ಕೂಡಿಗೆ, ಆ. 8: ಕಳೆದ ಒಂದು ವಾರದಿಂದ ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಹಾರಂಗಿ ಅಣೆಕಟ್ಟೆಗೆ ನೀರು ಸಂಗ್ರಹ ಹೆಚ್ಚಾಗಿದ್ದು, ಹಾರಂಗಿ ಅಣೆಕಟ್ಟೆಯ ಮುಖ್ಯ 4 ಕ್ರಸ್ಟ್ ಗೇಟ್‍ಗಳ ಮೂಲಕ 20 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗಿದೆ.
ಜಲಾಶಯಕ್ಕೆ 36,000 ಕ್ಕೂ ಹೆಚ್ಚು ಕ್ಯೂಸೆಕ್ ನೀರು ಒಳಹರಿವಿದ್ದು, ಈ ಹಿನ್ನೆಲೆಯಲ್ಲಿ ಗಂಟೆಗೊಮ್ಮೆ ನೀರಿನ ಒಳಹರಿವಿನ ಪ್ರಮಾಣವನ್ನು ಅರಿತು ಮೇಲಾಧಿಕಾರಿಗಳ ಆದೇಶದನ್ವಯ ನದಿಗೆ ನೀರನ್ನು ಹರಿಸಲಾಗುತ್ತಿದೆ. ಕಳೆದ ದಿನ ಅಣೆಕಟ್ಟೆಗೆ ಇನ್ನೂ 15 ಅಡಿ ತುಂಬಬೇಕಾದ ಸಂದರ್ಭವಿತ್ತು. ಬುಧವಾರ ರಾತ್ರಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಸುರಿದ ಪರಿಣಾಮ ಅಣೆಕಟ್ಟೆಗೆ ಭಾರೀ ನೀರು ಸಂಗ್ರಹವಾಗುತ್ತಿದೆ. ಇದರನ್ವಯ ಗುರುವಾರ ಬೆಳಗ್ಗೆ 9.30 ಗಂಟೆಗೆ ಅಣೆಕಟ್ಟೆಯಿಂದ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ 5000 ಕ್ಯೂಸೆಕ್‍ನಂತೆ ನೀರನ್ನು ಹರಿಸಲಾಯಿತು. ನಂತರ ನೀರಿನ ಪ್ರಮಾಣ ಹೆಚ್ಚಾದಂತೆ 20000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಜಲಾಶಯ ತುಂಬಲು ಇನ್ನೂ 3.5 ಅಡಿ ಬಾಕಿಯಿದ್ದಾಗಲೇ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರ ನಿರ್ದೇಶನ ಮತ್ತು ಮೇಲಾಧಿಕಾರಿಗಳ ಆದೇಶದಂತೆ ಇಲಾಖೆಯ ಅಧಿಕಾರಿಗಳು ನೀರನ್ನು ಕ್ರಸ್ಟ್ ಗೇಟ್‍ಗಳ ಮೂಲಕ ಹರಿಯಬಿಟ್ಟಿದ್ದಾರೆ.
ಕಳೆದ ಬಾರಿ ಹಾರಂಗಿ ಜಲಾಶಯದಿಂದ 70,000 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಟ್ಟ ಕಾವೇರಿ ನೀರು ಮತ್ತು ಹಾರಂಗಿ ನೀರು ಸಂಗಮವಾಗಿ ನೀರು ಹೆಚ್ಚಾದ ಪರಿಣಾಮ ಕುಶಾಲನಗರ ಮತ್ತು ಕೂಡಿಗೆಯ ಕೆಲವು ಬಡಾವಣೆಗಳು ಜಲಾವೃತಗೊಂಡು ಹಾನಿ ಗೊಳಾಗಿದ್ದವು. ಇದನ್ನರಿತ ಇಲಾಖೆ ಮತ್ತು ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರು ನೀರು ಅಣೆಕಟ್ಟೆಗೆ ಇನ್ನೂ 3.5 ಅಡಿ ಇರುವಾಗಲೇ ನದಿಗೆ ಹರಿಸುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನೀರನ್ನು ಹರಿಯಬಿಡಲಾಗಿದೆ.
ಈ ಸಂದರ್ಭ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್, ತಾಲೂಕು ಪಂಚಾಯ್ತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಮಂಜುಳಾ, ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್‍ರಾಜ್, ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಸುನೀಲ್, ಹಾರಂಗಿ ಅಣೆಕಟ್ಟೆಯ ಸೂಪರಿಡೆಂಟ್ ಇಂಜಿನಿಯರ್ ಮಂಜುನಾಥ್, ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಗೌಡ, ಸಹಾಯಕ ಇಂಜಿನಿಯರ್ ನಾಗರಾಜ್ ಸೇರಿದಂತೆ ಜನಪ್ರತಿನಿಧಿಗಳು ಇದ್ದರು.
-ನಾಗರಾಜಶೆಟ್ಟಿ