ಸೋಮವಾರಪೇಟೆ, ಆ. 7: ಸೋಮವಾರಪೇಟೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಅಲ್ಲಲ್ಲಿ ಮರಗಳು ಉರುಳುತ್ತಿರುವ ಘಟನೆಗಳು ಜರುಗುತ್ತಿದ್ದು, ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಲು ಶಾಸಕರ ಕಚೇರಿಯಿಂದ ಕ್ಷಿಪ್ರ ಕಾರ್ಯಪಡೆಯನ್ನು ರಚಿಸಲಾಗಿದೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೋಮವಾರಪೇಟೆ ಕಚೇರಿಯಿಂದ ಇಂತಹ ಕಾರ್ಯ ಪಡೆಯನ್ನು ಸ್ಥಾಪಿಸಲಾಗಿದ್ದು, ಕಾರ್ಯಕರ್ತರು ತಕ್ಷಣಕ್ಕೆ ಸ್ಪಂದಿಸಿ ಮರಗಳನ್ನು ತೆರವುಗೊಳಿಸಲು ನೆರವಾಗಲಿದ್ದಾರೆ.
ಶಾಸಕರ ಮುತುವರ್ಜಿಯಿಂದ ಒಂದು ಓಮ್ನಿ ಕಾರಿನಲ್ಲಿ ಮರ ಕಟಾವು ಮಾಡುವ ಯಂತ್ರ, ಪೆಟ್ರೋಲ್, ಕತ್ತಿ, ಗರಗಸ ಸೇರಿದಂತೆ ಇತರ ಉಪಯೋಗಕಾರಿ ಪರಿಕರ ಗಳನ್ನು ಇಟ್ಟುಕೊಳ್ಳಲಾಗಿದ್ದು, ತಕ್ಷಣಕ್ಕೆ ಸ್ಪಂದಿಸುವ ಹೊಣೆಗಾರಿಕೆಯನ್ನು ಬಿಜೆಪಿ ಪಕ್ಷದ ಕಾರ್ಯಕರ್ತರು ಹೊತ್ತಿದ್ದಾರೆ.
ಕ್ಷಿಪ್ರಕಾರ್ಯಪಡೆಯ ಸಿಬ್ಬಂದಿಗಳು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮರಗಳು ರಸ್ತೆ ಹಾಗೂ ಮನೆಯ ಮೇಲೆ ಬಿದ್ದರೆ ಸ್ಥಳಕ್ಕಾಗಮಿಸಲು ಕೆಲ ಗಂಟೆಗಳು ಬೇಕಾಗಲಿವೆ. ಈ ಸಂದರ್ಭ ಸಾರ್ವಜನಿಕರು ಹೆಚ್ಚಿನ ತೊಂದರೆಗೆ ಸಿಲುಕುವ ಹಿನ್ನೆಲೆ, ಇದನ್ನು ತಪ್ಪಿಸಲು ಬಿಜೆಪಿ ಕಾರ್ಯಕರ್ತರ ಪಡೆ ಸಿದ್ಧವಾಗಿದ್ದು, ಅಂತಹ ಸನ್ನಿವೇಶದಲ್ಲಿ ತಮ್ಮ ಕಚೇರಿಗೆ ಮಾಹಿತಿ ನೀಡಿದರೆ ತಕ್ಷಣ ಸ್ಪಂದಿಸಲಾಗುವದು ಎಂದು ಶಾಸಕ ರಂಜನ್ ತಿಳಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ತುರ್ತು ಸಂದರ್ಭದಲ್ಲಿ ಸೇವೆ ಒದಗಿಸಲು ಮುಂದಾಗಿದ್ದಾರೆ. ಸಾರ್ವಜನಿಕರು ಇಂತಹ ಸಂದರ್ಭದಲ್ಲಿ ದೂರವಾಣಿ 08276 282475, ಮೊ:8296079048 ಸಂಖ್ಯೆಯನ್ನು ಸಂಪರ್ಕಿಸಿ ಮಾಹಿತಿ ನೀಡುವ ಮೂಲಕ ಈ ಉಚಿತ ಸೇವೆಯನ್ನು ಪಡೆದುಕೊಳ್ಳಬಹುದು ಎಂದು ಶಾಸಕ ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಮಡಿಕೇರಿ ವ್ಯಾಪ್ತಿ ಯಲ್ಲೂ ಕಾರ್ಯಕರ್ತರ ಸಹಕಾರದೊಂದಿಗೆ ಕಾರ್ಯಪಡೆ ರಚಿಸಲಾಗುವದು. ತುರ್ತು ಸಂದರ್ಭದಲ್ಲಿ ತಮ್ಮ ಕಚೇರಿ ಅಥವಾ ನೇರವಾಗಿ ತನ್ನ ಮೊಬೈಲ್ ಗೆ ಮಾಹಿತಿ ನೀಡಿದರೆ ತಕ್ಷಣಕ್ಕೆ ಸ್ಪಂದಿಸಲಾಗುವದು ಎಂದು ರಂಜನ್ ಅವರು ‘ಶಕ್ತಿ’ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ.