ಮಡಿಕೇರಿ, ಆ. 9: ಮಡಿಕೇರಿ ನಗರದಲ್ಲಿಯೂ ಮಳೆಯ ತೀವ್ರತೆ ನಡುವೆ ಇಲ್ಲಿನ ರಾಜ ಕಾಲುವೆ ಸಹಿತ ರಸ್ತೆ - ಚರಂಡಿಗಳಲ್ಲಿ ನೀರಿನ ಹರಿಯುವಿಕೆಯಲ್ಲಿ ಏರಿಕೆ ಕಂಡು ಬಂದಿದೆ. ಅಲ್ಲಲ್ಲಿ ರಸ್ತೆಗಳಲ್ಲಿ ನೀರು ಚರಂಡಿಯಿಲ್ಲದೆ ಮಣ್ಣಿನ ಕೊರೆಯುವಿಕೆ ಪರಿಣಾಮ ವಾಹನಗಳು, ಪಾದಚಾರಿಗಳಿಗೆ ಸಮಸ್ಯೆ ಎದುರಾಗಿದೆ.
ಇಲ್ಲಿನ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇಗುಲ ಮುಂಭಾಗದ ಕೆರೆ ತುಂಬಿಕೊಂಡು; ಪ್ರವಾಸಿಗಳ ಗಮನ ಸೆಳೆಯುವಂತಾಗಿದೆ. ಆಂಜನೇಯ ಗುಡಿ ಬಳಿ ರಾಜಕಾಲುವೆಯ ನೀರು ರಸ್ತೆಯಲ್ಲಿ ಆಕ್ರಮಿಸಿಕೊಂಡಿರುವ ದೃಶ್ಯ ಗೋಚರಿಸಿದೆ.
ನಗರದ ಶ್ರೀ ಓಂಕಾರೇಶ್ವರ ದೇವಾಲಯ ರಸ್ತೆ ಬಳಿ ಬೊಳ್ಳಿಯಂಡ ಹರೀಶ್ ಎಂಬವರ ಕಟ್ಟಡದ ತಡೆಗೋಡೆ ಕುಸಿದಿದ್ದು, ತೋಡು ನೀರಿನಲ್ಲಿ ಕೊಚ್ಚಿಹೋಗಿದೆ. ಕೊಡಗಿನೆಲ್ಲೆಡೆ ಆತಂಕ ಸೃಷ್ಟಿಸಿರುವ ಮಳೆರಾಯ ನಗರವಾಸಿಗಳಲ್ಲೂ ನಿದ್ದೆಗೆಡಿಸಿ ಎಡೆಬಿಡದೆ ಸುರಿಯುತ್ತಿದೆ. ನಗರದ ಐತಿಹಾಸಿಕ ಕೋಟೆಯೊಳಗೆ ಅರಮನೆ ಆವರಣವು ಜಲಾವೃತಗೊಂಡಿದೆ.