ಮಡಿಕೇರಿ, ಆ. 9: ಕೊಡಗು ಜಿಲ್ಲೆಯ ಪರಿಸ್ಥಿತಿ ಮತ್ತಷ್ಟು ಕಳವಳಕಾರಿಯಾಗಿ ಪರಿಣಮಿಸುತ್ತಿದೆ. ಜಿಲ್ಲೆಯಾದ್ಯಂತ ಮಳೆಯ ತೀವ್ರತೆ ಇನ್ನೂ ಮುಂದುವರಿಯುತ್ತಿದ್ದು, ಎಲ್ಲೆಲ್ಲೂ ಜಲ ಹೆಚ್ಚಾಗುತ್ತಿರುವದರಿಂದ ಇಡೀ ಜಿಲ್ಲೆ ಪ್ರಸ್ತುತ ಜಲದಿಗ್ಭಂಧನಕ್ಕೆ ಒಳಗಾಗಿರುವ ಸನ್ನಿವೇಶ ನಿರ್ಮಾಣವಾಗಿದೆ. ರಾಜ್ಯದ ಜೀವನದಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ- ಭಾಗಮಂಡಲ ಕ್ಷೇತ್ರದಿಂದ ಹಿಡಿದು ಬಹುತೇಕ ಕಡೆಗಳಲ್ಲಿ ದಾಖಲೆಯ ಪ್ರಮಾಣದ ಮಳೆ ಸುರಿಯುತ್ತಿದ್ದು, ಆಗಸದಿಂದ ಬೀಳುವ ಮಳೆ ಹಾಗೂ ಭುವಿಯೊಳಗಿನಿಂದ ಪುಟಿದೇಳು ತ್ತಿರುವ ಜಲಧಾರೆಯಿಂದಾಗಿ ಜನತೆ ಅಕ್ಷರಶಃ ಜಲ ದಿಗ್ಬಂಧನದಲ್ಲಿದ್ದಾರೆ.
ಧಾರಾಕಾರ ಮಳೆಯೊಂದಿಗೆ ಭಾರೀ ಗಾಳಿಯ ಆರ್ಭಟವೂ ಮುಂದುವರಿಯುತ್ತಿದೆ. ಜಿಲ್ಲೆಯ ಈ ಧಾರುಣ ಸನ್ನಿವೇಶದಿಂದಾಗಿ ಈಗಾಗಲೇ ಘೋಷಿಸಿರುವ ‘ಹೈ ಅಲರ್ಟ್’ ಕೂಡ ಮುಂದುವರಿಕೆ ಯಾಗಿದೆ. ಕಾವೇರಿ, ಲಕ್ಷ್ಮಣತೀರ್ಥ, ಸೇರಿದಂತೆ ಇನ್ನಿತರ ನದಿ- ತೊರೆ, ಹಳ್ಳ- ಕೊಳ್ಳಗಳಲ್ಲಿ ನೀರಿನ ಹರಿವು ಮತ್ತಷ್ಟು ಏರಿಕೆಯಾಗುತ್ತಲೇ ಇದೆ. ನದಿಪಾತ್ರದ ಪ್ರದೇಶಗಳಲ್ಲಿ ನೀರಿನ ಹರಿವು ಭಯಾನಕ ಸನ್ನಿವೇಶವನ್ನು ಸೃಷ್ಟಿಸಿದೆ. ನೀರಿನ ಸೆಳೆತ, ಉಕ್ಕಿ ಹರಿಯುತ್ತಿರುವ ನದಿ - ತೊರೆಗಳಿಂದ ಭತ್ತದ ಗದ್ದೆಗಳು, ಕಾಫಿ ತೋಟಗಳು ಸಮುದ್ರದೋಪಾದಿಯಲ್ಲಿ ಮುಳುಗಡೆಗೊಂಡಿದ್ದು, ಜಿಲ್ಲೆಯ ಹಲವಾರು ಭಾಗಗಳಲ್ಲಿ ವಾಸದ ಮನೆಗಳಿಗೆ ನೀರು ನುಗ್ಗಿ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿವೆ. ಕೆಲವಾರು ಮನೆಗಳು ನೆಲಕಚ್ಚಿದ್ದರೆ, ಇನ್ನೂ ಹಲವು ಮನೆಗಳು ನೀರಿನಲ್ಲಿ ಮುಳುಗಡೆ ಯಾಗಿದ್ದು, ಜನತೆ ಉಟ್ಟಬಟ್ಟೆಯಲ್ಲಿ ಅತಂತ್ರರಾಗಿ ಕಣ್ಣೀರು ಸುರಿಸು ವಂತಾಗಿದೆ. ಭಾಗಮಂಡಲ, ಸಿದ್ದಾಪುರ ಕರಡಿಗೋಡು, ನಾಪೋಕ್ಲು, ಬೇತ್ರಿ, ಶ್ರೀಮಂಗಲ, ಕಾನೂರು, ಬಾಳೆಲೆ, ಹರಿಹರ, ಕುಶಾಲನಗರ, ಗೋಣಿಕೊಪ್ಪ, ಸೇರಿದಂತೆ ಜಲಾನಯನ ಪ್ರದೇಶಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಅಲ್ಲಲ್ಲಿನ ಜನತೆ ಪರಿತಪಿಸುತ್ತಿದ್ದರೆ, ಸನ್ನಿವೇಶವನ್ನು ನಿಭಾಯಿಸಲು ಜಿಲ್ಲಾಡಳಿತವೂ ಹೆಣಗಾಡುವಂತಾಗಿದೆ.
ಪ್ರವಾಹ ಪರಿಸ್ಥಿತಿ ಒಂದೆಡೆ ಯಾದರೆ ಬರೆಜರಿತ, ಭೂಕುಸಿತ, ಮಣ್ಣು ಕುಸಿತದಂತಹ ದುರ್ಘಟನೆ ಗಳೂ ಅಲ್ಲಲ್ಲಿ ಸಂಭವಿಸುತ್ತಿರುವದು, ರಸ್ತೆಗಳೇ ಕೊಚ್ಚಿ ಹೋಗುತ್ತಿರುವದು, ಬದುಕಿನ ಆರ್ಥಿಕತೆಯ ಬೆನ್ನೆಲುಬಾದ ಕಾಫಿ ತೋಟಗಳು ಜರ್ಜರಿತ ವಾಗುತ್ತಿರುವದರೊಂದಿಗೆ, ಬಹುತೇಕ ಕೃಷಿ ಫಸಲುಗಳು ನೆಲಕಚ್ಚುತ್ತಿರುವ ದರಿಂದಾಗಿ ಕೃಷಿ ಪ್ರಧಾನ ಜಿಲ್ಲೆಯ ಪರಿಸ್ಥಿತಿ ಕರುಣಾಜನಕವಾಗಿದೆ.
ಕಳೆದ ವರ್ಷ ಪ್ರಾಕೃತಿಕ ವಿಕೋಪದಿಂದ ಹಟ್ಟಿಹೊಳೆ ತಟದ ಮುಕ್ಕೋಡ್ಲುವಿನಲ್ಲಿ ಮುಳುಗಡೆ ಗೊಂಡಿದ್ದ ಶ್ರೀ ಭದ್ರಕಾಳಿ ದೇಗುಲ ಮತ್ತೆ ಈ ಬಾರಿಯೂ ಮುಳುಗಡೆಗೊಂಡಿದೆ. ಬ್ರಹ್ಮಗಿರಿ ತಪ್ಪಲಿನ ಬಿರುನಾಣಿ ಗ್ರಾ.ಪಂ. ವ್ಯಾಪ್ತಿ, ಶ್ರೀಮಂಗಲ, ಬಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಗಳು, ಪುಷ್ಪಗಿರಿ ತಪ್ಪಲಿನ ಪ್ರದೇಶಗಳು, ಸೇರಿದಂತೆ ಕಾವೇರಿ, ಲಕ್ಷ್ಮಣತೀರ್ಥ, ಕುಪ್ಪೋಟು ಹೊಳೆ, ಥಂಡ್ರಹೊಳೆ ನದಿಗಳು ಹರಿಯುವ ಮಾರ್ಗಗಳಲ್ಲಿ ಜನತೆ ಜೀವಭಯವನ್ನು ಎದುರಿಸುತ್ತಿದ್ದಾರೆ. ಭೂಕುಸಿತ, ಬರೆ ಜರಿತದಂತಹ ಘಟನೆಗಳು ಪರಿಸ್ಥಿತಿಯ ಬಗ್ಗೆ ಜನತೆ ಇನ್ನಷ್ಟು ಆತಂಕ ಪಡುವಂತಾಗಿದೆ.