ. ಇದುವರೆಗೆ ಕೊಡಗಿನಲ್ಲಿ ಒಟ್ಟು 25 ಕೇಂದ್ರಗಳು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ.
25 ಪರಿಹಾರ ಕೇಂದ್ರಗಳು
ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅತಿವೃಷ್ಟಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮಕೈಗೊಂಡಿದೆ.
ಮಡಿಕೇರಿ ತಾಲೂಕಿನ ಕಾಂತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಾಮಥ್ರ್ಯ ಸೌಧ, ಜಿ.ಪಂ. ಸಂಪನ್ಮೂಲ ಕೇಂದ್ರ, ಕೇಂದ್ರೀಯ ವಿದ್ಯಾಲಯ (ಜಿಲ್ಲಾ ತರಬೇತಿ ಕೇಂದ್ರ ಹಳೇ ಕಟ್ಟಡ), ಹೊದ್ದೂರು, ವಾಟೆಕಾಡು, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹೊದವಾಡ ಸರ್ಕಾರಿ ಪ್ರೌಢ ಶಾಲೆ, ಪಾರಾಣೆ ಕೊಣಂಜಗೇರಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಪೋಕ್ಲು ಸ .ಪದವಿ ಪೂರ್ವ ಕಾಲೇಜು ಈ ಕೇಂದ್ರಗಳಲ್ಲಿ ಒಟ್ಟು 157 ಕುಟುಂಬಗಳ, 574 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ಸೋಮವಾರಪೇಟೆ ತಾಲೂಕಿನಲ್ಲಿ ಹರದೂರು (ಮಾದಾಪುರ) ಚೆನ್ನಮ್ಮ ಕಾಲೇಜು, ಕುಶಾಲನಗರ ವಾಲ್ಮೀಕಿ ಭವನ, ನೆಲ್ಲಿಹುದಿಕೇರಿ ಬೆಟ್ಟದಕಾಡು ಅಂಗನವಾಡಿ ಕೇಂದ್ರ, ನೆಲ್ಲಿಹುದಿಕೇರಿ ಹಿರಿಯ ಪ್ರಾಥಮಿಕ ಶಾಲೆ ಈ ಕೇಂದ್ರಗಳಲ್ಲಿ ಒಟ್ಟು 62 ಕುಟುಂಬಗಳ 213 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ವೀರಾಜಪೇಟೆ ತಾಲೂಕಿನ ಕರಡಿಗೋಡು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಬಸವೇಶ್ವರ ಸಮುದಾಯ ಭವನ, ಕೊಂಡಂಗೇರಿ ಸ. ಹಿರಿಯ ಪ್ರಾಥಮಿಕ ಶಾಲೆ, ವೀರಾಜಪೇಟೆ ಪಟ್ಟಣದ ಬಿ.ಇ.ಒ. ಕಚೇರಿ ಹತ್ತಿರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಂಗಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಗೋಣಿಕೊಪ್ಪ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಹುದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ, ಕಾಕೋಟು ಪರಂಬು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಳೆಲೆ ಸಾರ್ವಜನಿಕ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಸಿದ್ದಾಪುರ ಆದಿಚುಂಚನಗಿರಿ ಪ್ರೌಢಶಾಲೆ, ಬೇಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಒಟ್ಟು 385 ಕುಟುಂಬಗಳ 1349 ಸಂತ್ರಸ್ತರು ಆಶ್ರಯ ಪಡೆದಿದ್ದಾರೆ.
ವ್ಯಾಪಕ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಪ್ರವಾಹದಿಂದಾಗಿ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ-ಕುಶಾಲನಗರ, ಕೊಯನಾಡು-ಜೋಡುಪಾಲ ಮೂರ್ನಾಡು-ವೀರಾಜಪೇಟೆ, ಅಯ್ಯಂಗೇರಿ-ಭಾಗಮಂಡಲ, ಗೋಣಿಕೊಪ್ಪ-ಪಾಲಿಬೆಟ್ಟ, ಗೋಣಿಕೊಪ್ಪ-ಪೊನ್ನಂಪೇಟೆ, ನಾಪೋಕ್ಲು-ಪಾರಾಣೆ, ಸಿದ್ದಾಪುರ-ಕರಡಿಗೋಡು, ಭಾಗಮಂಡಲ-ಮಡಿಕೇರಿ, ವೀರಾಜಪೇಟೆ-ಮಾಕುಟ್ಟ, ಭಾಗಮಂಡಲ-ನಾಪೋಕ್ಲು, ಭಾಗಮಂಡಲ-ತಲಕಾವೇರಿ, ಮೂರ್ನಾಡು-ನಾಪೋಕ್ಲು, ನಿಟ್ಟೂರು-ಬಾಳೆಲೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
25 ಪ್ರವಾಹ ಪ್ರದೇಶ : ಕಟ್ಟೆಮಾಡು ಪರಂಬು ಪೈಸಾರಿ, ಹೊದವಾಡ, ವಾಟೆಕಾಡು, ಐಕೊಳ, ನಾಪೋಕ್ಲು, ಬೇತು, ಕಾಲೂರು, ಪಾರಾಣೆ, ಕೊಂಡಂಗೇರಿ, ಕಕ್ಕಬ್ಬೆ, ನಾಲಡಿ, ಬಲಮುರಿ, ಬಲ್ಲಮಾವಟಿ, ಪೇರೂರು, ಯವಕಪಾಡಿ, ಮರಂದೊಂಡ, ಚೇಲಾವರ, ಚೆಯ್ಯಂಡಾಣೆ, ಕಿರಂದಾಡು, ಎಮ್ಮೆಮಾಡು, ನೆಲಜಿ, ದೊಡ್ಡಪುಲಿಕೋಟು, ಅರಪಟ್ಟು, ಕಡಂಗ, ಭಾಗಮಂಡಲ, ಅಯ್ಯಂಗೇರಿ..
ವೀರಾಜಪೇಟೆ ತಾಲೂಕಿನ ನಿಡುಗುಂಬ, ಕಾನೂರು, ಬೆಕ್ಕೆಸೊಡ್ಲೂರು, ಅರುವತ್ತೊಕ್ಲು, ಕೈಕೇರಿ, ಹಾತೂರು, ಕುಂದ, ಹಳ್ಳಿಗಟ್ಟು, ಬಾಳೆಲೆ, ನಿಟ್ಟೂರು, ಕೊಟ್ಟಗೇರಿ, ಚೀನಿವಾಡ, ತೆರಾಲು, ಟಿ.ಶೆಟ್ಟಿಗೇರಿ, ಕರಡಿಗೋಡು, ಗುಹ್ಯ.
ಸೋಮವಾರಪೇಟೆ ತಾಲೂಕಿನ ಕುಂಬಾರಗುಂಡಿ, ಬೆಟ್ಟದಕಾಡು, ವಾಲ್ನೂರು ತ್ಯಾಗತ್ತೂರು, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ತಮ್ಮಣ್ಣ ಶೆಟ್ಟಿ ಬಡಾವಣೆ, ಇಂದಿರಾ ಬಡಾವಣೆ, ನಿಜಾಮುದ್ದೀನ್ ಬಡಾವಣೆ.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಅರಸುನಗರ, ನೆಹರುನಗರ, ಮಲೆತಿರಿಕೆ ಬೆಟ್ಟ, ಮೋಗರಗಲ್ಲಿ, ಸುಂಕದಕಟ್ಟೆ, ಅಪ್ಪಯ್ಯಸ್ವಾಮಿ ರಸ್ತೆ, ಸುಭಾಶ್‍ನಗರ, ವಿಜಯನಗರ.
ಕೊಣನೂರು-ವೀರಾಜಪೇಟೆ-ಮಾಕುಟ್ಟ ರಾಜ್ಯ ಹೆದ್ದಾರಿ 91 ರಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗಿದೆ. ಈ ರಸ್ತೆಯು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿದ್ದು, ಭಾರೀ ಮಳೆಯಾಗುತ್ತಿರುವದರಿಂದ ಭೂ ಕುಸಿತ ಮತ್ತು ಮರಗಳು ಬೀಳುವ ಸಾಧ್ಯತೆಗಳು ಇದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಈ ರಸ್ತೆಯಲ್ಲಿ ಎಲ್ಲಾ ವಾಹನಗಳ ಸಂಚಾರವನ್ನು ಮುಂದಿನ ಆದೇಶದವರೆಗೆ ನಿಷೇಧಿಸಲಾಗಿದೆ.
ಅಲ್ಲದೆ ಗಾಳಿಬೀಡು-ಪಾಟಿ-ಕಾಲೂರು ರಸ್ತೆಯಲ್ಲಿ ಭೂ ಕುಸಿತ ಉಂಟಾಗಿದ್ದು, ಈ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ವಾಹನಗಳ ಸಂಚಾರವನ್ನು ನಿಷೇಧಿಸಿದ್ದು, ಗಾಳಿಬೀಡು-ಪಾಟಿ-ಕಾಲೂರು ಶಾಲೆ ರಸ್ತೆ ವ್ಯಾಪ್ತಿಯ ಗ್ರಾಮಸ್ಥರು ಈ ರಸ್ತೆಗೆ ಬದಲಾಗಿ ಕೆ.ನಿಡುಗಣೆ-ಹೆಬ್ಬೆಟ್ಟಗೇರಿ-ದೇವಸ್ತೂರು-ಕಾಲೂರು ರಸ್ತೆಯನ್ನು ಬಳಸುವಂತೆ ತಿಳಿಸಲಾಗಿದೆ.
ಅತೀವೃಷ್ಟಿಯಿಂದ ಆಗಬಹುದಾದ ತೊಂದರೆಗಳನ್ನು ಎದುರಿಸಲು ಜಿಲ್ಲಾಡಳಿತವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲೆಯಾದ್ಯಂತ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಯಾವದೇ ತುರ್ತು ಸಂದರ್ಭಗಳನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಜನರು ಯಾವದೇ ಆತಂಕ ಪಡುವ ಅಗತ್ಯವಿರುವದಿಲ್ಲ. ಜಿಲ್ಲೆಯ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳು ಮೊಕ್ಕಾಂ ಹೂಡಿದ್ದು, ತುರ್ತು ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಲ್ಲದೆ ಜಿಲ್ಲಾಧಿಕಾರಿಗಳ ಕಚೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ 24 ಗಂಟೆಯೂ ನಿಯಂತ್ರಣಾ ಕೊಠಡಿಗಳು ಕಾರ್ಯನಿರ್ವಹಿಸುತ್ತಿವೆ. ಹಾಗೆಯೇ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ವಾಟ್ಸಪ್‍ನಲ್ಲಿ ಸಹ ಪ್ರಕೃತಿ ವಿಕೋಪ ಸಂಬಂಧಿತ ದೂರು ಸ್ವೀಕರಿಸಲಾಗುತ್ತಿದ್ದು, ತುರ್ತು ಕ್ರಮ ವಹಿಸಲಾಗುತ್ತಿದೆ.
ಪ್ರಕೃತಿ ವಿಕೋಪ ಸಂಬಂಧಿತ ಹಾನಿಯ ಬಗ್ಗೆ ವಿವರ ಮತ್ತು ನೆರವು ಕೋರಲು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಂಟ್ರೋಲ್ ಕೊಠಡಿ ಸಂ : 08272-221077 ಮತ್ತು ವಾಟ್ಸಪ್ ನಂ. 8550001077ನ್ನು ಸಂಪರ್ಕಿಸಬಹುದು.