ಮಡಿಕೇರಿ, ಆ. 7: ಕಳೆದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಪ್ರಕೃತಿ ವಿಕೋಪ, ಜಲಪ್ರಳಯ ಜನಮಾನಸದಲ್ಲಿ ಮರೆಯಲಾಗದಂತಹ ಘಟನೆ. ಇದೀಗ ಈ ಬಾರಿ ಕೂಡ ವರುಣ ಅದೇ ಹಾದಿಯಲ್ಲಿ ಸಾಗುತ್ತಿದ್ದು, ಕಳೆದ ವರ್ಷ ವಿಕೋಪಕ್ಕೆ ತುತ್ತಾಗಿ ಅತಿ ಹೆಚ್ಚು ಹಾನಿಗೀಡಾದ ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮೇಘತ್ತಾಳು, ಮುಕ್ಕೋಡ್ಲು ಗ್ರಾಮಗಳಲ್ಲಿ ರಸ್ತೆ, ಸೇತುವೆ, ಗದ್ದೆಗಳು ಜಲಾವೃತಗೊಂಡಿದ್ದರೆ, ಹೆಮ್ಮೆತ್ತಾಳು, ಉದಯಗಿರಿ ಮುಂತಾದೆಡೆ ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ಕೆಲವು ಕಡೆಗಳಲ್ಲಿ ಮಣ್ಣು ಕುಸಿದಿದೆ.
ಮೇಘತ್ತಾಳು ಗ್ರಾಮದಲ್ಲಿ ಹರಿಯುವ ನದಿ ನೀರಿನ ಮಟ್ಟದಲ್ಲಿ ತೀರಾ ಏರಿಕೆಯಾಗಿದ್ದು, ಗದ್ದೆಗಳಿಗೆ ನುಗ್ಗಿದೆ. ಅಲ್ಲದೆ ಮುಖ್ಯ ರಸ್ತೆಯ ಅಂಚಿಗೆ ತಲಪಿದ್ದು, ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಸೇತುವೆ ನಡುವಲ್ಲಿ ಕುಸಿದಿದ್ದು, ವಾಹನ ಸವಾರರು ಎಚ್ಚರ ತಪ್ಪಿದರೆ ಅಪಾಯ ತಪ್ಪಿದಲ್ಲ. ಇತ್ತ ಮುಕ್ಕೋಡ್ಲುವಿನಲ್ಲಿಯೂ ಹಟ್ಟಿಹೊಳೆ ತುಂಬಿ ಹರಿಯುತ್ತಿದ್ದು, ರಸ್ತೆಗೆ ನುಗ್ಗಿದೆ. ಸ್ಥಳಕ್ಕೆ ಗ್ರಾಮಲೆಕ್ಕಿಗ ಸಂದೀಪ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕಳೆದ ವರ್ಷ ಪ್ರಾಕೃತಿಕ ದುರಂತ ಸಂಭವಿಸಿದ ಸ್ಥಳಗಳಲ್ಲಿಯೂ ಅಪಾಯಕಾರಿ ಪರಿಸ್ಥಿತಿಯಿಂದ ಕಳೆದ ಭಾರಿ ಧಾರಾಶಾಹಿಯಾಗಿ ನಿಂತಿದ್ದ ಮರಗಳ ರಾಶಿ ನದಿ ನೀರಿನಲ್ಲಿ ಕೊಚ್ಚಿ ಬಂದ ಪರಿಣಾಮ ಹಟ್ಟಿಹೊಳೆ ಸನಿಹದ ಸೇತುವೆಗೆ ತಡೆಯಾಗಿ ನಿಂತು ನೀರಿನ ಸರಾಗ ಹರಿವಿಕೆಗೆ ಅಡಚಣೆಯಾಗಿತ್ತು. ಮಾತ್ರವಲ್ಲದೆ ಈ ಮರಗಳ ಒತ್ತಡದಿಂದಾಗಿ ಸೇತುವೆ ಮೇಲೆಯೇ ನೀರು ಹರಿಯುತ್ತಿದೆ. ಸ್ಥಳಕ್ಕೆ ಸ್ಥಳೀಯ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಬಿಳಿಗೇರಿ, ನಂದಿಮೊಟ್ಟೆ ಗ್ರಾಮಗಳಿಗೂ ಭೇಟಿ ನೀಡಿ ಪರಿಶೀಲಿಸಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು ರಸ್ತೆಯಲ್ಲಿ ಮತ್ತೆ ಕುಸಿತ
ಮಡಿಕೇರಿ, ಆ. 7: ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಉಂಟಾದ ಅತಿವೃಷ್ಟಿಯಿಂದ ಮಣ್ಣು ಕುಸಿದು ರಸ್ತೆ ಕುಸಿತಗೊಂಡಿರುವ ಸ್ಥಳದಲ್ಲಿಯೇ ಈ ಬಾರಿ ಮತ್ತೆ ಕುಸಿತಗೊಂಡಿದೆ. ಅದೃಷ್ಟವಶಾತ್ ಪ್ರಾಣಾಪಾಯ ತಪ್ಪಿದೆ.
ಮಡಿಕೇರಿಯಿಂದ 3 ಕಿ.ಮೀ. ಅಂತರದ ತಾಳತ್ಮನೆ ಬಳಿ ಮಡಿಕೇರಿ - ಮಂಗಳೂರು ಹೆದ್ದಾರಿ ಕಳೆದ ಮಳೆಗಾಲದಲ್ಲಿ ಕುಸಿತಗೊಂಡಿತ್ತು. ನಂತರದಲ್ಲಿ ದುರಸ್ತಿ ಕಾರ್ಯವಾಗಿ ಮಣ್ಣು ಕುಸಿದ ಸ್ಥಳದಲ್ಲಿ ಮರಳಿನ ಚೀಲಗಳನ್ನಿಟ್ಟು ತಡೆಗೋಡೆ ನಿರ್ಮಿಸಲಾಗಿತ್ತು. ಆದರೆ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಇಂದು ತಡೆಗೋಡೆಯಾಗಿ ನಿರ್ಮಿಸಿದ್ದ ಸಾವಿರಾರು ಮರಳು ಚೀಲಗಳು ಕುಸಿದಿವೆ. ಕುಸಿದ ಸ್ಥಳದಲ್ಲಿ ತಾತ್ಕಾಲಿಕ ದುರಸ್ತಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಜಲ ನೀರಿನೊಂದಿಗೆ ಮರಳು ಚೀಲಗಳು ಕುಸಿದಿದ್ದು, ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರು ಕ್ಷಣಮಾತ್ರದಲ್ಲಿ ಅಪಾಯದಿಂದ ಪಾರಾದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ರಸ್ತೆ ಅಪಾಯಕಾರಿ ಸ್ಥಿತಿಯಲ್ಲಿದ್ದು, ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡುವಂತೆ ಜಿಲ್ಲಾಧಿಕಾರಿಯವರಲ್ಲಿ ಕೋರಿದರೂ ಭಾರೀ ವಾಹನಗಳು ಸಂಚರಿಸುತ್ತಿದ್ದು, ಅಪಾಯ ತಪ್ಪಿದ್ದಲ್ಲವೆಂದು ಸ್ಥಳೀಯರು ‘ಶಕ್ತಿ’ಯೊಂದಿಗೆ ಹೇಳಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳ ಪ್ರತಿಕ್ರಿಯೆ ಬಯಸಿದಾಗ ಹೆದ್ದಾರಿ ಪ್ರಾಧಿಕಾರದ ಸೂಪರಿಂಟೆಂಡೆಂಟ್ ಇಂಜಿನಿಯರ್ ಆಗಮಿಸಿ, ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವದು. ಸದ್ಯದ ಮಟ್ಟಿಗೆ ಬ್ಯಾರಿಕೇಡ್ ಅಳವಡಿಸಿದ್ದು, ಪೊಲೀಸರ ಮೂಲಕ ಸಂಚಾರ ವ್ಯವಸ್ಥೆ ನಿಯಂತ್ರಿಸುತ್ತಿರುವದಾಗಿ ಹೇಳಿದರು. ಸ್ಥಳಕ್ಕೆ ಶಾಸಕ ಕೆ.ಜಿ. ಬೋಪಯ್ಯರಾದಿಯಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಸಂಪಿಗೆ ಕಟ್ಟೆಯಲ್ಲಿ ಬಿರುಕು
ಇತ್ತ ಮಡಿಕೇರಿ - ಸೋಮವಾರಪೇಟೆ ರಸ್ತೆಯ ಸಂಪಿಗೆಕಟ್ಟೆ ಬಳಿ ಕಳೆದ ಬಾರಿ ಕುಸಿದಿದ್ದ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡು ಅಪಾಯದ ಸ್ಥಿತಿಯಲ್ಲಿದೆ. ಇಲ್ಲಿಯೂ ಕಳೆದ ವರ್ಷ ಕುಸಿದ ರಸ್ತೆಗೆ ಮರಳಿನ ಚೀಲದ ತಡೆಗೋಡೆ ನಿರ್ಮಿಸಲಾಗಿತ್ತು. ಈ ಬಾರಿಯ ಮೊದಲ ಮಳೆಯಲ್ಲಿಯೇ ಇಲ್ಲಿ ರಸ್ತೆ ಬಿರುಕು ಕಾಣಿಸಿಕೊಂಡಿತ್ತು. ನಂತರದಲ್ಲಿ ಕಲ್ಲುಪುಡಿ, ಜಲ್ಲಿ ಮಿಶ್ರಣ ಮಾಡಿ ತೇಪೆ ಹಾಕಲಾಗಿತ್ತು. ಇದೀಗ ಮತ್ತೆ ಬಿರುಕು ಬಿಟ್ಟಿದ್ದು, ಅಪಾಯವನ್ನು ಆಹ್ವಾನಿಸುವಂತಿದೆ.
ಜೋಡುಪಾಲದ ಬಳಿ ಕಳೆದ ಬಾರಿ ಸಾಕಷ್ಟು ಹಾನಿಯಾಗಿತ್ತು. ಇದೀಗ ಭಾರೀ ಮಳೆ ಹಿನ್ನೆಲೆಯಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ರಸ್ತೆ ಮೇಲೆ ಮರ ಉರುಳಿ ಬಿದ್ದಿದ್ದು, ಅದನ್ನು ತೆರವುಗೊಳಿಸಲಾಗಿದೆ.