ಸೋಮವಾರಪೇಟೆ, ಆ. 8: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ವಾಯು-ವರುಣನಾರ್ಭಟಕ್ಕೆ ಜನಜೀವನ ಸ್ಥಬ್ಧಗೊಂಡಿದ್ದು, ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿದೆ. ಅಘೋಷಿತ ಕಫ್ರ್ಯೂ ವಿಧಿಸಿದಂತೆ ಪಟ್ಟಣ ಕಂಡುಬರುತ್ತಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿದೆ.ಗ್ರಾಮೀಣ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಕಾರ್ಗತ್ತಲಲ್ಲಿ ಜನರು ಜೀವನ ಸಾಗಿಸುವಂತಾಗಿದೆ. ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿರುವದರಿಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಮರಗಳು ಬೀಳುವದರೊಂದಿಗೆ ರಸ್ತೆ ಸಂಚಾರದಲ್ಲೂ ವ್ಯತ್ಯಯವಾಗಿದೆ.

ಪಟ್ಟಣದ ಮಾನಸ ಸಭಾಂಗಣದ ಹಿಂಭಾಗದಲ್ಲಿ ಕಕ್ಕೆಹೊಳೆಗೆ ಸಂಪರ್ಕ ಕಲ್ಪಿಸುವ 65 ಅಡಿ ಉದ್ದದ ತಡೆಗೋಡೆ ಸಂಪೂರ್ಣ ಕುಸಿದಿದೆ. ಹೆಗ್ಗುಳ ಸಮೀಪ ರಸ್ತೆಗೆ ಅಡ್ಡಲಾಗಿ ಮರಬಿದ್ದ ಹಿನ್ನೆಲೆಯಲ್ಲಿ ಸೋಮವಾರಪೇಟೆ, ಶನಿವಾರಸಂತೆ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿತ್ತು. ಮಾದಾಪುರ ಸಮೀಪ ರಸ್ತೆ ಕುಸಿದ ಹಿನ್ನೆಲೆಯಲ್ಲಿ ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುವ ಬಸ್‍ಗಳು ಸುಂಟಿಕೊಪ್ಪ ಮಾರ್ಗವಾಗಿ ತೆರಳುತ್ತಿವೆ. ಖಾಸಗಿ ಬಸ್‍ಗಳು ಬೆರಳಣಿಕೆಯಷ್ಟು ಮಾತ್ರ ಸಂಚರಿಸುತ್ತಿದ್ದು,

(ಮೊದಲ ಪುಟದಿಂದ) ಪ್ರಮಾಣಿಕರಿಗೆ ತೊಂದರೆ ಅನುಭವಿಸುವಂತಾಗಿದೆ.

ಮುಂದುವರೆದ ಹಾನಿ: ಸಮೀಪದ ಹಾನಗಲ್ಲು ಬಾಣೆ ಗ್ರಾಮದ ಭವಾನಿ ರಮೇಶ್ ಅವರ ವಾಸದ ಮನೆಯ ಗೋಡೆ ಕುಸಿದು ರೂ. 50 ಸಾವಿರ ನಷ್ಟವಾಗಿದೆ. ಹಾನಗಲ್ಲು ಶೆಟ್ಟಳ್ಳಿ ಗ್ರಾಮದ ಉಲ್ಲಾಸ್‍ರವರ ಕೊಟ್ಟಿಗೆ ಮೇಲೆ ಮರ ಬಿದ್ದು, ಮೇಲ್ಚಾವಣಿ ನಷ್ಟವಾಗಿದೆ.

ಮಸಗೋಡು ಗ್ರಾಮದ ಆನಂದ ಎಂಬವರ ವಾಸದ ಮನೆ ಮೇಲೆ ಮರ ಬಿದ್ದು ಮನೆಯ ಹಿಂಭಾಗದ ಗೋಡೆ ಕುಸಿದಿದ್ದು, ಅಂದಾಜು ರೂ. 50ಸಾವಿರ ನಷ್ಟವಾಗಿದೆ. ತಾಲೂಕಿನ ಯಡುಂಡೆ ಗ್ರಾಮದ ಹರಿಣಾಕ್ಷಿ ಎಂಬವರ ವಾಸದ ಮನೆಯ ಮೇಲೆ ಮರಬಿದ್ದಿವೆ. ಗಣಗೂರು ಗ್ರಾಮದ ಬಿ.ಡಿ. ನಿಂಗರಾಜು ಎಂಬವರ ಮನೆಯ ಒಂದು ಭಾಗ ಭಾರಿ ಮಳೆಗೆ ಕುಸಿದಿದ್ದು, ಅಂದಾಜು ರೂ. 40 ಸಾವಿರ ನಷ್ಟವಾಗಿರುವದಾಗಿ ತಿಳಿದುಬಂದಿದೆ. ಹರದೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಸುಮಾ ಅವರ ಮನೆ ಮೇಲೆ ಮರ ಬಿದ್ದು, ನಷ್ಟ ಸಂಭವಿಸಿದೆ.

ಕಿಬ್ಬೆಟ್ಟ ಗ್ರಾಮದ ಪ್ರಶಾಂತ್ ಎಂಬವರ ಮನೆ ಸಮೀಪದಲ್ಲಿ ರಸ್ತೆ ಕುಸಿತ ಉಂಟಾಗಿದ್ದ, ಮನೆಗೆ ಅಪಾಯ ತಂದೊಡ್ಡಿದೆ. ಕಳೆದ ಸಾಲಿನಲ್ಲಿ ಇದೇ ಪ್ರದೇಶದಲ್ಲಿ ಕುಸಿತ ಉಂಟಾಗಿದ್ದ ಹಿನ್ನೆಲೆ ರೂ. 50 ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಭಾರೀ ಮಳೆಗೆ ತಡೆಗೋಡೆ ಕುಸಿದಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ.

ಕುಂಬೂರು-ಬಿಳಿಗೇರಿ ರಸ್ತೆಯ ಜಂಬೂರು ಬಳಿಯಲ್ಲಿ ರಸ್ತೆಗೆ ಅಡ್ಡಲಾಗಿ ನಾಲ್ಕೈದು ಮರಗಳು ಬಿದ್ದಿರುವ ಪರಿಣಾಮ ವಿದ್ಯುತ್ ತಂತಿ-ಕಂಬಗಳು ನೆಲಕ್ಕುರುಳಿವೆ. ಈ ಭಾಗದಲ್ಲಿ ಕಳೆದ ಮಂಗಳವಾರದಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಕತ್ತಲೆಯಲ್ಲೇ ಜೀವನ ಸಾಗಿಸುವಂತಾಗಿದೆ.

ಐಗೂರು ಗ್ರಾಮದಲ್ಲಿ ಮರ ಬಿದ್ದಿರುವ ಪರಿಣಾಮ ವಿದ್ಯುತ್ ಟ್ರಾನ್ಸ್‍ಫಾರ್ಮರ್ ಸಹಿತ ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು. ಮೂರು ವಿದ್ಯುತ್ ಕಂಬಗಳು ತುಂಡಾಗಿವೆ. ಈ ಭಾಗದಲ್ಲೂ ವಿದ್ಯುತ್ ಸ್ಥಗಿತಗೊಂಡಿದೆ.

ಕೊಡ್ಲಿಪೇಟೆ-ಶನಿವಾರಸಂತೆ-ಸೋಮವಾರಪೇಟೆ-ಮಡಿಕೇರಿ ರಾಜ್ಯ ಹೆದ್ದಾರಿಯ 20ಕ್ಕೂ ಅಧಿಕ ಕಡೆಗಳಲ್ಲಿ ಮರಗಳು ರಸ್ತೆಗೆ ಉರುಳಿ ಬಿದ್ದಿದ್ದು, ಸಾರ್ವಜನಿಕರ ಸಹಕಾರದೊಂದಿಗೆ ಮರಗಳನ್ನು ತೆರವುಗೊಳಿಸಲಾಗಿದೆ.

ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಇಲಾಖಾ ಸಿಬ್ಬಂದಿಗಳು ಸಮರೋಪಾದಿ ಕೆಲಸ ನಿರ್ವಹಿಸುತ್ತಿದ್ದು, ಲೈನ್‍ಗಳ ಮೇಲೆ ಬಿದ್ದ ಮರಗಳನ್ನು ತೆರವುಗೊಳಿಸುವದು, ನೂತನ ಕಂಬಗಳನ್ನು ಅಳವಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಲೂಕಿನ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಪರಿಣಾಮ ಮಾದಾಪುರ ಹೊಳೆ, ಹಟ್ಟಿಹೊಳೆ ತುಂಬಿ ಹರಿಯುತ್ತಿದೆ.

ಐಗೂರು ಗ್ರಾಮದ ಚೋರನ ಹೊಳೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಹರಿಯುತ್ತಿದೆ. ಕಿರಗಂದೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಹೊಳೆ ಪಾತ್ರದ ಮನೆಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ರಸ್ತೆ ಕುಸಿತ: ಸೋಮವಾರಪೇಟೆ-ಮಾದಾಪುರ-ಹಟ್ಟಿಹೊಳೆ-ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿ ಹಟ್ಟಿಹೊಳೆ ಸಮೀಪ ರಸ್ತೆ ಕುಸಿತಗೊಂಡಿದೆ. ಕಳೆದ ಸಾಲಿನ ಪ್ರಾಕೃತಿಕ ವಿಕೋಪ ಸಂದರ್ಭ ಕೊಚ್ಚಿಹೋಗಿದ್ದ ರಸ್ತೆಯಲ್ಲಿ ನೂತನ ಮೋರಿ ಅಳವಡಿಸಲಾಗಿದ್ದು, ಇದೇ ಸ್ಥಳದಲ್ಲಿ ಇದೀಗ ರಸ್ತೆ ಕುಸಿತಗೊಂಡಿದ್ದು, ವಾಹನ ಸಂಚಾರಕ್ಕೆ ತಡೆಬಿದ್ದಿದೆ.

ಒಟ್ಟಾರೆ ಸೋಮವಾರಪೇಟೆ ತಾಲೂಕಿನ ಪಶ್ಚಿಮ ಭಾಗದಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಸ್ಥಗಿತಗೊಂಡಿದೆ. ಜನರು ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವಷ್ಟು ಖಾಸಗಿ ಬಸ್‍ಗಳ ಸಂಚಾರ ಸ್ಥಗಿತಗೊಳಿಸಿವೆ. ವಿದ್ಯುತ್ ಸ್ಥಗಿತ ಸಾಮಾನ್ಯ ಎಂಬಂತಾಗಿದ್ದು, ಕತ್ತಲೆಯಲ್ಲಿ ದಿನ ದೂಡುವಂತಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಗೆ 164.2 ಮಿ.ಮೀ., ಶಾಂತಳ್ಳಿಗೆ 286.6 ಮಿ.ಮೀ., ಕೊಡ್ಲಿಪೇಟೆಗೆ 140 ಮಿ.ಮೀ., ಶನಿವಾರಸಂತೆಗೆ 118.2 ಮಿ.ಮೀ., ಸುಂಟಿಕೊಪ್ಪಕ್ಕೆ 81 ಮಿ.ಮೀ., ಕುಶಾಲನಗರಕ್ಕೆ 33.8 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ. -ವಿಜಯ್