ಭಾಗಮಂಡಲ ವ್ಯಾಪ್ತಿಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 11.69 ಇಂಚು ಮಳೆಯಾಗಿದೆ. ಅಪ್ಪಂಗಳ ಬಳಿ ಮರ ಬಿದ್ದು, ಮಡಿಕೇರಿ-ಭಾಗಮಂಡಲ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿದೆ. ನಿನ್ನೆ ಸಂಜೆ ಜೆಸಿಬಿಯೊಂದು ನಾಪೋಕ್ಲು ರಸ್ತೆಯಲ್ಲಿ ಸಾಗುವ ಪ್ರಯತ್ನಕ್ಕೆ ಮುಂದಾಗಿ ರ್ಯಾಫ್ಟಿಂಗ್ ಕಾರ್ಯಕ್ಕೆ ತೊಡಕುಂಟಾಗಿತ್ತು.

ಅಯ್ಯಂಗೇರಿ ವ್ಯಾಪ್ತಿಯ ಹೊಳೆಯೊಂದು ತುಂಬಿ ಸಂಚಾರ ಸ್ಥಗಿತಗೊಂಡಿದೆ. ಅಂಬ್ರಾಟಿಕೊಳ್ಳ ಎಂಬಲ್ಲಿ ನಿರ್ಮಿಸಲಾಗಿದ್ದ 90 ಲಕ್ಷದ ಸೇತುವೆಗೆ ದಂಡೆ ನಿರ್ಮಿಸದ ಕಾರಣ ನೀರು ತುಂಬಿ ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಬಲ್ಲಮಾವಟಿಯಿಂದ ಮಡಿಕೇರಿ ಆಸ್ಪತ್ರೆಗೆ ಬಂದ ಗರ್ಭಿಣಿ ಮಹಿಳೆಯೊಬ್ಬರು ಭಾಗಮಂಡಲ ದಿಂದ ಮುಂದಕ್ಕೆ ತೆರಳಲಾಗದೆ ಪರದಾಡಿದ ಘಟನೆಯೂ ನಡೆಯಿತು. ಅಯ್ಯಂಗೇರಿ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.

ಭಾಗಮಂಡಲದಲ್ಲಿ ಒಂದು ರ್ಯಾಫ್ಟ್ ಹಾಗೂ ಒಂದು ಬೋಟನ್ನು ನಿಯೋಜಿಸಲಾಗಿದೆ. ಬೆಟ್ಟ ಸಾಲಿನಲ್ಲಿ ಭಾರೀ ಮಳೆಯಾ ಗುತ್ತಿರುವ ಹಿನ್ನೆಲೆ ಯಲ್ಲಿ ಅಲ್ಲಿಂದ ಹರಿದು ಬರುತ್ತಿರುವ ನೀರಿನಿಂದಾಗಿ ತೊಂದರೆಯುಂಟಾಗಿದೆ ಎಂದು ಸ್ಥಳೀಯ ರಾದ ಕುಯ್ಯಮುಡಿ ಮನೋಜ್ ‘ಶಕ್ತಿ’ಗೆ ತಿಳಿಸಿದ್ದಾರೆ. ಕರಿಕೆ-ಭಾಗಮಂಡಲ ರಸ್ತೆಯಲ್ಲಿ ಬಾಚಿಮಲೆ ಬಳಿ ಮರವೊಂದು ಕುಸಿದು ಬಿದ್ದು ಕೆಲಹೊತ್ತು ಸಂಚಾರ ಸ್ಥಗಿತಗೊಂಡಿತ್ತು.

ಕಾವೇರಿಗೆ ಪೂಜೆ

ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿಯಿಂದ ಮುಕ್ತಿ ಸಿಗಬೇಕು ಎಂಬ ಪ್ರಾರ್ಥನೆ ಯೊಂದಿಗೆ ಭಾಗಮಂಡಲದ ಸ್ಥಳೀಯರು ಮಾತೆ ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರ ಪುರೋಹಿತರಾದ ಸೂರ್ಯ ನಾರಾಯಣ ವೈದ್ಯರು, ಕುದುಕುಳಿ ಭರತ್, ಶ್ಯಾಂಭಟ್, ಪಾಣತ್ತಲೆ ಜೀವನ್ ಕುಮಾರ್ ಇತರರು ಇದ್ದರು.

-ಸುನಿಲ್ ಕುಯ್ಯಮುಡಿ