ಸೋಮವಾರಪೇಟೆ,ಆ.9: ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದಾಪಟ್ಟಣದಲ್ಲಿ ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಹತ್ತಾರು ಮನೆಗಳು ಮುಳುಗಡೆಯಾಗಿವೆ.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಮುಂಭಾಗದ ಮನೆಗಳು, ಹೊಟೇಲ್ ಮುಳುಗಡೆಯಾಗಿದೆ. ರಾಜ್ಯ ಹೆದ್ದಾರಿಯ ಮೇಲೆ ಮೂರು ಅಡಿಗಳಷ್ಟು ನೀರು ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿದೆ.
ಕಾವೇರಿ ನದಿ ನೀರು ಉಕ್ಕಿ ಹರಿದ ಪರಿಣಾಮವಾಗಿ ಮಾದಾಪಟ್ಟಣದ ಜೀವನ್, ಸುರೇಶ್, ನಾಗಣ್ಣ, ಜಲಜಾಕ್ಷಿ, ಶ್ರೀರಂಗ, ಎಸ್.ಎಂ. ರಾಜಣ್ಣ, ಲೋಕೇಶ್, ನಾಗೇಶ್, ಭಾಗ್ಯಮ್ಮ, ವಿಜಯ್, ರವಿ, ಬಾಬಣ್ಣ,ಪುಟ್ಟಣ್ಣ, ಕೃಷ್ಣ ಅವರುಗಳ ಮನೆಗಳು ಮುಳುಗಿ ಹೋಗಿದ್ದು, ದಾಮೋದರ್ ಮತ್ತು ಸತೀಶ್ ಅವರುಗಳ ಮನೆಗಳು ಸಂಪೂರ್ಣ ಕುಸಿದುಬಿದ್ದಿದೆ.
ಭಾಸ್ಕರ್ ಅವರಿಗೆ ಸೇರಿದ ಹೊಟೇಲ್ ಅತಿಥಿಯ ಹೊರಾಂಗಣ ನೀರಿನಿಂದ ಆವೃತವಾಗಿದ್ದು, ವ್ಯಾಪಾರ ವಹಿವಾಟು ಬಂದ್ ಆಗಿದೆ.
ರಂಜನ್ ಭೇಟಿ-ಪರಿಶೀಲನೆ: ಸ್ಥಳಕ್ಕೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೆ ಸಂತ್ರಸ್ತರಿಗೆ ಸಾಂತ್ವಾನ ಹೇಳಿದರು. ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವದು. ಪ್ರವಾಹ ಪರಿಸ್ಥಿತಿ ಇಳಿಕೆಯಾದ ನಂತರ ಮನೆಗಳ ದುರಸ್ತಿಗೆ ಕ್ರಮಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.
ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ಯಾಂ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ರಂಜನ್, ತಕ್ಷಣಕ್ಕೆ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆದು ಸಂತ್ರಸ್ತರಿಗೆ ಸೌಕರ್ಯ ಕಲ್ಪಿಸುವಂತೆ ಸೂಚಿಸಿದರು. -ವಿಜಯ್