*ಸಿದ್ದಾಪುರ, ಆ. 8: ಇಲ್ಲಿಗೆ ಸಮೀಪದ ಅಭ್ಯತ್ಮಂಗಲ ಗ್ರಾ.ಪಂ. ವ್ಯಾಪ್ತಿಯ ವಾಲ್ನೂರುವಿನ ಹೊಳೆಕೆರೆ ಪೈಸಾರಿಯ 24 ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಪೈಸಾರಿ ಸುತ್ತಮುತ್ತ ನದಿ ನೀರು ಆವರಿಸಿದ್ದು, ಅಲ್ಲಿದ್ದ 24 ಕುಟುಮಬಗಳನ್ನು ವಾಲ್ನೂರು ಶಾಲೆಯಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
1994ರ ಬಳಿಕ ಇದೇ ಪ್ರಥಮ ಬಾರಿಗೆ ಈ ರೀತಿಯ ಪ್ರವಾಹ ಈ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಈ ಸಂದರ್ಭ ಗ್ರಾ.ಪಂ. ಸದಸ್ಯರುಗಳಾದ ಅಂಚೆಮನೆ ಸುಧಿ, ಭುವನೇಂದ್ರ, ಗ್ರಾಮ ಲೆಕ್ಕಿಗರಾದ ಅನುಷಾ, ಮುಖ್ಯೋಪ್ಯಾಧ್ಯಾಯರಾದ ಕುಮಾರ್, ಬಿಜೆಪಿ ಅಧ್ಯಕ್ಷ ಸುರೇಶ್ ಇನ್ನಿತರರು ಇದ್ದರು.
ಸಿದ್ದಾಪುರ-ಪಾಲಿಬೆಟ್ಟ ರಸ್ತೆಯ ಸುಣ್ಣದಗೂಡು ಎಂಬಲ್ಲಿ 6 ಮನೆಗಳಿಗೆ ನೀರು ನುಗ್ಗಿದ್ದು, ಪ್ರದೇಶ ಜಲಾವೃತವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸುನಿಲ್ ಅವರೊಂದಿಗೆ ಬಿಜೆಪಿ ಅಧ್ಯಕ್ಷ ಬಿ.ಬಿ. ಭಾರತೀಶ್ ಇದ್ದರು.
-ಸುಧಿ