ಮಡಿಕೇರಿ, ಆ. 8: ಕೊಡಗು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ-ಗಾಳಿಯಿಂದಾಗಿ ಸತತ ಎರಡನೆಯ ವರ್ಷವೂ ಜಿಲ್ಲೆ ತೀರಾ ಪ್ರಾಕೃತಿಕ ವಿಕೋಪದ ಸನ್ನಿವೇಶ ಕಾಣುತ್ತಿದ್ದು, ಜಿಲ್ಲೆ ಸ್ತಬ್ಧಗೊಂಡಂತಾ ಗಿದೆ. 2018ರಲ್ಲಿಯೂ ಭಾರೀ ಮಳೆಯೊಂದಿಗೆ ಉತ್ತರ ಕೊಡಗಿನ ಭಾಗಗಳಲ್ಲಿ ಸಂಭವಿಸಿದ ಹಾನಿ-ದುರಂತವನ್ನು ಜನತೆ ಮರೆಯುವ ಮುನ್ನವೇ ಇದೀಗ ಈ ಬಾರಿಯ ಮಳೆಯ ಅಬ್ಬರವೂ ಆತಂಕ ಸೃಷ್ಟಿಸಿದೆ. ಕಳೆದ ವರ್ಷ ಉತ್ತರ ಕೊಡಗಿನಲ್ಲಿ ಉಂಟಾದ ಹಾನಿ ದಕ್ಷಿಣ ಕೊಡಗಿನಲ್ಲಿ ಸಂಭವಿಸಿರಲಿಲ್ಲ ವಾದರೂ ಈ ಬಾರಿ ದಕ್ಷಿಣ ಕೊಡಗು ನಲುಗುತ್ತಿದೆ. ಎಲ್ಲೆಲ್ಲೂ ಧಾರಾಕಾರ ಮಳೆಯಿಂದಾಗಿ ವೀರಾಜಪೇಟೆ ತಾಲೂಕು ಜರ್ಜರಿತ ಗೊಂಡಿದೆ. ಮಾಕುಟ್ಟ ರಸ್ತೆ, ಗೋಣಿಕೊಪ್ಪ-ಕುಟ್ಟ ರಸ್ತೆ ಸಂಪರ್ಕವೂ ಕಡಿತಗೊಂಡು ಅಂತರ್ರಾಜ್ಯ ಸಂಪರ್ಕಕ್ಕೆ ಧಕ್ಕೆಯಾಗಿದೆ. ಮಾತ್ರವಲ್ಲದೆ ತಾಲೂಕಿನ ಹಲವಾರು ಭಾಗಗಳಲ್ಲಿ ಜಲಾವೃತಗೊಂಡಿದ್ದು, ಬಿರುಸಿನ ಚಟುವಟಿಕೆಗಳ ಕೇಂದ್ರವಾಗಿದ್ದ ಪ್ರದೇಶ ನಿಶ್ಯಬ್ಧವಾದಂತಿದೆ. ಜಿಲ್ಲೆಯ ಶಾಲಾ-ಕಾಲೇಜುಗಳೂ ತಾ. 6 ರಿಂದ ಮುಚ್ಚಲ್ಪಟ್ಟಿದೆ.