ಗೋಣಿಕೊಪ್ಪಲು, ಆ. 9: 4 ದಿನಗಳಿಂದ ಧಾರಾಕಾರವಾಗಿ ಸುರಿದ ಮಳೆಗೆ ಗೋಣಿಕೊಪ್ಪಲು ಪಟ್ಟಣ ಮುಳುಗಿ ಹೋಗಿದೆ. ಪಟ್ಟಣದ ನೇತಾಜಿ ಬಡಾವಣೆ, 3ನೇ ಬಡಾವಣೆ, ಅಚ್ಚಪ್ಪ ಲೇಔಟ್, ಪಟೇಲ್ ನಗರ, ಬಸ್ ನಿಲ್ದಾಣದ ಕೆಳಗಿನ ಬೈಪಾಸ್ ರಸ್ತೆಯ ಮನೆಗಳು ಸಂಪೂರ್ಣ ಜಲಾವೃತಗೊಂಡವು. ಭಾರಿ ಪ್ರವಾಹಕ್ಕೆ ಒಳಗಾಗಿದ್ದ ವಿವಿಧ ಬಡಾವಣೆಯ ನಿವಾಸಿಗಳ ಸ್ಥಿತಿ ಚಿಂತಾಜನಕ ವಾಗಿತ್ತು. ಅವರನ್ನೂ ಕೂಡ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ವಿಪತ್ತು ರಕ್ಷಣಾ ಪಡೆಯವರು ರಕ್ಷಿಸಿದರು. ತೊರೆ ತೋಡುಗಳಲ್ಲಿ ನೀರಿನ ಹರಿವು ಹೆಚ್ಚಾಯಿತು. ಮನೆಗಳ ಒಳಗೆ ನೀರು ತುಂಬಿಕೊಂಡಿತು. ಜನರು ಒಂದೇ ಸಮನೆ ಕಿರುಚಿಕೊಳ್ಳತೊಡಗಿದರು. ಅಷ್ಟರಲ್ಲಿ ಗ್ರಾಮ ಪಂಚಾಯಿತಿ ಪೌರ ಕಾರ್ಮಿಕರು ಆಗಮಿಸಿ ರಕ್ಷಣೆ ಒದಗಿಸಿದರು.
ಕೆಲವರು ನೆಲಮಾಳಿಗೆಗೆ ತುಂಬಿದ ನೀರಿನಿಂದ ರಕ್ಷಣೆ ಪಡೆದುಕೊಳ್ಳಲು ಮಹಡಿ ಮೇಲೆ ಏರಿ ಕುಳಿತಿದ್ದರು. ಸ್ಥಳಕ್ಕೆ ಆಗಮಿಸಿದ ವಿಪತ್ತು ರಕ್ಷಣಾಪಡೆಯವರು ಮನೆಗಳಿಗೆ ಧಾವಿಸಿ ಮಹಡಿಯಲ್ಲಿದ್ದವರನ್ನು ರಕ್ಷಿಸಿದರು.
ಮನೆಗೆ ನೀರು ಆವರಿಸಿಕೊಂಡ ಕೂಡಲೆ ಕೆಲವರು ಮನೆಯಲ್ಲಿನ ಬೆಕ್ಕು, ಶ್ವಾನಗಳನ್ನು ಬಿಟ್ಟು ರಕ್ಷಣಾ ಸ್ಥಳಕ್ಕೆ ಓಡಿ ಬಂದಿದ್ದರು. ಅಂತಹ ಮನೆಗಳಲ್ಲಿ ಪ್ರಾಣಿಗಳು ಗೋಳಿಡುತ್ತಿದ್ದವು. ಇವುಗಳನ್ನು ಬೋಟಿನ ಮೂಲಕ ತೆರಳಿ ರಕ್ಷಿಸಲಾಯಿತು. ಕೆಲವು ಮನೆಗಳ ಮುಂಭಾಗದಲ್ಲಿ ನಿಂತಿದ್ದ ವಾಹನಗಳು ನೀರಿನಲ್ಲಿ ಮುಳುಗಿದ್ದವು.
ಬಸ್ ನಿಲ್ದಾಣದಿಂದ ಅರುವತ್ತೊಕ್ಕಲು ಕಡಗೆ ತೆರಳುವ ಬೈಪಾಸ್ ರಸ್ತೆ ತೋಡಿನ ಸೇತುವೆ ಮೇಲೆ ಧಾರಾಕಾರ ನೀರು ಹರಿಯಲಾರಂಭಿಸಿತು. ನೀರಿನ ರಭಸಕ್ಕೆ ತೋಡಿನ ಸೇತುವೆಯ ತಡೆಗೋಡೆ ಕುಸಿಯಿತು. ತೋಡಿಗೆ ಎಡ ಬಲದಲ್ಲಿ ನಿರ್ಮಿಸಿದ್ದ ತಡೆಗೋಡೆಗಳು ದಡದಡ ಉರುಳಿದವು.
ಮಳೆ ಪ್ರಮಾಣ ಹೆಚ್ಚಿ ನೀರಿನ ಪ್ರವಾಹ ಅತಿಯಾಗುತ್ತಿದ್ದಂತೆ ಪೊಲೀಸರು ಎಲ್ಲಾ ಬಡಾವಣೆಗಳಿಗೆ ತೆರಳಿ ಮನೆಯನ್ನು ಖಾಲಿಮಾಡುವಂತೆ ಸೂಚಿಸಿದರು. ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಪರಿಹಾರ ಕೇಂದ್ರಕ್ಕೆ ನೂರಾರು ಸಂತ್ರಸ್ತರನ್ನು ಕಳುಹಿಸಿದರು.
ಪಾಲಿಬೆಟ್ಟ, ಪೊನ್ನಂಪೇಟೆ, ಅಮ್ಮತ್ತಿ ಮಾರ್ಗದ ಎಲ್ಲ ರಸ್ತೆಗಳೂ ನೀರಿನಲ್ಲಿ ಮುಳುಗಿವೆ. ವೀರಾಜಪೇಟೆ, ಮೈಸೂರು ಮಾರ್ಗದ ಸಾರಿಗೆ ಬಸ್‍ಗಳನ್ನು ಬಿಟ್ಟರೆ ಉಳಿದ ಮಾರ್ಗದ ಎಲ್ಲಾ ವಾಹನಗಳ ಸಂಚಾರ ಸ್ಥಗಿತಗೊಳಿಸಿವೆ. ಖಾಸಗಿ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಕೈಕೇರಿ ಭಾಗದ 4 ಕೆರೆಗಳು ಒಡೆದುದರ ಪರಿಣಾಮ ಗೋಣಿಕೊಪ್ಪಲಿನ ಬೈಪಾಸ್ ತೋಡಿನ ಪ್ರವಾಹ ಹೆಚ್ಚಲು ಕಾರಣವಾಯಿತು. ಇಲ್ಲಿನ ಕಾಲ್ಸ್ ಶಾಲೆಯ ಒಳಗೂ ನೀರು ನುಗ್ಗಿ ಅಲ್ಲಿನ ವಸತಿ ನಿಲಯಕ್ಕೆ ತೀವ್ರ ಹಾನಿಯಾಗಿದೆ. ಗೋಣಿಕೊಪ್ಪಲು ಪಟ್ಟಣದಲ್ಲಿ ಕೆಲವು ಖಾಸಗಿಯವರು ಕೀರೆಹೊಳೆ ದಡಕ್ಕೆ ನಿರ್ಮಿಸಿಕೊಂಡಿದ್ದ ತಡೆಗೋಡೆಗಳು ಕುಸಿದು ನೀರು ಪಾಲಾಗಿವೆ.
ಪಟ್ಟಣಕ್ಕೆ ಗುರುವಾರ ರಾತ್ರಿ ಕೆಲ ಹೊತ್ತು ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಬಳಿಕ ಕಡಿತಗೊಂಡು ಮತ್ತೆ ಪಟ್ಟಣ ಕತ್ತಲಲ್ಲಿ ಮುಳುಗುವಂತಾಗಿದೆ.
ಪಟ್ಟಣದ ವರ್ತಕರ ಬಹುಪಾಲು ಮನೆಗಳು ಜಲಾವೃತಗೊಂಡಿರುವದರಿಂದ ಪಟ್ಟಣದಲ್ಲಿ ಶೇ.90 ರಷ್ಟು ಅಂಗಡಿ ಮಳಿಗೆಗಳು ಬೆಳಗಿನಿಂದಲೇ ತೆರೆದಿರಲಿಲ್ಲ. ಸಂತ್ರಸ್ತ ಕೇಂದ್ರದಲ್ಲಿ ಇದೀಗ 250 ಜನರು ಆಶ್ರಯ ಪಡೆದಿದ್ದಾರೆ.
ಪೊನ್ನಂಪೇಟೆ ಕುಂದ ರಸ್ತೆ ಸಂಪರ್ಕ ಕಡಿತಗೊಂಡು ನಿನಾದ ಶಾಲೆ ಸಮೀಪದ ರಸ್ತೆ ಮುಳುಗಡೆಯಾಗಿದೆ. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯಾದ ಜೋಡುಬೀಟಿ ಭದ್ರಕಾಳಿ ದೇವಸ್ಥಾನ ರಸ್ತೆಯೂ ಕೂಡ ನೀರಿನಲ್ಲಿ ಮುಳುಗಿರುವದರಿಂದ ಸಂಚಾರಕ್ಕೆ ಅಡಚಣೆಯಾಗಿದೆ.
ತಿತಿಮತಿ ಸಮೀಪದ ಜಂಗಲ್ ಹಾಡಿ ತಿಮ್ಮ ಅವರ ಮನೆ ಮೇಲೆ ಭಾರಿ ಗಾತ್ರದ ಮರಬಿದ್ದು ಮನೆ ಸಂಪೂರ್ಣವಾಗಿ ಜಖಂಗೊಂಡಿದೆ. ಮರಬಿದ್ದ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣ ಹಾನಿಯಾಗಿಲ್ಲ. ಮನೆ ಹಾನಿ ಸಂತ್ರಸ್ತರಿಗೆ ತಿತಿಮತಿಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಸರೆ ಒದಗಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸುಬ್ರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ,ಆರ್. ಪಂಕಜಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಸದಸ್ಯ ಎನ್.ಎನ್.ಅನೂಪ್ ಪಿಡಿಒ ಮಮತಾ ಭೇಟಿ ನೀಡಿ ಪರಿಶೀಲಿಸಿದರು.
ಇತ್ತ ಬಾಳೆಲೆಯ ಗಂಧದಗುಡಿ ಕಾಲೋನಿಯಲ್ಲಿಯೂ ತೀವ್ರ ಮಳೆಗೆ 4 ಮನೆಗಳು ಕುಸಿದು ತೀವ್ರ ಹಾನಿಯಾಗಿದೆ. ಇದರಿಂದ 25ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸ್ಥಳಾಂತರಿಸಲಾಗಿದೆ. ದೇವನೂರು ಗ್ರಾಮದ ತೀತಮಾಡ ಮಾದಯ್ಯ ಎಂಬವರ ಮನೆ ಲಕ್ಷ್ಮಣತೀರ್ಥ ನದಿ ಪ್ರವಾಹಕ್ಕೆ ತುತ್ತಾಗಿದೆ. ಲಕ್ಷ್ಮಣತೀರ್ಥ ನದಿ ಉಕ್ಕಿ ಹರಿಯುತ್ತಿದ್ದು ನಿಟ್ಟೂರು ಬಾಳೆಲೆ ನಡುವಿನ ಸೇತುವೆ ನೀರಿನಲ್ಲಿ ಮುಳುಗಿದೆ.
ಚೆನ್ನಂಗೊಲ್ಲಿಯ ಕೆರೆಗಳು ಒಡೆದು ಇದರ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಅಲ್ಲಿನ 9 ಮನೆಗಳು ನೆಲಸಮವಾಗಿವೆ. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ನಿರಾಶ್ರಿತರಿಗೆ ಸಂತ್ರಸ್ತ ಕೇಂದ್ರಗಳಲ್ಲಿ ಆಸರೆ ನೀಡಿದ್ದಾರೆ.
ಮಾಯಮುಡಿಯಲ್ಲಿಯೂ ಆಪಟ್ಟೀರ ಸುಬ್ಬಯ್ಯ, ಆಪಟ್ಟೀರ ಬೋಪಣ್ಣ ಅವರಿಗೆ ಸೇರಿದ ಕೆರೆಗಳು ಒಡೆದು ಮಡಿಕೆಬೀಡಿನ ಮನೆಗಳಿಗೆ ನೀರು ನುಗ್ಗಿ ತೀವ್ರ ಹಾನಿಯಾಗಿದೆ. ಕೆರೆಯ ನೀರು ಮಡಿಕೆ ಬೀಡಿನ ರಾಜಕಾಲುವೆಗೆ ನುಗ್ಗಿ ಪರಿಶಿಷ್ಟ ಜನಾಂಗದ ಕಾಲೋನಿಯ 9 ಮನೆಗಳು ಕುಸಿದಿವೆ. ನೀರು ನುಗ್ಗಿ ಕಾಫಿ ತೋಟ ಕೊಚ್ಚಿ ಹೋಗಿದ್ದರೆ, ಬತ್ತದ ಗದ್ದೆಗಳು ನೀರಿನಲ್ಲಿ ಮುಳುಗಿವೆ.
ಸ್ಥಳಕ್ಕೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಪಟ್ಟೀರ ಟಾಟುಮೊಣ್ಣಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪೃಥ್ಯು ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ನಿಟ್ಟೂರು ಸೇತುವೆ ಮೂಲಕ ಕಾರ್ಮಾಡು ಗ್ರಾಮಕ್ಕೆ ಸಂಪರ್ಕ ಇಲ್ಲದಾಗಿದೆ. ಕುಟ್ಟ ನಾಗರಹೊಳೆ ಮೂಲಕ ಕಾರ್ಮಾಡು ಸಂಪರ್ಕಿಸುವ ರಸ್ತೆಯಲ್ಲಿ ಸಂಚರಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪ ವ್ಯಕ್ತವಾಗಿದೆ.
ಮಹಾಮಳೆಯ ನಡುವೆ ಗುರುವಾರ ರಾತ್ರಿ ಪೆÇನ್ನಂಪೇಟೆ, ಮಾಯಮುಡಿ ಭಾಗಕ್ಕೆ ವಿದ್ಯುತ್ ಸಂಪರ್ಕ ನೀಡಲು ಕೆಪಿಟಿಸಿಎಲ್ ಹಾಗೂ ಸೆಸ್ಕ್ ಸಿಬ್ಬಂದಿ ಮಳೆ ನಡುವೆ ಸಮಸ್ಯೆಗಳನ್ನು ಪರಿಹರಿಸಿ ಬೆಳಕು ನೀಡುವ ಕೆಲಸ ಮಾಡಿದ್ದು ವಿಶೇಷವಾಗಿತ್ತು.
ಕೈನಾಟಿಯಿಂದ ರಾಜಪುರ ತೆರಳುವ ಮಾರ್ಗದ ಸೇತುವೆ ಮೇಲೆ ಸಿಲುಕಿದ ಕಾರಿನಲ್ಲಿದ್ದ ಮೈಸೂರು ಮೂಲದ ಮೂವರು ಪ್ರಯಾಣಿಕರನ್ನು ಪಾರುವಂಗಡ ಗಿರಿ ಸೋಮಣ್ಣ ಮತ್ತು ಸ್ಥಳಿಯರು ರಕ್ಷಿಸಿದರು. ಕಾರು ಪ್ರವಾಹದಲ್ಲಿ ಮುಳುಗಿದೆ.
ಕೋಣನಕಟ್ಟೆ ತಿತಿಮತಿ ರಸ್ತೆಯಲ್ಲಿ ಮರ ಬಿದ್ದು ಸಂಪರ್ಕ ಕಡಿತವಾಯಿತು. ಮತ್ತೂರು ಗ್ರಾಮದ ಆಲೇಮಾಡ ನಾಣಯ್ಯ ಅವರ ಶೆಡ್ ಮೇಲೆ ಮರಬಿದ್ದು ಹಾನಿಯಾಗಿದೆ. ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೋಣನಕಟ್ಟೆ ತಿತಿಮತಿ ರಸ್ತೆಯಲ್ಲಿ ಮರ ಬಿದ್ದು ಸಂಪರ್ಕ ಕಡಿತವಾಯಿತು. ಮತ್ತೂರು ಗ್ರಾಮದ ಆಲೇಮಾಡ ನಾಣಯ್ಯ ಅವರ ಶೆಡ್ ಮೇಲೆ ಮರಬಿದ್ದು ಹಾನಿಯಾಗಿದೆ. ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ.
ಹೊಸೂರು ಬೆಟ್ಟಗೇರಿಯಲ್ಲಿ ಅಂಗನವಾಡಿ ಕಟ್ಟಡದ ತಡೆಗೋಡೆ ಕುಸಿದು ಹಾನಿ ಸಂಭವಿಸಿದೆ. ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ. ಹೊಸೂರು ಗೋಣಿಕೊಪ್ಪ ರಸ್ತೆಯಲ್ಲಿ ಬಿದ್ದ ಮರವನ್ನು ತೆರವುಗೊಳಿಸಲಾಯಿತು.
- ಎನ್.ಎನ್. ದಿನೇಶ್ / ಸುದ್ದಿಪುತ್ರ / ಜಗದೀಶ್