ಗೋಣಿಕೊಪ್ಪಲು, ಆ. 7: ಪಟ್ಟಣದ 2 ನೇ ಬ್ಲಾಕಿನ ಮನೆಗಳಿಗೆ ಕೀರೆಹೊಳೆ ಪ್ರವಾದ ನೀರು ನುಗ್ಗಿ ಜನತೆಗೆ ಆತಂಕ ಉಂಟುಮಾಡಿದೆ. ಜತೆಗೆ ಬೈಪಾಸ್ ರಸ್ತೆಯ ತೋಡಿನ ನೀರು ಕೂಡ ವೆಂಕಟಪ್ಪ ಬಡಾವಣೆಯ ಮನೆಗಳಿಗೆ ನುಗ್ಗಿ ಹಾನಿಯಾಗಿದೆ. ಪೊನ್ನಂಪೇಟೆಗೆ ತೆರಳುವ ರಸ್ತೆಯ ಸೇತುವೆ ಕೆಳಗೆ ತ್ಯಾಜ್ಯ ತುಂಬಿಕೊಂಡು ತೋಡಿನ ನೀರು ರಸ್ತೆ ಮೇಲೆ ನುಗ್ಗಿದೆ. ಜತೆಗೆ ಕೀರೆಹೊಳೆ ನೀರು ಪಟ್ಟಣದ ಪಟೇಲ್ ನಗರಕ್ಕೆ ನುಗ್ಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಪಟ್ಟಣದ 3, 6 ಮತ್ತು 7 ನೇ ವಿಭಾಗದಲ್ಲಿಯೂ ಕೀರೆಹೊಳೆ ನೀರು ಮನೆಗಳಿಗೆ ಸಮಸ್ಯೆ ಒಡ್ಡಿದೆ. ಸೆಂಟ್ ಥಾಮಸ್ ಶಾಲೆಯ ಕಾವೇರಿ ಬಡಾವಣೆ ಮೊದಲಾದ ಭಾಗಗಳಲ್ಲಿಯೂ ತೊಂದರೆಯಾಗಿದೆ. ಈ ಭಾಗಗಳಿಗೆ ಶಾಸಕ ಕೆ.ಜಿ.ಬೋಪಯ್ಯ ಬುಧವಾರ ಮಧ್ಯಾಹ್ನ ಭೇಟಿ ನೀಡಿ ಪರಿಶೀಲಿಸಿದರು. ಈ ಭಾಗಗಳ ಸಮಸ್ಯೆಗೆ ಕಾರಣ ಕೀರೆಹೊಳೆ ಒತ್ತುವರಿ ಹಾಗೂ ತೋಡನ್ನು ಒತ್ತುವರಿ ಮಾಡಿಕೊಂಡಿರುವದು. ವಿಶಾಲವಾಗಿದ್ದ ಕೀರೆ ಹೊಳೆಯ ದಡದವರೆಗೂ ಕೆಲವರು ಕಟ್ಟಡ ನಿರ್ಮಿಸಿಕೊಂಡು ಹೊಳೆಯನ್ನು ಉದ್ದಕ್ಕೂ ಕಿರಿದುಗೊಳಿಸಿದ್ದಾರೆ. ಹಾಗೆಯೇ ಬೈಪಾಸ್ ರಸ್ತೆಯ ತೋಡನ್ನು ಒತ್ತುವರಿ ಮಾಡಿಕೊಂಡು ಅಂಗಡಿ ಮಳಿಗೆಗಳನ್ನು ನಿರ್ಮಿಸಿದ್ದಾರೆ. ಇಂತಹದ್ದಕ್ಕೆಲ್ಲ ಇಂಬು ನೀಡಿದವರು ಹಿಂದೆ ಗ್ರಾಮ ಪಂಚಾಯಿತಿ ಎಂದು ಸಾರ್ವಜನಿಕರು ಶಾಸಕರೊಂದಿಗೆ ದೂರಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಶಿ ಸುಬ್ರಮಣಿ, ಅಚ್ಚಪಂಡ ಮಹೇಶ್, ಆರ್‍ಎಂಸಿ ಸದಸ್ಯ ಕಿಲನ್ ಗಣಪತಿ, ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ರೈ, ರಾಮಕೃಷ್ಣ, ರತಿ ಅಚ್ಚಪ್ಪ, ಮಂಜುಳಾ, ರಾಜಶೇಖರ್, ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಘು ನಾಣಯ್ಯ, ಫೆಡರೇಷನ್ ನಿರ್ದೇಶಕ ಮಧು ದೇವಯ್ಯ ಹಾಜರಿದ್ದರು,
ಬೈಪಾಸ್ ರಸ್ತೆಯ ಉದ್ದಕ್ಕೂ ಇರುವ ಮದ್ಯದಂಗಡಿಗಳು ತ್ಯಾಜ್ಯವನ್ನು
(ಮೊದಲ ಪುಟದಿಂದ) ತೋಡಿನಲ್ಲಿ ತುಂಬಿ ಪೊನ್ನಂಪೇಟೆಗೆ ತೆರಳುವ ಸೇತುವೆ ಬಳಿ ತುಂಬಿಕೊಂಡಿದೆ. ಇದರಿಂದ ನೀರು ಸಲೀಸಾಗಿ ಹರಿಯಲು ಸಾಧ್ಯವಾಗದೆ ಸೇತುವೆ ಹಿಂದಿನ ಮನೆ ಹಾಗೂ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿದೆ. ಸೇತುವೆ ಮುಂದಿರುವ ಜುಮ್ಮಾ ಮಸೀದಿ ಹಾಗೂ ಫಾಸ್ಟ್ ಫುಡ್ ಬ್ಯಾಂಕ್ ಅಂಗಡಿಗೂ ನೀರು ಆವರಿಸಿಕೊಂಡಿದೆ.
ಉಕ್ಕಿ ಹರಿಯುತ್ತಿರುವ ಕೀರೆಹೊಳೆ ಹಾಗೂ ಜಲಾವೃತಗೊಂಡ ಮನೆ ಹಾಗೂ ರಸ್ತೆಗಳನ್ನು ವೀಕ್ಷಿಸಲು ಜನತೆ ಬುಧವಾರ ಬೆಳಿಗ್ಗೆ ಸೇತುವೆ ಬಳಿ ನೆರೆದಿದ್ದರು.
ಮಳೆಗಾಲ ಆರಂಭವಾಗುವದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಕೀರೆಹೊಳೆ ಮತ್ತು ಬೈಪಾಸ್ ರಸ್ತೆಯ ತೋಡುಗಳ ಕಸ ಕಡ್ಡಿ ತೆಗೆಸಿ ಸ್ವಚ್ಛಗೊಳಿಸುತ್ತಿತ್ತು, ಆದರೆ ಎರಡು ವರ್ಷದಿಂದ ಈ ಬಗ್ಗೆ ಯಾವದೇ ಕೆಲಸ ನಡೆದಿಲ್ಲ. ಹೊಳೆಯಲ್ಲಿ ತ್ಯಾಜ್ಯ ತುಂಬಿ ನೀರಿನ ಹರಿವಿಗೆ ತೊಡಕಾಗಿದೆ. ಇದರಿಂದ ಜನತೆ ತೊಂದರೆ ಅನುಭವಿಸಬೇಕಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಹೊಳೆ ಮತ್ತು ತೋಡನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದರೂ ಅದನ್ನು ತೆರವುಗೊಳಿಸುವದಕ್ಕೆ ಗ್ರಾಮ ಪಂಚಾಯಿತಿ ಮುಂದಾಗಿಲ್ಲ. ಹಿಂದೆ ವಿಶಾಲವಾಗಿ ಹರಿಯುತ್ತಿದ್ದ ನೀರು ಕಿರಿದಾದ ಜಾಗದಲ್ಲಿ ಮುಂದೆ ಚಲಿಸಲಾಗದೆ ಮನೆ ಹಾಗೂ ಅಂಗಡಿಗಳಿಗೆ ನುಗ್ಗುತ್ತಿದೆ ಎಂದು ಆರೋಪಿಸಿದ್ದಾರೆ.
ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಕಟ್ಟಡ ಮತ್ತು ತೋಟ ಹಾಗೂ ಇತರ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಕಾರ್ಮಿಕರು ಪಟ್ಟಣದಲ್ಲಿ ಕೆಲಸ ವಿಲ್ಲದೆ ಅಡ್ಡಾಡುತ್ತಿರುವದು ಕಂಡು ಬಂದಿತು.
ಚಿತ್ರ - ವರದಿ:ಎನ್.ಎನ್.ದಿನೇಶ್