ಚಿತ್ರ ವರದಿ: ಎ.ಎನ್ ವಾಸು
ಸಿದ್ದಾಪುರ: ಕಾವೇರಿ ನದಿಯ ಪ್ರವಾಹಕ್ಕೆ ಸಿಲುಕಿ ಸಿದ್ದಾಪುರದ ಕರಡಿಗೋಡು ನದಿ ದಡದಲ್ಲಿನ 200ಕ್ಕೂ ಅಧಿಕ ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಕರಡಿಗೋಡು, ಗುಹ್ಯ ಸೇರಿದಂತೆ 25 ಮನೆಗಳು ಜಲಾವೃತಗೊಂಡಿದ್ದು, ನದಿದಡದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಕಳೆದ ªರ್ಷದ ಮಹಾಮಳೆಗೆ ತತ್ತರಿಸಿ ಹೋಗಿದ್ದ ಕರಡಿಗೋಡು ಇದೀಗ ಮತ್ತೊಮ್ಮೆ ಪ್ರವಾಹದಿಂದಾಗಿ ನೂರಾರು ಕುಟುಂಬಗಳು ಸ್ಥಳೀಯ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಕರಡಿಗೋಡುವಿನಲ್ಲಿ ಕಾವೇರಿ ನದಿಯ ಪ್ರವಾಹಕ್ಕೆ ಏಕಾಏಕಿ ಬುಧವಾರ ರಾತ್ರಿಯಂದು ಮನೆಗೆ ನೀರು ನುಗ್ಗಿದ್ದು, ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿಕೊಂಡರು. ಇದೇ ಸಂದರ್ಭದಲ್ಲಿ 20 ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಡೆಗೊಂಡಿವೆ. ಪ್ರವಾಹ ನೀರಿನ ಹೊಡೆತಕ್ಕೆ ಕೆಲವು ಮನೆಗಳು ಕುಸಿತಗೊಳ್ಳುವ ಹಂತ ತಲಪಿದೆ.
ಕರಡಿಗೋಡುವಿನಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾದಂತೆ ನದಿದಡದ ಮನೆಗಳು ಜಲಾವೃತಗೊಂಡಿವೆ. ಈ ಹಿನ್ನೆಲೆಯಲ್ಲಿ ಭಯ ಭೀತರಾದ ನಿವಾಸಿಗಳು ತಮ್ಮ ಮನೆಯ ಸಾಮಗ್ರಿಗಳನ್ನು ತೆಗೆದುಕೊಂಡು ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪರಿಹಾರ ಕೇಂದ್ರಕ್ಕೆ ಧಾವಿಸಿ ಬಂದರು. ಕರಡಿಗೋಡಿನ ನದಿ ದಡದ 118 ಕುಟುಂಬಗಳು ಚಿಕ್ಕನಹಳ್ಳಿ ಪೈಸಾರಿಯ ಹಾಗೂ ಹೊಸಗದ್ದೆ ನಿವಾಸಿಗಳು ಸೇರಿದಂತೆ 200ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳೀಯ ಪರಿಹಾರ ಕೇಂದ್ರವಾಗಿರುವ ಸರಕಾರಿ ಶಾಲೆ ಹಾಗೂ ಸ್ಥಳೀಯ ಬಸವೇಶ್ವರ ದೇವಾಲಯದ ಸಭಾಂಗಣದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ನಾಗೇಶ್‍ರಾವ್ ಹಾಗೂ ಗ್ರಾಮ ಲೆಕ್ಕಿಗ ಓಮಪ್ಪ ಬಣಕಾರ್ ಸ್ಥಳದಲ್ಲಿ ನಿರಾಶ್ರಿತರಿಗೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು. ಅಲ್ಲದೇ ನದಿದಡದ ನಿವಾಸಿಗಳ ಮನವೊಲಿಸಿ ಪರಿಹಾರ ಕೇಂದ್ರಕ್ಕೆ ಕರೆತರಲು ಕಂದಾಯ ಇಲಾಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಪ್ರವಾಹದಿಂದಾಗಿ ಕರಡಿಗೋಡು ವ್ಯಾಪ್ತಿಯಲ್ಲಿ ಹಲವಾರು ಕಾಫಿತೋಟಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ನಾಟಿ ಮಾಡಲಾಗಿದ್ದ ಗದ್ದೆಗಳು ಕೂಡ ಜಲಾವೃತಗೊಂಡು ನಾಟಿ ನಾಶವಾಗಿದೆ. ಪ್ರವಾಹದ ನೀರು ಏರಿಕೆಯಾಗುತ್ತಿದ್ದಂತೆ ಮತ್ತಷ್ಟು ನದಿದಡದ ಮನೆಗಳು ಮುಳುಗುವ ಭೀತಿ ಎದುರಾಗಿದೆ. ನದಿ ದಡದಲ್ಲಿ ಪ್ರವಾಹಕ್ಕೆ ಸಿಲುಕಿದ ಕರಡಿಗೋಡುವಿನ ನಿವಾಸಿಗಳನ್ನು ದೋಣಿಗಳ ಮೂಲಕ ಸುರಕ್ಷಿತ ಸ್ಥಳಕ್ಕೆ ಕರೆತರಲಾಯಿತು. ಕರಡಿಗೋಡುವಿನ ಪ್ರವಾಹಕ್ಕೆ ಸಿಲುಕಿ ಮನೆಗಳ ಹಿಂಬದಿಯು ಕುಸಿಯುತ್ತಿದ್ದು, ಮನೆಗಳಲ್ಲಿ ಬಿರುಕು ಕಾಣಿಸಿದ್ದು, ಆತಂಕ ಸೃಷ್ಟಿಸಿದೆ. ಅಲ್ಲದೇ ಮನೆಗಳು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ಸಿದ್ದಾಪುರ, ಕರಡಿಗೋಡು, ಗುಹ್ಯ, ಕೂಡುಗದ್ದೆ, ಕಕ್ಕಟ್ಟುಕಾಡು ವ್ಯಾಪ್ತಿಯಲ್ಲಿ ಪ್ರವಾಹದ ನೀರು ರಸ್ತೆಯನ್ನು ಆವರಿಸಿಕೊಂಡಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದ್ದಾರೆ. ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡಿದ್ದು, ಈ ಭಾಗದ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದಾಗಿ ನದಿ ದಡವು ಅಕ್ಷರಶಃ ದ್ವೀಪದಂತಾಗಿದ್ದೂ, ಎತ್ತನೋಡಿದರೂ ಕಾವೇರಿ ನದಿ ಮೇದುಂಬಿ ಹರಿಯುವದೇ ಕಾಣುತ್ತಿದೆ. ಗ್ರಾಮದಲ್ಲಿ ಭಯದ ವಾತಾವರಣ ಮೂಡಿದ್ದು, ಅದೃಷ್ಟವಶಾತ್ ನಿವಾಸಿಗಳು ರಾತ್ರಿ ಎಚ್ಚರ ವಹಿಸಿದ ಕಾರಣ ಯಾವದೇ ಅನಾಹುತ ಸಂಭವಿಸಿಲ್ಲ.
ಮಳೆಯ ನೀರು ಮನೆಗೆ ನುಗ್ಗಿದ ಪರಿಣಾಮ ಪಾಲಿಬೆಟ್ಟ ರಸ್ತೆಯ ಸುಂದರ ಎಂಬವರ ಮನೆ ಭಾಗಶಃ ಕುಸಿದಿದೆ. ಗುಹ್ಯ ಗ್ರಾಮದ ಕಕ್ಕಟ್ಟುಕಾಡು, ಕೂಡುಗದ್ದೆ ವ್ಯಾಪ್ತಿಯಲ್ಲಿ ಸುಮಾರು 20 ಮನೆಗಳು ಜಲಾವೃತಗೊಂಡಿದ್ದು, ಅಪಾಯದಲ್ಲಿರುವ ಕುಟುಂಬವನ್ನು ಕರಡಿಗೋಡುವಿನ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ.
ನೆಲ್ಯಹುದಿಕೇರಿ: ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಬೆಟ್ಟದಕಾಡು ವ್ಯಾಪ್ತಿಯಲ್ಲಿ 25 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಅಪಾಯದಲ್ಲಿರುವ ಕುಟುಂಬಗಳಿಗೆ ಸ್ಥಳೀಯ ಅಂಗನವಾಡಿ ಕೇಂದ್ರದಲ್ಲಿ ಪರಿಹಾರ ಕೇಂದ್ರವನ್ನು ಆರಂಭಿಸಲಾಗಿದ್ದು, ನಿರಾಶ್ರಿತರಿಗೆ ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಕುಶಾಲನಗರ ಹೋಬಳಿ ಕಂದಾಯ ಪರಿವೀಕ್ಷಕ ಮಧುಸೂದನ್ ಹಾಗೂ ಗ್ರಾಮ ಲೆಕ್ಕಿಗ ಸಂತೋಷ್ ತಿಳಿಸಿದರು.
ನೆಲ್ಯಹುದಿಕೇರಿಯ ಬರಡಿ ಗ್ರಾಮದ ಕುಂಬಾರಗುಂಡಿಯಲ್ಲಿ ಕೆಲವು ಮನೆಗಳು ಜಲಾವೃತಗೊಂಡಿದ್ದು, ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಮಾರ್ಗದರ್ಶನದಲ್ಲಿ ಕಂದಾಯ ಇಲಾಕಾಧಿಕಾರಿಗಳು ಸ್ಥಳದಲ್ಲಿ ಮೋಖಂ ಹೂಡಿದ್ದಾರೆ. ಗ್ರಾಮದ ಪ್ರವಾಹ ಪೀಡಿದ ಪ್ರದೇಶಕ್ಕೆ ಶಾಸಕ ಅಪ್ಪಚ್ಚು ರಂಜನ್, ಉಪವಿಭಾಗಾಧಿಕಾರಿ ಜವರೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೊಂಡಂಗೇರಿ ವ್ಯಾಪ್ತಿಯಲ್ಲಿಯೂ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳದಲ್ಲಿ ಕಂದಾಯ ಇಲಾಖಾಧಿಕಾರಿಗಳು ಬೀಡುಬಿಟ್ಟಿದ್ದಾರೆ.
ಧಾರಾಕಾರ ಮಳೆಯಿಂದಾಗಿ ಹಲವು ಖಾಸಗಿ ಬಸ್‍ಗಳು ಸಂಚರಿಸದ ಕಾರಣ ಪ್ರಯಾಣಿಕರು ಪರದಾಡುವಂತಾಯಿತು. ಅಮ್ಮತ್ತಿ, ಚೆಟ್ಟಳ್ಳಿ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿದ್ದು, ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ನಂಜರಾಯಪಟ್ಟಣ ಪೈಸಾರಿಯ ನಿವಾಸಿ ನಥಾಲಿಯ ಎಂಬ ಮಹಿಳೆಯ ಮನೆಯು ಮಳೆಗೆ ಸಿಲುಕಿ ಕುಸಿದು ಬಿದ್ದಿದ್ದು, ಈ ಸಂದರ್ಭ ಅವರ ಪುತ್ರಿಯ ಕಾಲಿಗೆ ನೋವುಂಟಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರ ಸುತ್ತಮುತ್ತ ಗುಡುಗು ಸಹಿತ ಗಾಳಿಯೊಂದಿಗೆ ಭಾರೀ ಮಳೆಯಾಗುತ್ತಿದೆ.