ಸುಂಟಿಕೊಪ್ಪ, ಆ. 8: ಆಶ್ಲೇಷಾ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬರೆ ಕುಸಿತ ಮರ ಧರೆಗೆ ಉರುಳುವದು, ಮನೆಗೆ ಮರಗಳು ಬಿದ್ದು ಹಾನಿಯಾಗುತ್ತಿದ್ದು ನದಿ ಹೊಳೆ ತೊರೆ ತುಂಬಿ ತುಳುಕುತ್ತಿದೆ. ಗಾಳಿ ಮಳೆಯಿಂದ ವಿದ್ಯುತ್ ಕಂಬಗಳು ಧರೆಗುರುಳಿ ಕಾರ್ಗತ್ತಲೆಯಾದರೆ ಜನತೆ ಪ್ರವಾಹದ ಭೀತಿಗೆ ಒಳಗಾಗಿದ್ದಾರೆ.
ಹರದೂರು ಹೊಳೆಯ ಆಸುಪಾಸಿನ ಪ್ರದೇಶ ಜಲಾವೃತ್ತವಾಗಿದ್ದು ಕೆಳಗಿನ ಸೇತುವೆ ಮುಳುಗಿದೆ. ಹರದೂರು ಗ್ರಾ.ಪಂ. ಅಧ್ಯಕ್ಷೆ ಸುಮಾ ಚಂದ್ರ ಅವರ ಮನೆಗೆ ಮರಬಿದ್ದು ಮನೆ ಜಖಂಗೊಂಡಿದೆ. ಹಟ್ಟಿಹೊಳೆ ಹಾಲೇರಿ ರಸ್ತೆ ಕಳೆದ ಬಾರಿ ಭೂ ಸಮಾಧಿಯಾಗಿದ್ದನ್ನು ಮರು ಕಾಮಗಾರಿ ನಡೆಸಲಾಗಿತ್ತು. ಈಗ ಮತ್ತೆ ಈ ರಸ್ತೆ ಕುಸಿಯುತ್ತಿದ್ದು, ರಸ್ತೆ ಸಂಚಾರಕ್ಕೆ ತೊಡಕಾಗಿದೆ. ಸುಂಟಿಕೊಪ್ಪ ಚೆಟ್ಟಳ್ಳಿ ತೆರಳುವ ಶ್ರೀದೇವಿ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಮಾದಾಪುರ ಸರಕಾರಿ ಪ್ರೌಢಶಾಲೆಯ ಶೀಟು ಹಾರಿಹೋಗಿದ್ದು, ಮಾದಾಪುರ ಶಾಹೀರಾ ಎಂಬವರ ಮನೆಯ ಶೀಟು ಪಕ್ಕದ ಮನೆಯ ರಂಜು ಸವಿತಾ ಚಂದ್ರಾವತಿ ಮನೆಗೆ ಬಿದ್ದುದರಿಂದ ಇವರುಗಳ ಮನೆ ಜಖಂಗೊಂಡಿದೆ.
ರಾತ್ರಿವೇಳೆ ಬೀಸಿದ ಬಿರುಗಾಳಿಗೆ ವಾಣಿಜ್ಯ ಮಳಿಗೆಗಳ ನಾಮಫಲಕಗಳು ಗಾಳಿಗೆ ಧರಾಶಾಹಿಗೊಂಡಿವೆ.
ಕೆದಕಲ್ ಹಾಲೇರಿ ಕಾಂಡನಕೊಲ್ಲಿ ಸಂಪರ್ಕ ರಸ್ತೆಯು ಕಳೆದ ವರ್ಷ ಸಂಭವಿಸಿದ ಪಕೃತಿ ವಿಕೋಪಕ್ಕೆ ಸಿಲುಕಿ ರಸ್ತೆ ಸಂಪರ್ಕವೇ ಕಡಿದುಕೊಂಡಿತ್ತು. ಆದರೆ ಭಂಡಾರಿ ತೋಟದ ಸಮೀಪ ನೂತನವಾಗಿ ರಸ್ತೆಗೆ ನಿರ್ಮಿಸಲಾದ ತಡೆಗೋಡೆ ಸಂಪೂರ್ಣ ಕುಸಿತಗೊಂಡು ಲಕ್ಷಾಂತರ ರೂ ನಷ್ಟ ಉಂಟಾಗಿದೆ.
ಕೊಡ್ಲಿಪೇಟೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ಸಿಗೆ ಸುಂಟಿಕೊಪ್ಪದ ಕೆಂಚಟ್ಟಿ ಬಳಿ ಮಳೆ ಗಾಳಿಗೆ ವಿದ್ಯುತ್ ಕಂಬ ಬಿದ್ದಿದ್ದು, ಯಾವದೇ ಪ್ರಾಣಹಾನಿಯಾಗಲಿಲ್ಲ ಇದರಿಂದ ವಾಹನ ಸಂಚಾರಕ್ಕೆ 1 ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಯಿತು.
ಕಲ್ಲೂರು ಲಿಗೋರಿ ಡಿಸೋಜ ಅವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಶಿವಪ್ಪ ಹಾಗೂ ಗ್ರಾಮಲೆಕ್ಕಿಗರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ತಯಾರಿಸಿಕೊಂಡಿದ್ದಾರೆ.
ಸುಂಟಿಕೊಪ್ಪದ ಕಳೆದ ಮೂರು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಆಂದಾಜು 40ಕ್ಕೂ ಮಿಕ್ಕಿ ವಿದ್ಯುತ್ ಕಂಬಗಳು ಧರೆಗುರುಳಿವೆ.
ನಾಕೂರು, ಹೊಸಕೋಟೆ, ಮಾದಾಪುರ ರಸ್ತೆ, ಸುಂಟಿಕೊಪ್ಪ, ಮತ್ತಿಕಾಡು, ಕೆದಕಲ್, ಕೊಡಗರಹಳ್ಳಿ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳುತ್ತಿದ್ದು, ಹಗಲು ರಾತ್ರಿಯೆನ್ನದೆ ಚೆಸ್ಕಾಂ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಸಾಧ್ಯವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. -ರಾಜುರೈ