ಗೋಣಿಕೊಪ್ಪಲು, ಆ. 8: ದ.ಕೊಡಗಿನ ಪ್ರಮುಖ ರಸ್ತೆಗಳಾದ ಗೋಣಿಕೊಪ್ಪ - ಪೊನ್ನಂಪೇಟೆ, ಗೋಣಿಕೊಪ್ಪಲು - ಪಾಲಿಬೆಟ್ಟ ಸಂಪೂರ್ಣ ಕಡಿತಗೊಂಡಿದೆ.
ರಾತ್ರಿ ಸುರಿದ ಭಾರೀ ಮಳೆಯಿಂದ ಗೋಣಿಕೊಪ್ಪಲುವಿನ ಬೈಪಾಸ್ ರಸ್ತೆಯ ತೋಡಿನ ನೀರು ರಸ್ತೆಯಲ್ಲಿ ನುಗ್ಗಿದ ಪರಿಣಾಮ ಪೊನ್ನಂಪೇಟೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲೆ ನೀರು ತುಂಬಿ ರಸ್ತೆ ಸಂಚಾರ ಕಡಿತಗೊಂಡಿದೆ.
ವೆಂಕಟಪ್ಪ ಬಡಾವಣೆಯಲ್ಲಿ ಹರಿಯುವ ತೋಡಿನಲ್ಲಿ ಬೆಳೆದು ನಿಂತಿದ್ದ ಹೂಳನ್ನು ಪಂಚಾಯಿತಿ ತೆರವುಗೊಳಿಸಿದ್ದಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲವೆಂದು ನೀರು ತುಂಬಿದ ಮನೆಯವರು ಅಳಲು ತೋಡಿಕೊಂಡರು.
ಪಂಚಾಯಿತಿ ಕೀರೆಹೊಳೆ ಹಾಗೂ ಬೈಪಾಸ್ ರಸ್ತೆಯ ಬೃಹತ್ ತೋಡನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡದೆ ನಿರ್ಲಕ್ಷ್ಯ ತೋರಿದ್ದು, ಕೀರೆ ಹೊಳೆ ಹರಿಯುವ ಬದಿಯಲ್ಲಿರುವ ಬಹುತೇಕ ಮನೆಗಳಿಗೆ ನೀರು ನುಗ್ಗಿದೆ. ಈ ಕೀರೆಹೊಳೆಯ ನೀರು ಪಾಲಿಬೆಟ್ಟ ರಸ್ತೆಯಲ್ಲಿ ನುಗ್ಗಿದ ಪರಿಣಾಮವಾಗಿ ಗೋಣಿಕೊಪ್ಪಲು, ಪಾಲಿಬೆಟ್ಟ ರಸ್ತೆ ಮಾರ್ಗ ಕಡಿತಗೊಂಡಿದೆ. ಐದನೇ ವಿಭಾಗದ ಪಟೇಲನಗರ, ಆರನೆ ವಾರ್ಡ್ನ ಕಾವೇರಿ ಹಿಲ್ಸ್ ಬಡಾವಣೆ, ಮೂರನೆ ವಾರ್ಡ್ನ ಹೊಳೆ ಬದಿಯ ಮನೆಗಳಿಗೆ ನೀರು ನುಗ್ಗಿದೆ.
ನಗರದಲ್ಲಿ ವಿದ್ಯುತ್ ಪೂರೈಕೆ ಇಲ್ಲದ ಕಾರಣ ಹಲವಾರು ಹೊಟೇಲ್, ಬೇಕರಿ,ಅಂಗಡಿ ಮುಂಗಟ್ಟುಗಳು ಬಂದ್ ಅಗಿವೆ.
ಪೊನ್ನಂಪೇಟೆ ರಸ್ತೆಯ ಫುಡ್ ಬ್ಯಾಂಕ್ ಸೂಪರ್ ಮಾರ್ಕೆಟ್ಗೆ ನೀರು ತುಂಬಿದ್ದು ಆಹಾರ ಪದಾರ್ಥಗಳಿಗೆ ಹಾನಿಯಾಗಿವೆ. ನಗರದಲ್ಲಿ ಎಟಿಎಂ ಕೇಂದ್ರಗಳು ವಿದ್ಯುತ್ ಇಲ್ಲದೆ ಸ್ತಬ್ಧಗೊಂಡಿವೆ.
ಕೀರೆಹೊಳೆಯ ನೀರು, ಬೈಪಾಸ್ ತೋಡಿನ ನೀರು ಒಂದೆ ಸಮನೆ ಹರಿದು ಬಂದ ಕಾರಣ ತೋಡಿನಲ್ಲಿದ್ದ ಕಸದ ರಾಶಿಗಳು ಸೇತುವೆಯ ಕೆಳ ಬಾಗದಲ್ಲಿ ಸಿಲುಕಿಕೊಂಡು ರಸ್ತೆಯ ಮೂಲಕ ಹರಿಯಲಾರಂಭಿಸಿದೆ. ಸ್ಥಳೀಯ ಯುವಕರಾದ ಶರತ್ ಕಾಂತ್, ಮಂಜು, ರಫಿಕ್, ಆಶ್ರಪ್, ಇಲಾಖೆಯ ನೌಕರ ನಾಗರಾಜ್, ಸುನಿಲ್, ಸೇರಿದಂತೆ ಹಲವು ಯುವಕರು ತೋಡಿನಲ್ಲಿ ಹರಿದು ಬರುತ್ತಿದ್ದ ಕಸದ ರಾಶಿಯನ್ನು ತೆಗೆಯುವ ಮೂಲಕ ನೀರು ಸರಾಗವಾಗಿ ಹರಿಯುವ ಪ್ರಯತ್ನ ನಡೆಸಿದರು. ಆದರೆ ನದಿಯ ನೀರು ಹಿಮ್ಮುಖವಾಗಿ ಹರಿಯುತ್ತಿರುವದರಿಂದ ಕಸದ ರಾಶಿ ಅಲ್ಲೆ ನಿಂತಿದೆ. ಮಾಕುಟ್ಟ ರಸ್ತೆ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಗೋಣಿಕೊಪ್ಪಲು ಮಾರ್ಗವಾಗಿ ಕೇರಳಕ್ಕೆ ಹೋಗುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದೀಗ ಈ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಕುಟ್ಟ ಮಾರ್ಗದಿಂದ ವಾಹನಗಳು ಕಾನೂರು ಮಾರ್ಗದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಮೂಲಕ ಮೈಸೂರು ಸೇರುವಂತಾಗಿದೆ. - ಹೆಚ್.ಕೆ.ಜಗದೀಶ್.