ಸೋಮವಾರಪೇಟೆ, ಆ. 9 : ಕೊಡಗು ಜಿಲ್ಲೆಯ ಸರ್ಕಾರಿ ಕಚೇರಿಗಳಿಗೆ ಹೋಲಿಸಿದರೆ ಸೋಮವಾರಪೇಟೆಯ ತಾಲೂಕು ಕಚೇರಿ ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರಿಗೆ ಇಚ್ಚಾಶಕ್ತಿಗೆ ಕಪ್ಪುಚುಕ್ಕೆ ಎಂದರೆ ತಪ್ಪಾಗಲಾರದು!

ಕಳೆದ ಅನೇಕ ದಶಕಗಳಿಂದ ಸುಣ್ಣಬಣ್ಣ ಕಾಣದೆ ನೆಲೆ ನಿಂತಿರುವ ಮಿನಿ ವಿಧಾನಸೌಧ ಬೀಳುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಬೇಕಿದೆ. ಪ್ರತಿ ಮಳೆಗಾಲದಲ್ಲೂ ಕಟ್ಟಡದ ಒಳಭಾಗದಲ್ಲಿ ಮಳೆ ನೀರಿನಿಂದ ರಕ್ಷಣೆ ಪಡೆಯಲು ಟಾರ್ಪಲ್ ಮೊರೆ ಹೋಗಲಾಗುತ್ತಿದೆ.

ಇದೀಗ ಸುರಿಯುತ್ತಿರುವ ಭಾರಿ ಮಳೆಗೆ ಇಡೀ ತಾಲೂಕು ಕಚೇರಿ ಸೋರಿಕೆಯಾಗುತ್ತಿದೆ. ಕಡತಗಳನ್ನು ರಕ್ಷಿಸಿಕೊಳ್ಳುವದೇ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಸಾಹಸದಂತಾಗಿದ್ದು, ಆರ್‍ಸಿಸಿ ಕಟ್ಟಡದಲ್ಲಿ ಸೋರಿಕೆಯಾಗುವ ನೀರನ್ನು ಸಂಗ್ರಹಿಸಲು ಸಣ್ಣ ಬಕೆಟ್‍ಗಳನ್ನು ಇಡಲಾಗಿದೆ.

ಕಳೆದ ಕೆಲ ದಶಕಗಳಿಂದೀಚೆಗೆ ತಾಲೂಕು ಕಚೇರಿ ಕಟ್ಟಡ ಶಿಥಿಲಾಸ್ಥೆಗೆ ತಲುಪುತ್ತಿದ್ದು, ಮಳೆಗಾಲ ಕಳೆಯುವದು ಸಿಬ್ಬಂದಿಗಳಿಗೆ ಹಗ್ಗದ ಮೇಲಿನ ನಡಿಗೆಯಂತಾಗಿದೆ. ತಾಲೂಕಿನ ಮಿನಿವಿಧಾನಸೌಧ ಮಳೆಗಾಲದಲ್ಲಿ ಸೋರಲು ಪ್ರಾರಂಭಿಸಿ ವರ್ಷಗಳೇ ಕಳೆದಿವೆ. ಆದರೆ ಇದುವರೆಗೆ ಕಟ್ಟಡ ದುರಸ್ತಿಗೆ ಸರ್ಕಾರ ಅನುದಾನ ಕಲ್ಪಿಸದ ಹಿನ್ನೆಲೆ, ಕಂದಾಯ ಇಲಾಖೆಯ ಸಾವಿರಾರು ಕಡತಗಳನ್ನು ರಕ್ಷಣೆ ಮಾಡಿಕೊಳ್ಳುವದಕ್ಕೆ ಹರಸಾಹಸ ಪಡಬೇಕಾಗಿದೆ.

1997ರಲ್ಲಿ ನಿರ್ಮಾಣವಾದ ತಾಲೂಕು ತಹಶೀಲ್ದಾರರ ಕಟ್ಟಡಕ್ಕೆ ಮಿನಿ ವಿಧಾನಸೌಧ ಎಂದು ನಾಮಕರಣ ಮಾಡಲಾಗಿದೆ. 22 ವರ್ಷಗಳ ಹಿಂದೆ ಈ ಕಟ್ಟಡಕ್ಕೆ ಸುಮಾರು 1 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ಕೊಡಗಿನ ಹವಾಮಾನಕ್ಕೆ ತದ್ವಿರುದ್ಧವಾಗಿ ನಿರ್ಮಿಸಲಾಗಿರುವ ಮಿನಿ ವಿಧಾನ ಸೌಧ ಕಟ್ಟಡ ಉಪಯೋಗಕ್ಕಿಂತಲೂ ಉಪದ್ರವಕಾರಿಯಾಗಿದೆ.

ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಖಜಾನೆ, ಚುನಾವಣೆ ಶಾಖೆ, ಆರ್‍ಟಿಸಿ ವಿತರಣಾ ಕೇಂದ್ರ, ನೆಮ್ಮದಿ ಕೇಂದ್ರ, ಆಹಾರ ಮತ್ತು ನಾಗರಿಕ ಸರಬರಾಜು ಕೇಂದ್ರ, ಭೂಮಿ ಇಲಾಖೆ, ಅಭಿಲೇಖಾಲಯ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ವಿಭಾಗಗಳು ಈ ಕಟ್ಟಡದಲ್ಲೇ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಕೊಠಡಿಗಳ ಮೇಲ್ಚಾವಣಿಯಲ್ಲಿ ನೀರು ಜಿನುಗುತ್ತಿದೆ. ಬಹುತೇಕ ವಿಭಾಗಗಳು ಕಂಪ್ಯೂಟರೀಕರಣಗೊಂಡಿದ್ದು, ಶೀತಕ್ಕೆ ಕಂಪ್ಯೂಟರ್‍ಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವದು ಅಸಾಧ್ಯ ಎಂದು ಸಿಬ್ಬಂದಿಗಳು ಅಳಲುತೋಡಿಕೊಂಡಿದ್ದಾರೆ.

ಆರ್‍ಟಿಸಿ ವಿತರಿಸುವ ವಿಭಾಗದಲ್ಲಿ ಮೇಲ್ಚಾವಣಿಗೆ ಪ್ಲಾಸಿಕ್ ಹೊದಿಕೆಯನ್ನು ಕಟ್ಟಿ ಮಳೆ ನೀರಿನಿಂದ ಬಚಾವಾಗುವ ಪ್ರಯತ್ನ ಮಾಡಲಾಗಿದೆ. ರೆಕಾರ್ಡ್ ರೂಂನಲ್ಲಿ 1.37ಲಕ್ಷಕ್ಕೂ ಅಧಿಕ ಕಡತಗಳಿದ್ದು, ಅವುಗಳ ರಕ್ಷಣೆಗೆ ಹರಸಾಹಸ ಪಡಲಾಗುತ್ತಿದೆ. ಭೂಮಿ ಕೇಂದ್ರದಲ್ಲಿ ಮೇಲ್ಚಾವಣಿ ಹಾಗು ಗೋಡೆಗಳಲ್ಲಿ ನೀರು ಸೋರುತ್ತಿದೆ. ಚುನಾವಣಾ ಶಾಖೆ, ಆಡಳಿತ ಶಾಖೆ, ಆಹಾರ ಶಾಖೆ ಕೊಠಡಿಗಳು ಮಳೆಯಿಂದ ಜರ್ಝರಿತಗೊಳ್ಳುತ್ತಿದ್ದು, ಸಿಬ್ಬಂದಿಗಳು ಸಂಕಷ್ಟದೊಂದಿಗೆ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

ಆಡಳಿತ ಶಾಖೆಯ ಮೇಲ್ಛಾವಣಿ ಈಗಾಗಲೇ ಕುಸಿದು ಬೀಳುವ ಹಂತಕ್ಕೆ ತಲುಪಿದ್ದು, ಅದರ ಅಡಿಯಲ್ಲಿರುವ ನೌಕರರು ಜೀವ ಭಯದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಆರ್‍ಸಿಸಿಯಲ್ಲಿ ಸೋರಿಕೆ ಒಂದೆಡೆಯಾದರೆ ವರ್ಷಗಳ ಹಿಂದೆಯೇ ಒಡೆದುಹೋಗಿರುವ ಕಿಟಕಿಗಳಿಂದ ಮಳೆಯ ಎರಚಲು ನೀರು ನೇರವಾಗಿ ಕಚೇರಿಯ ಒಳಗೆ ಬರುತ್ತಿದೆ.

ತಾಲೂಕಿನ ಆರು ಹೋಬಳಿ, 298 ಗ್ರಾಮಗಳ ಜನರು ಕಂದಾಯ, ಆಹಾರ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಕೆಲಸ ಕಾರ್ಯಗಳಿಗೆ ಮಿನಿ ವಿಧಾನಸೌಧಕ್ಕೆ ಬರುತ್ತಾರೆ. ಸಂತೆ ದಿನವಾದ ಸೋಮವಾರ ನೂರಾರು ಮಂದಿ ಕಟ್ಟಡದೊಳಗೆ ಇರುತ್ತಾರೆ. ಕಳೆದ ಐದು ವರ್ಷಗಳಿಂದ ಕಟ್ಟಡ ಸೋರುತ್ತಿದ್ದು, ಗೋಡೆಗಳು ಶಿಥಿಲಗೊಂಡಿರುವ ಹಿನ್ನೆಲೆ ಕಟ್ಟಡದ ಗಟ್ಟಿತನದ ಬಗ್ಗೆ ಆತಂಕವೂ ಎದುರಾಗಿದೆ.

ಕಳೆದ ಹಲವು ವರ್ಷಗಳಿಂದ ಕಟ್ಟಡ ದುರಸ್ತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವರುಗಳಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ಎಂ.ಆರ್.ಸೀತಾರಾಮ್, ಕಂದಾಯ ಇಲಾಖೆಯ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಆರೋಗ್ಯ ಇಲಾಖೆಯ ಮಾಜಿ ಸಚಿವ ಯು.ಟಿ.ಖಾದರ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಇದುವರೆಗೆ ಕಟ್ಟಡ ದುರಸ್ತಿಗೆ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ ಎಂದು ಅಧಿಕಾರಿಗಳು ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ.

ದೇಶದ ಯಾವದಾದರೂ ಮೂಲೆಯಲ್ಲಿ ನಡೆಯುವ ಘಟನೆಗಳನ್ನೇ ಮುಂದಿಟ್ಟುಕೊಂಡು ಇಲ್ಲಿನ ತಾಲೂಕು ಕಚೇರಿ ಎದುರು ಹೋರಾಟ ಮಾಡುವ ಹಲವಷ್ಟು ಸಂಘಟನೆಗಳು ಸೋಮವಾರಪೇಟೆಯಲ್ಲಿದ್ದು, ಅದೇ ತಾಲೂಕು ಕಚೇರಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಹೋರಾಟ ಮಾಡುವ ಸಂಘಟನೆಗಳ ಕೊರತೆಯೂ ಸೋಮವಾರಪೇಟೆಯಲ್ಲಿದೆ ಎಂದರೆ ನಂಬಲೇಬೇಕು ! - ವಿಜಯ್ ಹಾನಗಲ್