ಮಡಿಕೇರಿ, ಆ. 9: ಜಿಲ್ಲೆಯಲ್ಲಿ ಮಳೆ- ಗಾಳಿಯ ಅಬ್ಬರ ಆರಂಭಗೊಂಡು ಈಗಾಗಲೇ ನಾಲ್ಕೈದು ದಿನಗಳು ಕಳೆದಿವೆ. ಇದೀಗ ಇದು ಮತ್ತಷ್ಟು ಮುಂದುವರಿಯುತ್ತಿರುವದರಿಂದ ಅಲ್ಲಲ್ಲಿ ಭಾರಿ ದುರಂತಗಳು ಘಟಿಸುತ್ತಿವೆ.
* ಕೋರಂಗಾಲದಲ್ಲಿ ಅತ್ತೇಡಿ ಕುಟುಂಬದ ಐನ್‍ಮನೆ ಕುಸಿದುಬಿದ್ದಿದ್ದು, ಮಣ್ಣಿನಲ್ಲಿ ಸಿಲುಕಿ ಐದುಮಂದಿ ಮೃತಪಟ್ಟಿರುವ ದುರ್ಘಟನೆ ಜನತೆಯನ್ನು ಕಂಗೆಡಿಸಿದೆ.
* ನಿನ್ನೆಯಿಂದಲೇ ಜಲಾವೃತಗೊಂಡಿರುವ ಪ್ರದೇಶಗಳಲ್ಲಿ ನೀರಿನ ಮಟ್ಟ ಇನ್ನಷ್ಟು ಏರಿಕೆಯಾಗುತ್ತಿದ್ದು, ಜನ ಭಯಭೀತರಾಗುವಂತಾಗಿದೆ.
* ಗೋಣಿಕೊಪ್ಪಲು, ಕುಶಾಲನಗರ, ಕರಡಿಗೋಡು, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಗಳಲ್ಲಿನ ಜನರು ಜಾಗ ಖಾಲಿ ಮಾಡುವಂತಾಗಿದೆ.
* ಬೇತ್ರಿ ಸನಿಹದಲ್ಲಿ ಹಲವಾರು ಮನೆಗಳು ನೆಲಸಮಗೊಂಡಿವೆ.
* ಬಿರುನಾಣಿಯ ಅಣ್ಣಳಮಾಡ ಕಾಂತ ಎಂಬವರ ಮನೆಯ ಹಿಂಬದಿಯಲ್ಲಿ ಭಾರೀ ಭೂಕುಸಿತ ಸಂಭವಿಸಿದೆ.
* ಕೆದಮುಳ್ಳೂರು ಗ್ರಾಮದ ತೋರದಲ್ಲಿ ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮತ್ತಷ್ಟು ಭೂಕುಸಿತದ ಭೀತಿ ಎದುರಾಗಿದೆ.
* ಲಕ್ಷ್ಮಣ ತೀರ್ಥ ನದಿ ಪಾತ್ರದ ಗ್ರಾಮಗಳಾದ ಕಾನೂರು, ಬಾಳೆಲೆ, ದೇವನೂರು, ರಾಜಪುರ ಮತ್ತಿತರ ಕಡೆಗಳಲ್ಲಿ ಪ್ರವಾಹ ಏರಿಕೆಯಾಗುತ್ತಲೇ ಇದ್ದು, ಪ್ರವಾಹದ ನಡುವೆ ಸಿಲುಕಿರುವ ಮಂದಿ ಸಹಾಯಕ್ಕಾಗಿ ಅಂಗಲಾಚುವಂತಾಗಿದೆ.
* ಕಳೆದ ವರ್ಷ ಕುಸಿತಕ್ಕೊಳಗಾಗಿದ್ದ ಕುಟ್ಟ ಮೂಲಕ ಕೇರಳ ಸಂಪರ್ಕಿಸುವ ಹುದಿಕೇರಿ - ಪೋಕಳ ತೋಡು ರಸ್ತೆ ಮತ್ತೆ ಅಪಾಯದಂಚಿನಲ್ಲಿದೆ.
* ಭಾಗಮಂಡಲ ಸುತ್ತಮುತ್ತಲು, ನಾಪೋಕ್ಲು ವ್ಯಾಪ್ತಿ, ಕಾನೂರು, ಬಾಳೆಲೆ ವ್ಯಾಪ್ತಿಯ ಎಲ್ಲಾ ರಸ್ತೆಗಳಲ್ಲಿ ಸಂಪರ್ಕ ಕಡಿತಗೊಂಡಿದೆ.
* ಬೇತ್ರಿ ಸೇತುವೆ ಮೇಲೆ ನಿಂತಿರುವ ನೀರನ್ನು ಈ ಶತಮಾನದ ದಾಖಲೆ ಎಂದು ಹೇಳಲಾಗುತ್ತಿದ್ದು, ಈ ವ್ಯಾಪ್ತಿಯ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿವೆ.
* ದೂರವಾಣಿ, ಮೊಬೈಲ್ ನೆಟ್‍ವರ್ಕ್ ಸಮಸ್ಯೆಯಿಂದಾಗಿ ಸಾಕಷ್ಟು ಮಂದಿ ತಾವು ಸಿಲುಕಿಕೊಂಡಿರುವ ಪ್ರದೇಶಗಳ ಮಾಹಿತಿ ನೀಡಲಾಗದೆ ಪರಿತಪಿಸುತ್ತಿದ್ದಾರೆ.