ಶ್ರೀಮಂಗಲ, ಆ. 8: ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ 2 ದಿನದಿಂದ ತೀವ್ರಗೊಂಡಿರುವ ಹಿನ್ನೆಲೆ ದಕ್ಷಿಣ ಕೊಡಗಿನ ಬಹುತೇಕ ಕಡೆ ಜನ ಜೀವನ ಅಸ್ತವ್ಯಸ್ತ ಗೊಂಡಿದೆ.ಲಕ್ಷ್ಮಣತೀರ್ಥ ನದಿ ಪ್ರವಾಹ ದಿಂದ ನದಿ ಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಘಟ್ಟ ಪ್ರದೇಶದಲ್ಲಿ ಭೂಕುಸಿತ ಉಂಟಾಗುತ್ತಿದ್ದು, ಜನರು ತೀವ್ರ ಅತಂಕಗೊಂಡಿದ್ದು, ಹಲವರು ಸ್ವಯಂ ನಿರ್ಧಾರದಿಂದ ಸುರಕ್ಷಿತ ಜಾಗಗಳಿಗೆ ತೆರಳಿದ್ದಾರೆ.

ಶ್ರೀಮಂಗಲ ಮತ್ತು ಟಿ. ಶೆಟ್ಟಿಗೇರಿ ಪಟ್ಟಣದಲ್ಲಿ ಲಕ್ಷ್ಮಣ ತೀರ್ಥ ನದಿ ಪ್ರವಾಹ ಹಲವು ಮನೆಗೆ ನುಗ್ಗಿದ್ದು, ಶ್ರೀಮಂಗಲ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಪರಿಹಾರ ಕೇಂದ್ರ ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಟಿ. ಶೆಟ್ಟಿಗೇರಿ ಗ್ರಾಮದ 56 ಜನರಿಗೆ ಆಶ್ರಯ ನೀಡಲಾಗಿದೆ. ಕೇಂದ್ರದಲ್ಲಿ 1 ರಿಂದ 6 ವರ್ಷದ ಮಕ್ಕಳು 9, 6 ರಿಂದ 18 ವಯಸ್ಸಿನ ಮಕ್ಕಳು 9,ಅಲ್ಲದೇ ಮಹಿಳೆಯರು 18 ಮತ್ತು ಪುರುಷರು 20 ಜನರಿಗೆ ಆಶ್ರಯ ನೀಡಲಾಗಿದ್ದು, ಸುಮಾರು 17 ಕುಟುಂಬಗಳು ಇಲ್ಲಿನ ಆಶ್ರಯ ಕೇಂದ್ರದಲ್ಲಿ ನೆಲಸಿವೆ.

ಪ್ರವಾಹದಿಂದ ಶ್ರೀಮಂಗಲ-ಟಿ. ಶೆಟ್ಟಿಗೇರಿ, ಶ್ರೀಮಂಗಲ-ನಾಲ್ಕೇರಿ ರಸ್ತೆ ನಡುವೆ ನದಿ ನೀರು ಸುಮಾರು 3 ರಿಂದ 5 ಅಡಿ ಹರಿಯುತ್ತಿದ್ದು, ಈಗಾಗಲೇ ಕೇರಳ-ಕೊಡಗು ಅಂತಾರಾಜ್ಯ ಹೆದ್ದಾರಿ ಕಡಿತವಾಗಿದೆ.

ಪೊನ್ನಂಪೇಟೆ-ಕಾನೂರು-ಕುಟ್ಟ ಹೆದ್ದಾರಿ ಪ್ರವಾಹದಿಂದ ಕಾನೂರು ಬಳಿ ರಸ್ತೆ ಮುಳುಗಡೆಯಾಗಿದ್ದು, ಇದೀಗ ಶ್ರೀಮಂಗಲ ಮೂಲಕ ಹೆದ್ದಾರಿ ಸಹ ಮುಳುಗಡೆಯಾಗಿ ರುವದರಿಂದ ಮತ್ತು ಮಾಕುಟ್ಟ ಹೆದ್ದಾರಿ ಈಗಾಗಲೇ ಭೂಕುಸಿತದಿಂದ ಕಡಿತವಾಗಿದ್ದು,ದಕ್ಷಿಣ ಕೊಡಗಿನ ಮೂಲಕ ಎಲ್ಲ

(ಮೊದಲ ಪುಟದಿಂದ) ಕೇರಳ-ಕರ್ನಾಟಕ ಅಂತಾರಾಜ್ಯ ಹೆದ್ದಾರಿ ಕಡಿತವಾದಂತಾಗಿದೆ. ಶ್ರೀಮಂಗಲ ವ್ಯಾಪ್ತಿಯಲ್ಲಿ ಪ್ರವಾಹ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಇಲ್ಲಿನ ಪೆಟ್ರೋಲ್ ಬಂಕ್, ವ್ಯಾಪಾರ ಮಳಿಗೆ, ಮನೆಗಳು, ಗ್ಯಾರೇಜ್‍ಗಳಿಗೆ ನೀರು ನುಗ್ಗಿದೆ. ಕಳೆದ 24 ಗಂಟೆಗಳಲ್ಲಿ 14 ರಿಂದ 17 ಇಂಚು ಮಳೆಯಾಗಿರುವದೇ ಭೂಕುಸಿತಕ್ಕೆ ಕಾರಣವಾಗಿದೆ.

ಹುದಿಕೇರಿ-ಬಿರುನಾಣಿ ಸಂಪರ್ಕ ರಸ್ತೆಯ ಹೈಸೊಡ್ಲೂರು ಮತ್ತು ಪೊರಾಡ್ ಭಾಗದಲ್ಲಿ ಹಲವೆಡೆ ಭಾರೀ ಭೂಕುಸಿತ ಉಂಟಾಗಿದೆ. ಇದರಿಂದ ರಸ್ತೆ ಸಂಪರ್ಕ ಕಡಿತವಾಗಿದೆ.

ಈ ವ್ಯಾಪ್ತಿಯಲ್ಲಿ ಗ್ರಾಮೀಣ ರಸ್ತೆ ಭೂಕುಸಿತದಿಂದ ತೀವ್ರ ಹಾನಿಯಾಗಿದೆ. ಬಿರುನಾಣಿಯ ಕರ್ತಮಾಡ ಸುಜಯ್ ಅವರಿಗೆ ಸೇರಿದ 4 ಎಕರೆ ಕಾಫಿ ತೋಟ ಭೂಕುಸಿತವಾಗಿದೆ. ಮನೆಗಳ ಬದಿಯಲ್ಲಿ ತೋಟ ಗದ್ದೆಗಳಿಗೆ ಮಣ್ಣು ಕುಸಿತದಿಂದ ಅಪಾರ ಹಾನಿಯಾಗಿದೆ.

ಹುದಿಕೇರಿ ಗ್ರಾಮದಲ್ಲಿ ತೋಡಿನ ನೀರು ಗದ್ದೆಗೆ ನುಗ್ಗಿ,ನಾಟಿ ಮಾಡಿದ ಗದ್ದೆ ಹಾನಿಯಾಗಿದೆ .ಬಿರುನಾಣಿ, ಶ್ರೀಮಂಗಲ, ಟಿ. ಶೆಟ್ಟಿಗೇರಿ, ಹುದಿಕೇರಿ, ಬಿ.ಶೆಟ್ಟಿಗೇರಿ, ಬಲ್ಯಮುಂಡೂರು, ನಾಲ್ಕೇರಿ, ಕುಟ್ಟ, ಕೆ. ಬಾಡಗ, ಕಾನೂರು, ನಿಟ್ಟೂರು, ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ರಸ್ತೆಗಳಲ್ಲಿ ಅಸಂಖ್ಯಾತ ಮರಗಳು ರಸ್ತೆ ಮೇಲೆ ಬಿದ್ದಿವೆÉ. ಇಲ್ಲಿನ ಗ್ರಾಮೀಣ ರಸ್ತೆಗಳಲ್ಲಿ ಭೂಕುಸಿತ ಅಲ್ಲಲ್ಲಿ ಉಂಟಾಗಿದೆ.

ಬಿರುನಾಣಿ ವ್ಯಾಪ್ತಿಯ ನ್‍ಟ್‍ಕುಂದ್ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ತೂಗುಸೇತುವೆ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು,ಇಲ್ಲಿಗೆ ಸಂಪರ್ಕಿಸುವ ಸೇತುವೆ ಸಹ ಮುಳುಗಿದ್ದು,ಜನರು ದ್ವೀಪದಂತೆ ಆಗಿ, ಹೊರ ಜಗತ್ತಿನ ಸಂಪರ್ಕ ಕಳೆದು ಕೊಂಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಕಂಟ್ರೋಲ್ ರೂಂಗೆ ಕರೆ ಮಾಡಿ ಸಹಾಯಕ್ಕಾಗಿ ಮೊರೆ ಇಟ್ಟಿದ್ದಾರೆ.

ವಿದ್ಯುತ್ ಕಡಿತ, ದೂರವಾಣಿ ಸ್ಥಗಿತ

ಧಾರಾಕಾರ ಮಳೆ,ಬಿ ರುಗಾಳಿ, ಸಿಡಿಲು-ಮಿಂಚಿನಿಂದ ದಕ್ಷಿಣ ಕೊಡಗಿನ ಜನ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 4 ದಿನದಿಂದ ದಕ್ಷಿಣ ಕೊಡಗಿನ ಘಟ್ಟ ಪ್ರದೇಶ, ಗ್ರಾಮೀಣ ಪ್ರದೇಶ ಸೇರಿದಂತೆ ಪ್ರಮುಖ ಪಟ್ಟಣಗಳು ವಿದ್ಯುತ್ ಕಡಿತದಿಂದ ಜನಜೀವನ ಸಹಜ ಸ್ಥಿತಿ ಇಲ್ಲದೆ ನಲುಗಿದೆ.

ಗಾಳಿ ಮಳೆಗೆ ವಿದ್ಯುತ್ ಮಾರ್ಗದಲ್ಲಿ ಮರ ಬಿದ್ದು, ವಿದ್ಯುತ್ ಕಂಬ ಮುರಿದು ಹಾನಿಯಾಗಿದ್ದು, ವಿದ್ಯುತ್ ಸರಿಪಡಿಸಲು ಮಳೆ ಬಿಡುವು ನೀಡಿದರೆ ಮಾತ್ರ ಸಾಧ್ಯವಾಗಲಿದೆ. ವಿದ್ಯುತ್ ಕಡಿತದಿಂದ ಬಿ.ಎಸ್.ಎನ್. ಎಲ್. ದೂರವಾಣಿ ಸಂಪರ್ಕ ಕಡಿತವಾಗಿದೆ.ಏರ್ಟೆಲ್ ಸಂಸ್ಥೆ ತನ್ನ ಸೇವೆ ನೀಡುತ್ತಿದ್ದು, ಶ್ರೀಮಂಗಲ ಬಿ.ಎಸ್.ಎನ್. ಎಲ್. ಜನರೇಟರ್ ದುರಸ್ತಿಯಿಂದ ಸೇವೆ ಸ್ಥಗಿತವಾಗಿದೆ.

ವಿದ್ಯುತ್ ಇಲ್ಲದೇ, ಮೊಬೈಲ್ ಚಾರ್ಜ್ ಇಲ್ಲದೇ ತಮ್ಮ ಜನರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್, ಎಟಿಎಂ, ಅಂಗಡಿಗಳು ಬಹುತೇಕ ಮುಚ್ಚಲ್ಪಟ್ಟಿವೆ.

ವಿದ್ಯುತ್ ಇಲ್ಲದೇ ದೂರದರ್ಶನ,ದೂರವಾಣಿ ಮೂಲಕ ಮಾಹಿತಿ ಇಲ್ಲದಾಗಿದ್ದು, ರಸ್ತೆಗಳು ಭೂಕುಸಿತ ಮತ್ತು ಪ್ರವಾಹಕ್ಕೆ ಸಿಲುಕಿ ಮುಳುಗಡೆಯಿಂದ ಸಂಪರ್ಕ ಕಡಿತವಾಗಿರುವದರಿಂದ ಬಹುತೇಕ ಕಡೆ ತಮ್ಮ ವಾಹನಗಳು ಮನೆಯಿಂದ ಹೊರತರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿರಾಶ್ರಿತರು ಹಲವಾರು ತಮ್ಮ ನಾಯಿಗಳನ್ನು ಕಾಪಾಡಲು ತಮ್ಮೊಂದಿಗೆ ತಂದು ಸುರಕ್ಷಿತ ಜಾಗಕ್ಕೆ ಬಿಟ್ಟರು.ಮನೆಯಲ್ಲಿ ಬೆಲೆಬಾಳುವ ಸಾಮಗ್ರಿಗಳನ್ನು ಬಿಟ್ಟು,ಜೀವ ರಕ್ಷಣೆಗಾಗಿ ಮನೆ ತೊರೆದು, ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಶ್ರೀಮಂಗಲ ತಗ್ಗು ಪ್ರದೇಶಕ್ಕೆ ಪ್ರವಾಹದ ನೀರು ನುಗ್ಗಿದ್ದು,ಇಲ್ಲಿ ಇರುವ ಮನೆಗಳಲ್ಲಿ ಶೌಚಾಲಯ ಗುಂಡಿಗಳಲ್ಲಿ ನೀರು ತುಂಬಿದ್ದು, ತೊಂದರೆಯಾಗಿದೆ.ಶ್ರೀಮಂಗಲದಲ್ಲಿ ನಿರಾಶ್ರಿತ ಕೇಂದ್ರದಲ್ಲಿ 56 ನಿರಾಶ್ರಿತರು ಆಶ್ರಯ ಪಡೆದಿದ್ದು, ಇಲ್ಲಿ ಒಂದು ಶೌಚಾಲಯ ಮಾತ್ರವಿದೆ. ವಿದ್ಯುತ್ ಕಡಿತದಿಂದ ನಿರಾಶ್ರಿತ ಕೇಂದ್ರ ಕತ್ತಲೆಯಲ್ಲಿದೆ.

ಶ್ರೀಮಂಗಲ-ಟಿ. ಶೆಟ್ಟಿಗೇರಿ, ಶ್ರೀಮಂಗಲ-ನಾಲ್ಕೇರಿ ನಡುವೆ ರಸ್ತೆ ಮುಳುಗಡೆ ಹಿನ್ನಲೆ ಟಿ. ಶೆಟ್ಟಿಗೇರಿ ಗ್ರಾ.ಪಂ.ಅದ್ಯಕ್ಷ ಮಚ್ಚಮಾಡ ಸುಮಂತ್ ಅವರು ರ್ಯಾಫ್ಟಿಂಗ್ ವ್ಯವಸ್ಥೆ ಕಲ್ಪಿಸಿದ್ದಾರೆ. - ಹರೀಶ್ ಮಾದಪ್ಪ