ಮಡಿಕೇರಿ, ಆ. 8: ಕೊಡಗು ಜಿಲ್ಲೆಯ ಮಳೆಯಬ್ಬರದ ಪರಿಸ್ಥಿತಿ ಮತ್ತಷ್ಟು ಹೆಚ್ಚಾಗಿದೆ. ಭಾರೀ ವೇಗದ ಗಾಳಿ ಸಹಿತವಾಗಿ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸ್ತುತದ ಸನ್ನಿವೇಶ ಇನ್ನಷ್ಟು ಹದಗೆಡುತ್ತಿದೆ.ಈಗಾಗಲೇ ವ್ಯಾಪಕ ಹಾನಿಯೊಂದಿಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಈ ದಾರುಣತೆ ಇನ್ನೂ ಮುಂದುವರಿಯುತ್ತಿರುವದ ರೊಂದಿಗೆ ಪ್ರತಿಯೊಬ್ಬರಲ್ಲೂ ಆತಂಕ ಹೆಚ್ಚಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗಾಳಿ-ಮಳೆಗೆ ಇನ್ನಷ್ಟು ಅಧಿಕವಾಗಿದ್ದು, ಎಲ್ಲೆಲ್ಲೂ ಜಲಾವೃತಗೊಳ್ಳುತ್ತಿದೆ. ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ಇನ್ನಿತರ ನದಿಗಳು, ತೊರೆ-ತೋಡುಗಳಲ್ಲಿ ನೀರು ಅಪಾಯಕಾರಿ ಹಂತ ತಲಪಿದ್ದು, ನೀರಿನ ಹರಿವಿನ ರಭಸದ ದೃಶ್ಯ ಭಯಾನಕವಾಗಿ ಕಂಡುಬರುತ್ತಿದೆ. ಕೇವಲ ಗ್ರಾಮೀಣ ಪ್ರದೇಶಗಳು ಮಾತ್ರವಲ್ಲದೆ ಜಿಲ್ಲೆಯ ಇನ್ನಿತರ ನಗರ-ಪಟ್ಟಣ ಪ್ರದೇಶಗಳಲ್ಲಿಯೂ ಧಾರಾಕಾರ ಮಳೆ ಹಾಗೂ ಭಾರೀ ಗಾಳಿ ಬೀಸುತ್ತಿದ್ದು, ಈಗಿನ ಪರಿಸ್ಥಿತಿ (ಮೊದಲ ಪುಟದಿಂದ) ಎಲ್ಲರನ್ನೂ ಕಂಗೆಡುವಂತೆ ಮಾಡಿದೆ. ಹಾರಂಗಿ ಒಳ ಹರಿವಿನ ಪ್ರಮಾಣ ಸುಮಾರು 20 ಸಾವಿರ ಕ್ಯೂಸೆಕ್ಸ್ ಇದ್ದು, 30 ಸಾವಿರ ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಬಿಡುಗಡೆ ಮಾಡಿರುವದರಿಂದ ಕುಶಾಲನಗರ ತಗ್ಗು ಪ್ರದೇಶದ ಜನ ನೀರಿನ ಭೀತಿಗೆ ಒಳಗಾಗಿದ್ದಾರೆ.
ಕಾನೂರು ಸಮೀಪದ ನಿಡುಗುಂಬ ಪ್ರದೇಶ ಸಂಪೂರ್ಣ ನೀರಿನಿಂದಾವೃತವಾಗಿದ್ದು, ಕುಟುಂಬಗಳು ಪಾರಾಗಲು ನೆರವು ಯಾಚಿಸಿದ್ದನ್ನು ಮನಗಂಡ ಜಿಲ್ಲಾಡಳಿತ ಸಂಜೆ ವೇಳೆಗೆ ಕುಟುಂಬಗಳನ್ನು ಎನ್‍ಡಿಆರ್‍ಎಫ್ ನೆರವಿನಿಂದ ಸ್ಥಳಾಂತ ಮಾಡಿತು. ಶ್ರೀಮಂಗಲ ವಿಎಸ್‍ಎಸ್‍ಎನ್ ಸಹಕಾರ ಸಂಘದ ಪರಿಹಾರ ಕೇಂದ್ರ ಆರಂಭಿಸಿದ್ದು, 50ಕ್ಕೂ ಹೆಚ್ಚು ಸಂತ್ರಸ್ತರು ಆಶ್ರಯ ಪಡೆದಿದ್ದಾರೆ. ಜಿಲ್ಲೆಯಲ್ಲಿ ಮುಂದಿನ ಕೆಲ ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿರುವದರಿಂದ ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಎಲ್ಲ ಇಲಾಖೆ ಹಾಗೂ ಕಚೇರಿಗಳ ಅಧಿಕಾರಿ ಮತ್ತು ಅಧೀನ ಸಿಬ್ಬಂದಿಗಳು ಕಡ್ಡಾಯವಾಗಿ ತಾ. 10 ರಂದು ಎರಡನೇ ಶನಿವಾರ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಗೈರು ಹಾಜರಾದವರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ.
ಮೂರ್ನಾಡು ಸಮೀಪದ ಬೇತ್ರಿ ಸೇತುವೆಯ ಮೇಲೆ 4 ಅಡಿಗಳಷ್ಟು ಎತ್ತರದಲ್ಲಿ ಕಾವೇರಿ ಹೊಳೆ ಹರಿಯುತ್ತಿದ್ದು, ಮಡಿಕೇರಿ ಹಾಗೂ ವೀರಾಜಪೇಟೆ ನೇರ ಸಂಪರ್ಕ ಬಂದ್ ಆಗಿದೆ. ಅದೇ ರೀತಿ ಕುಟ್ಟ-ಕೇರಳ ರಸ್ತೆಯಲ್ಲಿ ಮಳೆಯ ಅವಾಂತರದಿಂದ ಕುಟ್ಟ ಮೂಲಕ ಕರ್ನಾಟಕ-ಕೇರಳ ಅಂತರ್ರಾಜ್ಯ ಹೆದ್ದಾರಿ ಸಂಚಾರ ಕಡಿತಗೊಂಡಿದೆ. ಸಿದ್ದಾಪುರ, ಕರಡಿಗೋಡುವಿನಲ್ಲಿ 20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 20 ಮನೆಗಳು ಸಂಪೂರ್ಣ ಮುಳುಗಿ ಹೋಗಿವೆ. ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ 262 ಮಂದಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಕಕ್ಕಬೆ ನಾಲಡಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 22.50 ಇಂಚು ದಾಖಲೆ ಮಳೆ ಸುರಿದಿದೆ.
ಬಹುತೇಕ ವಿಭಾಗಗಳಲ್ಲಿ, ಅದರಲ್ಲೂ ಮೂರು ತಾಲೂಕಿನ ಗ್ರಾಮೀಣ ಪ್ರದೇಶಗಳು ಸಂಪರ್ಕ ರಹಿತವಾಗಿದ್ದು, ಈ ವಿಭಾಗದಲ್ಲಿ ಹಲವು ದಿನಗಳಿಂದ, ವಿದ್ಯುತ್ ಪೂರೈಕೆಯಾಗಲಿ, ದೂರವಾಣಿ, ಮೊಬೈಲ್ ಸಂಪರ್ಕಗಳು ಇಲ್ಲದಂತಾಗಿ ಹೊರ ಜಗತ್ತಿನಲ್ಲಿ ಏನಾಗುತ್ತಿದೆ ಎಂಬ ಅರಿವೂ ಇಲ್ಲದ ಸ್ಥಿತಿಯಲ್ಲಿ ಜನತೆ ಬದುಕು ಸವೆಸುವಂತಾಗಿದೆ.
ಜಿಲ್ಲೆಯ ಹಲವಾರು ಗ್ರಾಮೀಣ ವಿಭಾಗಗಳಲ್ಲಿ ಅದರಲ್ಲೂ ಬ್ರಹ್ಮಗಿರಿ ತಪ್ಪಲಿನ ಗ್ರಾಮಗಳು, ಪುಷ್ಪಗಿರಿ ವ್ಯಾಪ್ತಿಯಲ್ಲಿ ದಿನವೊಂದಕ್ಕೆ 12 ರಿಂದ 15 ಇಂಚಿಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಕುರಿತು ವರದಿಯಾಗಿದೆ. ಅಲ್ಲಲ್ಲಿ ಮರಬಿದ್ದಿರುವದು, ಬರೆ ಜರಿತ, ನೀರು ನಿಂತು ಸಂಪರ್ಕ ಕಡಿತಗೊಂಡಿರುವದು ಸಾಮಾನ್ಯವಾಗಿದೆ.
ಧಾರುಣ ಸನ್ನಿವೇಶ
ಪ್ರಮುಖ ನದಿ ಪಾತ್ರಗಳಲ್ಲಿ ಹಾಗೂ ಜಲಾನಯನ ಪ್ರದೇಶಗಳಲ್ಲಿ ನೀರು ಗರಿಷ್ಠ ಪ್ರಮಾಣದಲ್ಲಿ ಉಕ್ಕಿ ಹರಿಯುತ್ತಿದ್ದು, ಭತ್ತದ ಗದ್ದೆ, ಕಾಫಿ ತೋಟಗಳು ಜಲಾವೃತಗೊಂಡು ತಗ್ಗು ಪ್ರದೇಶ ಹಾಗೂ ಸಮತಟ್ಟು ಪ್ರದೇಶಗಳಲ್ಲಿ ಬರೀ ನೀರಿನ ಹರಿವು ಮಾತ್ರ ಕಂಡುಬರುತ್ತಿದ್ದು, ಬಹುತೇಕ ಜಿಲ್ಲೆ ಜಲಾವೃತಗೊಂಡಿದೆ. ರಸ್ತೆ ಸಂಪರ್ಕ ಕಡಿತ, ಕಿರು ಸೇತುವೆಗಳಲ್ಲಿ ನೀರು ನಿಂತಿರುವದು, ಬರೆ ಜರಿತ, ಮರಬಿದ್ದ ಪರಿಣಾಮದಿಂದಾಗಿ ಅತ್ತಿಂದಿತ್ತ ತಿರುಗಾಡಲು ಸಾಧ್ಯವಿಲ್ಲದೆ ಇರುವ ಜಾಗದಲ್ಲೇ ಚಡಪಡಿಸುವಂತಾಗಿದೆ.
ಮೊಬೈಲ್-ದೂರವಾಣಿ ಸಂಪರ್ಕಗಳು ಸ್ಥಗಿತಗೊಂಡಿರುವದರಿಂದ ಪರಸ್ಪರ ಸಂಪರ್ಕ ಸಾಧಿಸಲು, ತುರ್ತು ಸಂದರ್ಭದ ಮಾಹಿತಿ ನೀಡಲು ಅಥವಾ ಧಾವಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಕಳೆದ ಮೂರು-ನಾಲ್ಕು ದಿನಗಳಿಂದ ಎದುರಾಗಿರುವದು ಒಂದು ರೀತಿಯಲ್ಲಿ ಜನತೆ ಶಿಲಾಯುಗದ ಬದುಕನ್ನು ನೆನೆಸುವಂತಾಗಿದೆ ಎಂದು ಸಂಕಷ್ಟ ಎದುರಿಸುತ್ತಿರುವ ಹಲವರು ಅಳಲು ತೋಡಿಕೊಂಡಿದ್ದಾರೆ.
ನಾಲ್ಕು ದಿನಗಳಲ್ಲಿ 30 ಇಂಚು!
ಇಷ್ಟು ವರ್ಷಗಳಲ್ಲಿ ಸಾಧಾರಣವಾಗಿ ಮಳೆ ಕಡಿಮೆ ಇರುತ್ತಿದ್ದ ಪ್ರದೇಶಗಳಲ್ಲಿ ಕೂಡ ಈ ಬಾರಿ ಭಾರೀ ಮಳೆಯಾಗುತ್ತಿರುವದು ವಿಶೇಷವಾಗಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೇವಲ ಮೂರು-ನಾಲ್ಕು ದಿನಗಳಲ್ಲಿ 30 ರಿಂದ 40 ಇಂಚಿನಷ್ಟು ಮಳೆ ಸುರಿದಿದೆ. ಇದರಿಂದಾಗಿ ನೀರಿನ ಮಟ್ಟ ನಿರೀಕ್ಷೆಗಿಂತ ಹೆಚ್ಚಾಗುತ್ತಿರುವದು ಭಯದ ವಾತಾವರಣ ಸೃಷ್ಟಿಸಿದೆ.