ಮಡಿಕೇರಿ, ಆ. 8: ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಮಳೆಯಿಂದಾಗಿ ಸರಕಾರಿ ಸೌಮ್ಯದ ಬಿ.ಎಸ್.ಎನ್.ಎಲ್. ಸೇರಿದಂತೆ ಇನ್ನಿತರ ಖಾಸಗಿ ಸಂಸ್ಥೆಗಳ ಮೊಬೈಲ್ ಟವರ್‍ಗಳು ಕಾರ್ಯಾಚರಿಸದೆ ಜಿಲ್ಲೆಯ ಜನತೆ ಪರದಾಡುವಂತಾಗಿದೆ. ಹಲವಾರು ಕಾರಣಗಳಿಂದ ಸ್ಥಿರ ದೂರವಾಣಿ ಸೇರಿದಂತೆ ಮೊಬೈಲ್ ಸೇವೆ ಜಿಲ್ಲೆಯಲ್ಲಿ ಇದ್ದೂ ಇಲ್ಲದಂತಾಗಿರುವ ಬಗ್ಗೆ ಜನತೆ ಆಕ್ರೋಶಿತರಾಗುತ್ತಿದ್ದಾರೆ. ಅದರಲ್ಲೂ ಬಿಎಸ್‍ಎನ್‍ಎಲ್ ಅವಲಂಬಿತ ಗ್ರಾಹಕರು, ಗ್ರಾಮೀಣ ಪ್ರದೇಶಗಳ ಜನರು ಹೆಚ್ಚು ಸಮಸ್ಯೆ ಅನುಭವಿಸುತ್ತಿದ್ದಾರೆ.

ವಿದ್ಯುತ್ ಸ್ಥಗಿತಗೊಂಡರೆ ಜನರೇಟರ್‍ಗೆ ಕನಿಷ್ಟ ಡೀಸಲ್ ವ್ಯವಸ್ಥೆಯೂ ಅಲಭ್ಯವಾಗುತ್ತಿರುವದರಿಂದ ಎಲ್ಲಾ ಟವರ್‍ಗಳು ನಿಷ್ಕ್ರಿಯಗೊಳ್ಳುತ್ತಿವೆ. ಜಿಲ್ಲೆಯ ಹಲವೆಡೆಗಳಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆಗಳ ದೂರವಾಣಿಗಳು ಕೂಡ ಸ್ತಬ್ಧಗೊಂಡಿವೆ. ಈ ಪರಿಸ್ಥಿತಿಯಿಂದಾಗಿ ತುರ್ತು ಅಗತ್ಯತೆಗಾಗಿ ಜನರು ಬಸವಳಿದಿದ್ದಾರೆ.

ಸಾವು ಮತ್ತಿತರ ತುರ್ತು ವಿಚಾರದ ಮಾಹಿತಿಗಳನ್ನು ನೀಡಲು ಪರಿತಪ್ಪಿಸುತ್ತಿದ್ದಾರೆ. ‘ಶಕ್ತಿ’ಗೆ ಮೂಲವೊಂದರಿಂದ ತಿಳಿದು ಬಂದಂತೆ ಬಿಎಸ್‍ಎನ್‍ಎಲ್‍ಗೆ ಸೇರಿದ 270 ಟವರ್‍ಗಳ ಪೈಕಿ 170 ಟವರ್‍ಗಳು ಮಾತ್ರ ಸ್ವಲ್ಪಮಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ನೂರು ಟವರ್‍ಗಳು ಸ್ಥಗಿತಗೊಂಡು ಸೇವೆ ಇಲ್ಲದಂತಾಗಿದೆ.