ಶನಿವಾರಸಂತೆ, ಆ. 9: ಹೋಬಳಿಯಾದ್ಯಂತ ಆಶ್ಲೇಷ ಮಳೆ ಧಾರಾಕಾರ ಸುರಿಯುತ್ತಿದೆ. ಕ್ಷಣ ಬಿಡುವು ನೀಡುತ್ತಾ ಸುರಿಯುತ್ತಿರುವ ಹುಚ್ಚು ಮಳೆ ಜನತೆಯಲ್ಲಿ ಭಯ ಮೂಡಿಸುತ್ತಿದೆ. ಬೀಸುವ ಗಾಳಿಗೆ ಮರಗಳು ಉರುಳಿ ವಿದ್ಯುತ್ ತಂತಿಗಳು ನೆಲಕಚ್ಚುತ್ತಿವೆ. ವಿದ್ಯುತ್ ಸಂಪರ್ಕ ಕಡಿತಗೊಂಡ ಜನಜೀವನ ಅಸ್ತವ್ಯಸ್ಥಗೊಳ್ಳುತ್ತಿದೆ. ಶುಕ್ರವಾರ ಬೆಳಿಗ್ಗೆಯಿಂದ ಸಂಜೆಯವರೆಗೆ 3 ಇಂಚು ಮಳೆಯಾಗಿದೆ. ಶನಿವಾರಸಂತೆ ದುಂಡಳ್ಳಿ, ಹಂಡ್ಲಿ, ನಿಡ್ತ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಬಿಳಾಹ ಗ್ರಾಮದ ಹೊಳೆ ಸೇತುವೆ ಮಟ್ಟಕ್ಕೆ ತುಂಬಿ ಹರಿಯುತ್ತಿದ್ದು, ಅಪಾಯದ ಭೀತಿ ಜನರಲ್ಲಿ ಉಂಟಾಗಿದೆ. - ನರೇಶ್