ಮಡಿಕೇರಿ, ಆ. 9: ವರುಣನ ಆರ್ಭಟದಿಂದಾಗಿ ಚೇರಂಬಾಣೆ ವ್ಯಾಪ್ತಿಯ ಐವತ್ತೋಕ್ಲುವಿನಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಕೊಟ್ಟೂರು ಬಳಿ ಸೇತುವೆ ಮುಳುಗಡೆಯಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡು ಬೇಗೂರು ಗ್ರಾಮ ಅಕ್ಷರಶಃ ದ್ವೀಪದಂತಾಗಿದೆ. ಐವತ್ತೋಕ್ಲುವಿನ ಕೊತ್ತೋಳಿ, ಪಟ್ಟಮಾಡ, ಕೊಂಗೀರ, ಕೂಡಕಂಡಿ ಸೇರಿದಂತೆ ಇಪ್ಪತ್ತೈದಕ್ಕೂ ಅಧಿಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಭಾಗದ ಗದ್ದೆ ತೋಟ ಕೂಡ ಸಂಪೂರ್ಣ ಜಲಾವೃತವಾಗಿದ್ದು, ಮಳೆಯ ತೀವ್ರತೆಗೆ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ.
ಚೆಟ್ಟಿಮಾನಿ ಸಮೀಪ ಗುಡ್ಡ ಕುಸಿತ ಉಂಟಾಗಿದೆ. ಅಲ್ಲದೆ ಚೇರಂಬಾಣೆ ಕೊಟ್ಟೂರು ಬಳಿ ಮಡಿಕೇರಿ ಭಾಗಮಂಡಲ ರಸ್ತೆ ಗುಡ್ಡ ಕುಸಿತ ಉಂಟಾಗಿ ಬರೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಚೇರಂಬಾಣೆ ಚೆಟ್ಟಿಮಾನಿ, ಭಾಗಮಂಡಲ ಕಡೆಯಿಂದ ಮಡಿಕೇರಿ ರಸ್ತೆಯ ಕೊಟ್ಟೂರುವಿನಲ್ಲಿ ಬರೆ ಕುಸಿತವಾಗಿದೆ ರಸ್ತೆ ಸಂಪರ್ಕ ಕಡಿತಗೊಂಡಿದೆ.
- ಸುಧೀರ್ ಹೊದ್ದೆಟ್ಟಿ