ಕೂಡಿಗೆ, ಆ. 8 : ಹಾರಂಗಿ ಅಣೆಕಟ್ಟೆ ಭರ್ತಿಯಾಗಿ, ನೀರನ್ನು ನದಿಗೆ ನಾಲ್ಕು ಕ್ರಸ್ಟ್ ಗೇಟ್‍ಗಳ ಮೂಲಕ ಹರಿಬಿಡಲಾಗಿದ್ದು, ಈಗಾಗಲೇ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವದರಿಂದ ನೀರಿನ ಪ್ರಮಾಣವು ಹೆಚ್ಚಾಗಿದೆ.

ಮಾಹಿತಿ ತಿಳಿದ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಅವರು ಹಾರಂಗಿ ಅಣೆಕಟ್ಟೆಗೆ ಭೇಟಿ ನೀಡಿ ನೀರಿನ ಸಂಗ್ರಹದ ಬಗ್ಗೆ ಮಾಹಿತಿ ಪಡೆದರು.

ನಂತರ ಹಾರಂಗಿ ಮತ್ತು ಕಾವೇರಿ ನದಿ ನೀರಿನ ಹೆಚ್ಚಳದಿಂದಾಗಿ ಕೂಡಿಗೆಯಲ್ಲಿ ಜಲಾವೃತಗೊಂಡಿರುವ ಪ್ರದೇಶಕ್ಕೆ ಅವರು ಭೇಟಿ ನೀಡಿ ಪರಿಶೀಲಿಸಿ, ಜನರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಥಳಕ್ಕೆ ತೆರಳಿದ ಸಂದರ್ಭ ಸ್ಥಳಾಂತರಗೊಳ್ಳುತ್ತಿದ್ದ ಕೂಡಿಗೆ ನಿವಾಸಿಗಳು ಕಳೆದ ಸಾಲಿನಲ್ಲಿ 80 ಕ್ಕೂ ಹೆಚ್ಚು ಮನೆಗಳು ಮುಳುಗಡೆಗೊಂಡು ನಿರಾಶ್ರಿತ ರಾಗಿದ್ದವರಿಗೆ ಕಳೆದ ಬಾರಿಯ ಪರಿಹಾರವನ್ನು ಒದಗಿಸದ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡರು.

ಈ ಸಂದರ್ಭ ಅವರೊಂದಿಗೆ ಸುನೀಲ್ ಸುಬ್ರಮಣಿ ಅವರು ಮಾತನಾಡಿ, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು ಅತೀ ಶೀಘ್ರವಾಗಿ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದರು.

ನಂತರ ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುವೆಂಪು ಬಡಾವಣೆ ಮತ್ತು ತಮ್ಮಣ್ಣಶೆಟ್ಟಿ ಬಡಾವಣೆಗಳಿಗೆ ಭೇಟಿ ನೀಡಿ ಕಾವೇರಿ ನದಿ ನೀರಿಂದ ಆವೃತವಾಗಿರುವ ಮನೆಗಳನ್ನು ವೀಕ್ಷಿಸಿ, ತಕ್ಷಣವೇ ಮನೆಗಳಿಂದ ಸ್ಥಳಾಂತರ ಗೊಳ್ಳಬೇಕೆಂದು ತಿಳಿಸಿದರು.

ಕಳೆದ ಸಾಲಿನಲ್ಲಿ 25ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಇದೀಗ 10 ಮನೆಗಳು ಈಗಾಗಲೇ ಜಲಾವೃತ್ತಗೊಂಡಿದ್ದು, ಇವರಿಗೆ ಸೂಕ್ತ ವ್ಯವಸ್ಥೆಗಳನ್ನು ಒದಗಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮತ್ತು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್, ಕೂಡಿಗೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಗಿರೀಶ್, ಮುಳ್ಳುಸೋಗೆ ಗ್ರಾ.ಪಂ ಅಧ್ಯಕ್ಷೆ ಭವ್ಯ, ಸದಸ್ಯರಾದ ಕೆ.ವೈ.ರವಿ, ರಾಮಚಂದ್ರ, ಹರೀಶ್, ಯುವ ಮೋರ್ಚದ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಇದ್ದರು.

- ನಾಗರಾಜಶೆಟ್ಟಿ ಕೆ.ಕೆ.