ಮಡಿಕೇರಿ, ಆ. 9: ಕೊಡಗಿನಲ್ಲಿ ಕಂಡು ಕೇಳರಿಯದ ರೀತಿಯಲ್ಲಿ ಮಳೆ ಆಗುತ್ತಿರುವ ಪರಿಣಾಮ; ನದಿಪಾತ್ರಗಳು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ; ಜನತೆಯ ಪ್ರಾಣ ದೊಂದಿಗೆ ಜಾನುವಾರುಗಳ ರಕ್ಷಣೆ ಗಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳು, ಪೊಲೀಸ್, ಮಿಲಿಟರಿ, ಎನ್ಡಿಆರ್ಫ್ ಜತೆಗೂಡಿ ಎಲ್ಲರೂ ಸಮರೋಪಾ ದಿಯಲ್ಲಿ ಕಾರ್ಯನಿರ್ವಹಿಸಬೇಕೆಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೂಚನೆ ನೀಡಿದರು. ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ರಾಜ್ಯ ಬಿಜೆಪಿ ಮುಖಂಡರ ಸಹಿತ ಕೊಡಗಿನ ಸಂಸದರು, ಶಾಸಕರು, ಜಿಲ್ಲಾಡಳಿತ ದೊಂದಿಗೆ ತುರ್ತು ಸಭೆ ನಡೆಸಿದ ಬಳಿಕ ಅವರು ಮಾದ್ಯಮ ಬಳಗ ದೊಂದಿಗೆ ಮಾತನಾಡಿದರು.
ಒಟ್ಟಾರೆ ರಾಜ್ಯದಲ್ಲಿ ತೀವ್ರ ಮಳೆ ಯಿಂದ ಲಕ್ಷಾಂತರ ಜನರು ಸಂಕಷ್ಟದಲ್ಲಿ ಸಿಲುಕಿದ್ದು; ಸ್ವತಃ ಮುಖ್ಯಮಂತ್ರಿಗಳು ಬೆಳಗಾವಿಯಲ್ಲಿ ಮೊಕ್ಕಾಂ ಹೂಡುವದರೊಂದಿಗೆ; ಉತ್ತರ ಕರ್ನಾಟಕದ ಪ್ರವಾಹ ಪರಿಸ್ಥಿತಿ ನಿಬಾಯಿಸುತ್ತಿದ್ದು; ಬಿ.ಎಸ್. ಯಡಿಯೂರಪ್ಪ ಅವರ ನಿರ್ದೇಶನ ದಂತೆ ಶಾಸಕ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ತಾವು ಕೂಡ ಕೊಡಗಿನ ಪರಿಸ್ಥಿತಿ ಅಧ್ಯಯನಕ್ಕೆ ಬಂದಿರುವದಾಗಿ ಕೇಂದ್ರ ಸಚಿವರು ನುಡಿದರು.
ಜಿಲ್ಲೆಯ ಮಾಹಿತಿ : ಹಿರಿಯ ಮುಖಂಡ ಈಶ್ವರಪ್ಪ ನೇತೃತ್ವದಲ್ಲಿ ಶಾಸಕರುಗಳಾದ ಸಿ.ಟಿ. ರವಿ, ವಿ. ಸೋಮಣ್ಣ, ಪ್ರೀತಂಗೌಡ, ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ಸಂಸದ ಪ್ರತಾಪ್ ಸಿಂಹ ಹಾಗೂ ಜಿ.ಪಂ. ಅಧ್ಯಕ್ಷ ಸಹಿತ ಕೊಡಗಿನ ಎಲ್ಲ ಪ್ರತಿನಿಧಿಗಳು ಅಧ್ಯಯನ ಪ್ರವಾಸ ಕೈಗೊಂಡಿದ್ದು; ಜಿಲ್ಲೆಯ ಸಮಗ್ರ ಮಾಹಿತಿ ಸಂಗ್ರಹಿಸಿ ಬಳಿಕ ಮುಖ್ಯ ಮಂತ್ರಿಗಳಿಗೆ ವರದಿ ಸಲ್ಲಿಸಲಿರುವದಾಗಿ ವಿವರಿಸಿದರು.
ಮುಖ್ಯಮಂತ್ರಿ ಮಾತುಕತೆ : ಸ್ವತಃ ರಾಜ್ಯದ ಮುಖ್ಯಮಂತ್ರಿಗಳು ಜಿಲ್ಲಾಧಿ ಕಾರಿಗಳ ಜತೆಯಲ್ಲಿ ವೀಡಿಯೋ ಸಂದರ್ಶನ ಮಾತುಕತೆ ಮೂಲಕ ಮಾಹಿತಿ ಪಡೆದು ಜನತೆಯ ಸಂಕಷ್ಟಕ್ಕೆ ಎಲ್ಲ ರೀತಿಯ ನೆರವನ್ನು ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕಲ್ಪಿಸಲು ಕ್ರಮ ಕೈಗೊಂಡಿದ್ದಾರೆ ಎಂದು ಸದಾನಂದ ಗೌಡ ಭರವಸೆಯ ನುಡಿಯಾಡಿದರು.
ಸಾವಿಗೆ ಆತಂಕ : ಎರಡು ದಿನಗಳಿಂದ
(ಮೊದಲ ಪುಟದಿಂದ) ಕೊಡಗಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹ ಭೀತಿಯಲ್ಲಿ ಸಿಲುಕಿದ್ದವರನ್ನು ಎಲ್ಲರೂ ಸೇರಿ ರಕ್ಷಿಸಿದ್ದು; ಇಂದು ಕೋರಂಗಾಲದಲ್ಲಿ ಭೂಕುಸಿತದಿಂದ ಸಾವಿನ ಸುದ್ದಿ ತಿಳಿದು ಆತಂಕ ಎದುರಾಗಿದೆ ಎಂದ ಸಚಿವರು, ಮೃತರಿಗೆ ತುರ್ತು ರೂ. 5ಲಕ್ಷ ಪರಿಹಾರ ನೆರವು ಕಲ್ಪಿಸಲು ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದರು.
ನೆರವಿಗೆ ಕ್ರಮ : ಜಿಲ್ಲೆಯಲ್ಲಿ ಮಳೆ - ಪ್ರವಾಹ - ಭೂಕುಸಿತದಿಂದ ಅಪಾಯ ಎದುರಾಗಲಿರುವ ಕಡೆಗಳಲ್ಲಿ ನೆಲೆಸಿರುವ ಜನರನ್ನು ತಕ್ಷಣ ಮನವೊಲಿಸಿ ಸುರಕ್ಷಿತ ಸ್ಥಳಗಳಿಗೆ ಕರೆತರುವ ಕೆಲಸವನ್ನು; ಕೊಡಗಿನ ಶಾಸಕರು ಇತರ ಜನಪ್ರತಿನಿಧಿಗಳೊಂದಿಗೆ ಸ್ವತಃ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೈಗೊಂಡಿರುವದು ಶ್ಲಾಘನೀಯವೆಂದು ಕೇಂದ್ರ ಸಚಿವರು ನುಡಿದರು.
ವಾಯುಸೇನೆ ನೆರವು : ಪ್ರವಾಹದಿಂದ ಸಂಕಷ್ಟ ಎದುರಾದರೆ ಎನ್ಡಿಆರ್ಎಫ್, ಮಿಲಿಟರಿ, ಪೊಲೀಸ್, ಅಗ್ನಿಶಾಮಕದಳ ಜಂಟಿ ಸೇವೆಯೊಂದಿಗೆ ಅಗತ್ಯಬಿದ್ದರೆ ವಾಯು ಸೇನೆಯ ನೆರವು ಕಲ್ಪಿಸಲು ಕೇಂದ್ರ ಸರಕಾರ ಬದ್ಧವಿದ್ದು; ರಾಜ್ಯದ ಮುಖ್ಯಮಂತ್ರಿ ಹಾಗೂ ತಾವು ಮನವಿ ಮಾಡಿಕೊಂಡು ಗೃಹಇಲಾಖೆಯ ಗಮನ ಸೆಳೆಯುವದಾಗಿ ಸದಾನಂದಗೌಡ ಭರವಸೆ ನೀಡಿದರು.
ಆರ್ಥಿಕ ನೆರವು : ಈಗಾಗಲೇ ಜಿಲ್ಲಾಡಳಿತದಲ್ಲಿ ರೂ. 58 ಕೋಟಿ ತುರ್ತು ಸೇವಾ ನಿಧಿ ಕಾಯ್ದಿರಿಸಿದ್ದು; ಕೇಂದ್ರ ಸರಕಾರಕ್ಕೆ ರಾಜ್ಯದಿಂದ ರೂ. 128 ಕೋಟಿ ಪ್ರಸ್ತಾವನೆಯೊಂದಿಗೆ; ರೂ. 100 ಕೋಟಿ ಬಿಡುಗಡೆಗೊಳಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಬಿಎಸ್ಎನ್ಎಲ್ಗೂ ಸೂಚನೆ : ಕೊಡಗಿನಲ್ಲಿ ಯಾವದೇ ಬಿಎಸ್ಎನ್ಎಲ್ ಟವರ್ಗಳು ಕಾರ್ಯನಿರ್ವಹಿಸದೆ; ಸಾರ್ವಜನಿಕ ಸಂಪರ್ಕಕ್ಕೆ ಸಮಸ್ಯೆಯಾಗುತ್ತಿರುವ ಕುರಿತು; ಸಂಬಂಧಿಸಿದ ಅಧಿಕಾರಿಗಳು ಕ್ಷಿಪ್ರ ಕೆಲಸ ನಿರ್ವಹಿಸಿ ಎಲ್ಲಾ ಟವರ್ಗಳು ಚಾಲನೆಗೊಳ್ಳುವಂತೆ ಕ್ರಮ ವಹಿಸಲು ಕೇಂದ್ರ ಸಚಿವರು ಸೂಚಿಸಿದರು. ವಿನಿಮಯ ಕೇಂದ್ರಗಳ ಜನರೇಟರ್ ನಿರ್ವಹಣೆಗೆ ಡೀಸೆಲ್ ಬಳಕೆಗೆ ನಿಗಾವಹಿಸುವಂತೆಯೂ ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತುರ್ತು ರಕ್ಷಣೆ : ಕಳೆದ ವರ್ಷ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವವರಿಗೆ ಇದುವರೆಗೂ ಸಮರ್ಪಕ ನೆರವು ಲಭಿಸಿಲ್ಲವೆಂದು ಬೊಟ್ಟು ಮಾಡಿದ ಸಚಿವರು; ಪ್ರಸಕ್ತ ಯಾವ ಕಾರಣಕ್ಕೂ ಕಾಲಹರಣ ಅಥವಾ ವಿಳಂಬ ಮಾಡದೆ ಜನತೆಯ ಜೀವರಕ್ಷಣೆಯೊಂದಿಗೆ ಕಷ್ಟದಿಂದ ಪಾರು ಮಾಡಲು ಮಾದ್ಯಮ ಬಳಗ ಸಹಿತ ಎಲ್ಲರೂ ಕೈಜೋಡಿಸಲು ಕರೆ ನೀಡಿದರು.
ತುರ್ತು ಸಭೆಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಉಪವಿಭಾಗಾಧಿಕಾರಿ ಟಿ. ಜವರೇಗೌಡ ಮೊದಲಾದವರು ಹಾಜರಿದ್ದು, ಮಾಹಿತಿ ಒದಗಿಸಿದರು.