ವೀರಾಜಪೇಟೆ, ಆ. 7: ಕೊಡಗು ಜಿಲ್ಲೆಯಲ್ಲಿ ಮಳೆ ತೀವ್ರಗೊಳ್ಳುವದ ರೊಂದಿಗೆ ದಕ್ಷಿಣ ಕೊಡಗಿನಲ್ಲಿ ಜನಪ್ರವಾಹದೊಂದಿಗೆ ಸಮಸ್ಯೆಗಳು ಎದುರಾಗುತ್ತಿದ್ದು, ಕೆಳಹಂತದ ಅಧಿಕಾರಿಗಳು ತಾಲೂಕು ತಹಶೀಲ್ದಾರರ ನೇತೃತ್ವದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಾಕೀತು ಮಾಡಿದ್ದಾರೆ. ಜಿಲ್ಲೆಯಲ್ಲಿ ಎದುರಾಗುತ್ತಿರುವ ಪರಿಸ್ಥಿತಿ ನಿಭಾಯಿಸಲು ಸಂಘಟಿತರಾಗಿ ಪರಸ್ಪರ ಹೊಂದಾಣಿಕೆಯಿಂದ ಕಾರ್ಯೋನ್ಮು ಖರಾಗುವಂತೆ ಸೂಚಿಸಿರುವ ಜಿಲ್ಲಾಧಿಕಾರಿ, ಪ್ರತಿಯೊಬ್ಬರು ತುರ್ತು ನಿಗಾವಹಿಸಿ ಕೆಲಸ ಮಾಡಬೇಕೆಂದು ನೆನಪಿಸಿದ್ದಾರೆ.ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಇಂದು ತುರ್ತಾಗಿ ಕರೆದಿದ್ದ ತಾಲೂಕು ಹಂತದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಾ, ಯಾವದೇ ದೂರುಗಳನ್ನು ನಿರ್ಲಕ್ಷಿಸದಂತೆ ಕಿವಿಮಾತು ಹೇಳಿದರು.
ಎಸ್ಪಿ ನಿರ್ದೇಶನ: ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಮಾತನಾಡಿ, ಗ್ರಾ.ಪಂ. ಹಂತದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರ ನಡುವೆ ಹೊಂದಾಣಿಕೆಯ ಕೊರತೆ ಆರೋಪ ಕೇಳಿ ಬರುತ್ತಿದ್ದು, ಈಗಿನ ಪರಿಸ್ಥಿತಿಯಲ್ಲಿ ಎಲ್ಲ ಇಲಾಖೆಯವರು ಪರಸ್ಪರ ಸನ್ನಿವೇಶವನ್ನು ಅರ್ಥೈಸಿಕೊಂಡು ಒಗ್ಗೂಡಿ ಕಾರ್ಯ ನಿರ್ವಹಿಸಲು ನಿರ್ದೇಶಿಸಿದರು. ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲೆಲ್ಲಿ ಅಪಾಯದ ಮುನ್ಸೂಚನೆ ಎದುರಾಗುವ ಸ್ಥಳಗಳಿವೆಯೋ ಅಂತಹ ಕಡೆ
(ಮೊದಲ ಪುಟದಿಂದ) ತೆರಳಿ ಜನರಲ್ಲಿ ವಿಶ್ವಾಸ ತುಂಬುವದರೊಂದಿಗೆ ಸಾರ್ವಜನಿಕರ ಅನಿಸಿಕೆಯಂತೆ ಮುಂಜಾಗ್ರತೆ ತೆಗೆದುಕೊಳ್ಳುವಂತೆ ಸಲಹೆಯಿತ್ತರು.
ಸಿಇಓ ಎಚ್ಚರಿಕೆ: ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಗ್ರಾ.ಪಂ. ಅಧಿಕಾರಿಗಳು ಕಡ್ಡಾಯ ಕರ್ತವ್ಯ ನಿರ್ವಹಣೆಯೊಂದಿಗೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಕೈಜೊಡಿಸಿ ಕೆಲಸ ಮಾಡದಿದ್ದರೆ ಕಾನೂನು ರೀತಿ ಕ್ರಮ ಜರುಗಿಸುವದಾಗಿ ಎಚ್ಚರಿಸಿದರು. ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು ಕೈಜೋಡಿಸಿದ್ದು, ತಾಲೂಕು ಮತ್ತು ಕೆಳ ಹಂತದಲ್ಲಿಯೂ ಪರಸ್ಪರ ಹೊಂದಾಣಿಕೆಯಿಂದ ಜವಾಬ್ದಾರಿಯುತವಾಗಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು, ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾ.ಪಂ. ಹಂತದಲ್ಲೂ ಈ ರೀತಿ ಹೊಂದಾಣಿಕೆ ಅಗತ್ಯವೆಂದು ತಿಳಿ ಹೇಳಿದರು.
ಶಾಸಕರ ಅಸಮಾಧಾನ: ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಸಭೆಯಲ್ಲಿ ಮಾತನಾಡುತ್ತಾ, ತಾವು ಅನೇಕ ಕಡೆಗಳಲ್ಲಿ ಸಮಸ್ಯೆಗಳನ್ನು ಗಮನಿಸಿದ್ದು, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಸ್ಥಿತಿ ಬಿಗಡಾಯಿಸುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವೀರಾಜಪೇಟೆಯ ಕೀರ್ತಿ ಬಡಾವಣೆಯಲ್ಲಿ ಅಕ್ರಮ ಕಲ್ಲುಕೋರೆ, ಆರ್ಜಿ ಗ್ರಾಮದಲ್ಲಿ ಅಕ್ರಮ ಕಟ್ಟಡದಿಂದ ರಸ್ತೆ ಮುಳುಗಡೆ, ಗೋಣಿಕೊಪ್ಪಲು ಕೀರೆಹೊಳೆ ಜಾಗ ಅತಿಕ್ರಮಣ ಪರಿಣಾಮ ಮನೆಗಳಿಗೆ ನೀರು ನುಗ್ಗುವಂತಾಗಿದೆ ಎಂದು ಉದಾಹರಿಸಿದರು.
ಇಂತಹ ಸಮಸ್ಯೆಗಳಿಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕರ್ತವ್ಯ ನಿರ್ಲಕ್ಷ್ಯದಿಂದ ನಿಯಮಬಾಹಿರ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿರುವದಾಗಿದೆ ಎಂದು ಶಾಸಕರು ಬೊಟ್ಟು ಮಾಡಿದರು.
ಆಸ್ಪತ್ರೆಯಲ್ಲಿ ಕತ್ತಲೆ: ವೀರಾಜಪೇಟೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆಯಿಂದ ತಾಲೂಕು ಆಸ್ಪತ್ರೆಯಲ್ಲಿ ಜನರೇಟರ್ ಕೂಡ ಕೆಟ್ಟಿರುವ ಪರಿಣಾಮ ರೋಗಿಗಳು ಪರದಾಡುವಂತಾಗಿದೆ ಎಂದು ಜಿಲ್ಲಾಡಳಿತಕ್ಕೆ ನೆನಪಿಸಿದರು. ಈ ವೇಳೆ ವೈದ್ಯಾಧಿಕಾರಿ ಡಾ. ವಿಶ್ವನಾಥ ಸಿಂಪಿ ಪ್ರತಿಕ್ರಿಯಿಸಿ 40 ವರ್ಷ ಹಳೆಯದಾದ ಜನರೇಟರ್ ಕೈಕೊಟ್ಟಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಈ ಬಗ್ಗೆ ತಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಜೊತೆ ಚರ್ಚಿಸಿ ಸೂಕ್ತ ಪರಿಹಾರ ಕಲ್ಪಿಸುವದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದರು.
ರಸ್ತೆ ಕುಸಿತ: ಸಮಸ್ಯೆಗಳತ್ತ ಮಾತು ಮುಂದುವರೆಸಿದ ಶಾಸಕರು, ಬಾಳುಗೋಡು, ಪೆರುಂಬಾಡಿ, ಆರ್ಜಿ, ಬೇಟೋಳಿ ಹಾಗೂ ಮಾಕುಟ್ಟ ರಸ್ತೆಯ ಅಲ್ಲಲ್ಲಿ ಮರ ಬಿದ್ದಿದ್ದರೂ, ತೆರವುಗೊಳಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಇಂದು ಮತ್ತೆ ಮಾಕುಟ್ಟ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ತುರ್ತು ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು.
ವಾಹನ ಕೊರತೆ: ವೀರಾಜಪೇಟೆ ತಾಲೂಕಿನಲ್ಲಿ ಚೆಸ್ಕಾಂ, ತಾ.ಪಂ. ಹಾಗೂ ಇತರ ಅಧಿಕಾರಿಗಳಿಗೆ ವಾಹನ ಕೊರತೆಯಿದ್ದು, ತಾವು ಬಾಡಿಗೆಗೆ ವಾಹನಗಳನ್ನು ನಿಯೋಜಿಸಿಕೊಂಡು ಜನರ ಸಮಸ್ಯೆಗಳಿಗೆ ತುರ್ತು ಸ್ಪಂದಿಸಬೇಕೆಂದು ಕೆ.ಜಿ. ಬೋಪಯ್ಯ ತಿಳಿ ಹೇಳಿದರು. ಈ ಬಗ್ಗೆ ಧನಿಗೂಡಿಸಿದ ಜಿಲ್ಲಾಧಿಕಾರಿ ವಾಹನಗಳ ಕೊರತೆಯಾಗದಂತೆ ಬಾಡಿಗೆಗೆ ಪಡೆದುಕೊಳ್ಳಲು ಅಗತ್ಯ ಕ್ರಮಕ್ಕೆ ಸೂಚಿಸಿದರು.
ಸಭೆಯಲ್ಲಿ ವೀರಾಜಪೇಟೆ ತಾಲೂಕು ಹಂತದ ಪೊಲೀಸ್, ಕಂದಾಯ, ಆರೋಗ್ಯ, ಲೋಕೋಪಯೋಗಿ, ಅರಣ್ಯ, ತಾ.ಪಂ., ಚೆಸ್ಕಾಂ, ಬಿಎಸ್ಎನ್ಎಲ್ ಸೇರಿದಂತೆ ಇತರ ಅಧಿಕಾರಿಗಳು ಹಾಜರಿದ್ದು, ವಿವಿಧ ಸಮಸ್ಯೆಗಳ ಕುರಿತು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.