ಸೋಮವಾರಪೇಟೆ, ಆ. 7: ಕೊರಿಯರ್ನಲ್ಲಿ ಬಂದ ತೀರ್ಥವನ್ನು ಸೇವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಪ್ರಕರಣ ಅಂತ್ಯಕಂಡಿದ್ದು, ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ತೀರ್ಥದ ಬಾಟಲಿನಲ್ಲಿ ಸೈನೈಡ್ ಬೆರೆಸಿ ಹತ್ಯೆಗೈದಿರುವದು ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಪತ್ನಿ ಹಾಗೂ ಮತ್ತೋರ್ವನ ನಡುವಿನ ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಬಂದ ಹಿನ್ನೆಲೆಯಲ್ಲಿ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ನಾಜೂಕಾಗಿ ಹತ್ಯೆ ಮಾಡಿರುವದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಇಲ್ಲಿನ ಕಣಾರ ಹೊಟೇಲ್ನಲ್ಲಿ ಅಡುಗೆ ಕೆಲಸ ನಿರ್ವಹಿಸುತ್ತಿರುವ ತಣ್ಣೀರುಹಳ್ಳದ ಗ್ರಾಮದ ನಿವಾಸಿ ಸುರೇಶ್ ಎಂಬವರಿಗೆ ಮೊನ್ನೆ ದಿನ ಕಾಸರಗೋಡಿನ ದೇವಾಲಯವೊಂದರ ವಿಳಾಸದಿಂದ ತೀರ್ಥದ ಬಾಟಲಿ ಕೊರಿಯರ್ ಮೂಲಕ ಬಂದಿದೆ. ಶನಿವಾರ ದಿನ ಪಾರ್ಸೆಲ್ ಬಂದಿದ್ದು, ಅಂದು ಸುರೇಶ್ ಸಂಜೆ ಬೇಗನೆ ಮನೆಗೆ ಹೋಗಿದ್ದರಿಂದ ಮರುದಿನ ಭಾನುವಾರ ಹೊಟೇಲ್ ಮಾಲೀಕರು ತೀರ್ಥದ ಬಾಟಲಿಯನ್ನು ನೀಡಿದ್ದಾರೆ. ಅದನ್ನು ಪಡೆದ ಸುರೇಶ್ ಮನೆಗೆ ಹೋಗಿ ಪಾರ್ಸೆಲ್ ತೆರೆದಾಗ ಮನೆಯ ‘ಯಜಮಾನ ಮಾತ್ರ ಕುಡಿಯಬೇಕು’ ಎಂಬ ಬರಹವಿದ್ದುದನ್ನು ನೋಡಿ ತಾನು ಸ್ನಾನ ಮಾಡಿ ಬಂದು ತೀರ್ಥದಂತೆ ಸೇವಿಸಿದ್ದಾನೆ. ಸುರೇಶ್ ತೀರ್ಥ ಕುಡಿಯುವ
(ಮೊದಲ ಪುಟದಿಂದ) ಸಂದರ್ಭದಲ್ಲಿ ಆತನ ಪತ್ನಿ ರಾಧ ಸ್ನಾನಕ್ಕೆ ಹೋಗಿದ್ದಾಳೆ.
ಮಲಗಿದಲ್ಲೇ ಸಾವು
ತೀರ್ಥ ಕುಡಿದು ಮನೆಯಲ್ಲಿದ್ದ ಸಂದರ್ಭ ಸುರೇಶ್ ಪತ್ನಿ ರಾಧಾ ಕೆಲಸಕ್ಕೆ ಹೋಗುವ ತೋಟದಲ್ಲಿ ಕೆಲಸಕ್ಕೆ ಹೋಗುವ ಇನ್ನೋರ್ವ ಮಹಿಳೆ ರಾಧಾಳ ಸಂಬಳ ನೀಡಲೆಂದು ಮನೆಗೆ ಬಂದಿದ್ದಾರೆ. ಈ ಸಂದರ್ಭ ಸುರೇಶ್ ಅವರೊಂದಿಗೆ ‘ದೇವಸ್ಥಾನದಿಂದ ತೀರ್ಥ ಬಂದಿದೆ.. ಬಾಯೆಲ್ಲ ಒಗರು ಆಗುತ್ತಿದೆ’ ಎಂದು ಹೇಳಿದ್ದಾರೆ. ಅದಕ್ಕೆ ಅವರು ತೀರ್ಥದಲ್ಲಿ ಗೋಮೂತ್ರ ಹೆಚ್ಚಿರಬಹುದು. ಹೆಚ್ಚಿಗೆ ಕುಡಿಬೇಡಿ ಎಂದು ಹೇಳಿ ಹೋಗಿದ್ದಾರೆ. ಅದಾದ ನಂತರ ಹೋಗಿ ಮಲಗಿದ ಸುರೇಶ್ ಕೇವಲ 5 ನಿಮಿಷಗಳ ಅಂತರದಲ್ಲಿ ಸಾವನ್ನಪ್ಪಿದ್ದಾರೆ.
ಗಂಡನ ಮುಗಿಸಲು ಸಂಚು
ಮೃತ ಸುರೇಶನ ಪತ್ನಿ ರಾಧ ಇಲ್ಲಿನ ಬಸವೇಶ್ವರ ರಸ್ತೆ ನಿವಾಸಿ, ಮೆಡಿಕಲ್ ರೆಫ್ರೆಸೆಂಟೀಟಿವ್ ಆಗಿರುವ ಬಿ.ಡಿ. ಮುರಳಿ ಎಂಬಾತನಿಗೆ ಸೇರಿದ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಹಾಗಾಗಿ ಇವರಿಬ್ಬರಲ್ಲಿ ಅನೈತಿಕ ಸಂಬಂಧ ಹುಟ್ಟಿಕೊಂಡಿದೆ. ಕಳೆದ ಎರಡು ತಿಂಗಳ ಹಿಂದೆ ಮುರಳಿ ರಾಧಾಳ ಮನೆಗೆ ಬಂದಿದ್ದಾನೆ. ಇದೇ ಸಂದರ್ಭದಲ್ಲಿ ಸುರೇಶ್ ಕೂಡ ಮನೆಗೆ ಬಂದಿದ್ದು, ಮನೆಯಲ್ಲಿ ಗಲಾಟೆ ಆಗಿದೆ.
ನಂತರದಲ್ಲಿ ಸುರೇಶ್ ಪತ್ನಿ ರಾಧಾಳಿಗೆ ಇನ್ನು ಮುಂದೆ ಕೆಲಸಕ್ಕೆ ಹೋಗಬಾರದೆಂದು ತಾಕೀತು ಮಾಡಿದ್ದಾರೆ. ಕೆಲ ಸಮಯ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ರಾಧಾ ನಂತರದಲ್ಲಿ ಕೆಲಸಕ್ಕೆ ಹೋಗಲಾರಂಭಿಸಿದ್ದಾಳೆ. ಆದರೂ ಸುರೇಶ ಏನೂ ಹೇಳದೆ ಸುಮ್ಮನಾಗಿದ್ದರು. ಆದರೆ, ಇತ್ತ ಪತ್ನಿ ಪ್ರಿಯಕರನೊಂದಿಗೆ ತನ್ನನ್ನು ಮುಗಿಸಲು ಸಂಚು ರೂಪಿಸಿರುವದು ಸುರೇಶನಿಗೆ ತಿಳಿಯಲೇ ಇಲ್ಲ. ಮೆಡಿಕಲ್ ರೆಪ್ ಆಗಿರುವ ಮುರಳಿ ಹೈದರಾಬಾದ್ನಿಂದ ರೂ. 20 ಸಾವಿರಕ್ಕೆ ಸೈನೈಡ್ ಖರೀದಿ ಮಾಡಿದ್ದಾನೆ. ಕಾಸರಗೋಡಿಗೆ ಹೋಗಿ ಅಲ್ಲಿನ ದೇವಾಲಯದ ಹೆಸರಿನಲ್ಲಿರುವ ತೀರ್ಥ ಬಾಟ್ಲಿ ಖರೀದಿಸಿ ಅದಕ್ಕೆ ಎರಡರಿಂದ ಮೂರು ಹನಿ ನೀರಿನೊಂದಿಗೆ ಬೆರೆಸಿ ಕೊರಿಯರ್ ಮಾಡಿದ್ದಾನೆ. ಅದನ್ನು ಸೇವಿಸಿದ ಸುರೇಶ್ ಇಹಲೋಕ ತ್ಯಜಿಸಿದ್ದಾನೆ.
ರಾಧಾಳಿಂದ ದೂರು
ಇತ್ತ ಸುರೇಶ ತೀರ್ಥ ಸೇವಿಸುವ ವೇಳೆಗೆ ಎಲ್ಲ ವಿಚಾರ ತಿಳಿದಿದ್ದಳಾದ ರಾಧಾ ಸ್ನಾನಕ್ಕೆ ಹೋಗಿದ್ದು, ಬಂದು ನೋಡುವಲ್ಲಿ ಸುರೇಶ್ ಹೆಣವಾಗಿದ್ದರು. ಆಮೇಲೆ ನಾಟಕವಾಡಿದ ರಾಧಾ ತಾನೇ ಪೊಲೀಸ್ ಠಾಣೆಗೆ ತೆರಳಿ ಪತಿ ತೀರ್ಥ ಕುಡಿದು ಸಾವನ್ನಪ್ಪಿರುವದಾಗಿ ದೂರು ನೀಡಿದ್ದಾಳೆ.
ಪೊಲೀಸರಿಗೆ ಅನುಕೂಲ
ತೀರ್ಥ ಕುಡಿದು ಪತಿ ಸಾವನ್ನಪ್ಪಿದ್ದಾನೆ ಎಂಬ ದೂರಿನಲ್ಲಿ ಪೊಲೀಸರಿಗೆ ಸಂಶಯ ಕಾಡಿತ್ತಲ್ಲದೆ, ತನಿಖೆ ಬೆನ್ನತ್ತಲು ಅನುಕೂಲವಾಯಿತು. ಕೊರಿಯರ್ ಎಲ್ಲಿಂದ ಬಂದಿತು, ಯಾರು ತಂದುಕೊಟ್ಟರು, ರಾಧಾ, ಸುರೇಶ್ ಅವರ ಬಗ್ಗೆ ಮಾಹಿತಿ ಸಂಗ್ರಹಿಸಿ ಜಾಡು ಹಿಡಿದ ಪೊಲೀಸರು ರಾಧಾ ಹಾಗೂ ಆಕೆಯ ಪ್ರಿಯಕರ ಮುರಳಿಯನ್ನು ಬಂಧಿಸಿದ್ದಾರೆ. ವಿವಾಹವಾಗಿ ಒಂದು ಮಗು ಇರುವ ಮುರಳಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೊಪ್ಪಿಸಿದ್ದಾರೆ.
ಮುರಳಿ ಬಿ.ಡಿ. ಮತ್ತು ಮೃತ ಸುರೇಶನ ಪತ್ನಿ ರಾಧ ಇವರಿಬ್ಬರ ಮಧ್ಯೆ ಅನೈತಿಕ ಸಂಬಂಧ ಇದ್ದು, ಅವರಿಬ್ಬರ ಸಂಬಂಧಕ್ಕೆ ರಾಧಾಳ ಗಂಡ ಸುರೇಶ ಟಿ.ಕೆ. ಅಡ್ಡಿಯಾಗಿದ್ದರಿಂದ ಆತನನ್ನು ಕೊಲೆ ಮಾಡಲು ಇಬ್ಬರು ಸೇರಿ ಸಂಚು ರೂಪಿಸಿ, ಮುರಳಿಯು ನೀರಿನಲ್ಲಿ ಸೈನೈಡ್ ಬೆರೆಸಿ ಬಾಟಲ್ನಲ್ಲಿ ತುಂಬಿ ದೇವರ ತೀರ್ಥ ಎಂದು ಕೊರಿಯರ್ ಮುಖಾಂತರ ಸುರೇಶನಿಗೆ ಕಳುಹಿಸಿದ್ದನು. ರಾಧಾಳು ಸುರೇಶನಿಗೆ ದೇವರ ಪ್ರಸಾದ ಕುಡಿದು ಉಳಿದ ಸೈನೈಡ್ನ್ನು ಬಾಟಲ್ ಸಮೇತ ಬೆಂಕಿಗೆ ಹಾಕಿ ಸಾಕ್ಷ್ಯ ನಾಶ ಮಾಡಿರುವದು ತಿಳಿದುಬಂದಿರುವದರಿಂದ ಆರೋಪಿಗಳ ವಿರುದ್ಧ ಸೋಮವಾರಪೇಟೆ ಮೊ.ಸಂ.129/2019 ಕಲಂ 120(ಬಿ), 302, 201 ರೆ/ವಿ 34 ಐ.ಪಿ.ಸಿ. ದಾಖಲಿಸಿಕೊಂಡು ಬಂಧಿಸಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸ್ ಉನ್ನತಾಧಿಕಾರಿ ಡಾ. ಸುಮನ್ ಡಿ.ಪಿ., ಮಾರ್ಗದರ್ಶನದಲ್ಲಿ ಡಿ.ವೈ.ಎಸ್ಪಿ. ಮುರುಳಿಧರ ಪಿ.ಕೆ., ತನಿಖಾಧಿಕಾರಿ ಕುಮಾರ್ ಆರಾಧ್ಯ ಎನ್., ಸಿ.ಪಿ.ಐ., ಕುಶಾಲನಗರ ಇವರ ನೇತೃತ್ವದಲ್ಲಿ ಶಿವಶಂಕರ್, ಪಿ.ಎಸ್.ಐ., ಸೋಮವಾರಪೇಟೆ ಠಾಣೆ, ಸಿಬ್ಬಂದಿಯವರುಗಳಾದ ಶಿವಕುಮಾರ್, ನವೀನ್ ಕುಮಾರ್, ಜಗದೀಶ, ಪ್ರವೀಣ, ಕೇಶವ, ರಮೇಶ, ಕಾಂತಿ, ಧನಲಕ್ಷ್ಮಿ, ಸಜು, ಜೋಸೆಫ್, ಪ್ರಕಾಶ, ಸಂಪತ್ ರೈ, ಚಾಲಕರಾದ ಕುಮಾರ ಮತ್ತು ಗಣೇಶ್ ಇವರುಗಳು ಹಾಗೂ ಸಿ.ಡಿ.ಆರ್. ವಿಭಾಗದ ರಾಜೇಶ್ ಮತ್ತು ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
-ವಿಜಯ್