*ಸಿದ್ದಾಪುರ, ಆ. 7: ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಆದರೆ ವಾಲ್ನೂರು-ತ್ಯಾಗತ್ತೂರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಪ್ರೋತ್ಸಾಹ ಉತ್ತಮ ಕಲಿಕೆ ಮಟ್ಟದಿಂದ ಮಕ್ಕಳ ಸಂಖ್ಯೆ ಅಧಿಕವಾಗುತ್ತಿರುವದು ಆಶಾದಾಯಕ ಬೆಳವಣಿಗೆಯಾಗಿದೆ.

ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುಖ್ಯೋಪಾಧ್ಯಾಯರಾಗಿ ಕುಮಾರ್ ಅವರು ನೇಮಕವಾದ ನಂತರ ಶಿಕ್ಷಕ ವೃಂದದವರ ಸಾಮೂಹಿಕ ಶ್ರಮದಿಂದ ವಿದ್ಯಾರ್ಥಿಗಳಿಗೆ ಶಿಸ್ತು, ಗುಣಮಟ್ಟದ ಶಿಕ್ಷಣ, ಪರಿಸರ ಕಾಳಜಿ, ಬೇಸಿಗೆ ಶಿಬಿರ, ಪ್ರಬಂಧ ಸ್ಪರ್ಧೆ, ಸಾಂಸ್ಕøತಿಕ ಕಾರ್ಯಕ್ರಮ ಸ್ವಚ್ಛತೆಗೆ ಒತ್ತು ನೀಡಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣೀಭೂತರಾಗಿದ್ದಾರೆ.

ಕೂಲಿ ಕಾರ್ಮಿಕರ ಪರಿಶಿಷ್ಟ ಜಾತಿ, ಪಂಗಡದವರ, ಅಲ್ಪಸಂಖ್ಯಾತರ ಮಕ್ಕಳೇ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರಕಾರದಿಂದ ಬಿಸಿ ಹಾಲು, ಮಧ್ಯಾಹ್ನದ ಬಿಸಿಯೂಟ ಶುಚಿ ರುಚಿಯಾಗಿ ನೀಡುತ್ತಿದ್ದು, ಮಕ್ಕಳು ಆಸಕ್ತಿಯಿಂದ ಶಾಲೆಗೆ ಪ್ರವೇಶ ಪಡೆಯುತ್ತಿರುವದು ಕಂಡು ಬಂದಿದೆ.

ಬೇಸಿಗೆ ಶಿಬಿರದಲ್ಲಿ ಸ್ವಚ್ಛತೆ ಮನೆಯ ಪರಿಸರ, ಕನ್ನಡ ಸಾಹಿತ್ಯ ಪರಿಷತ್‍ನಿಂದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಮಿತವಾಗಿ ನೀರನ್ನು ಬಳಸುವ ಬಗ್ಗೆ ಪೋಷಕರಿಗೆ ದುಶ್ಚಟಗಳಿಂದ ದೂರವಿರಲು ಮಕ್ಕಳೇ ಎಚ್ಚರಿಸುವ ಬಗ್ಗೆ ಶಿಕ್ಷಕರುಗಳು ಮಾಹಿತಿ ನೀಡುವದರಿಂದ ವಿದ್ಯಾರ್ಥಿಗಳು ಶಾಲೆಯತ್ತ ಮುಖಮಾಡಲು ಪ್ರಮುಖ ಕಾರಣವಾಗಿದೆ. ಪೋಷಕರಲ್ಲಿ ಮನ ಪರಿವರ್ತನೆಯಾಗಿದ್ದನ್ನು ಕಾಣಬಹುದಾಗಿದೆ.

1 ರಿಂದ 8 ತರಗತಿಯವರೆಗೆ ಕಳೆದ ವರ್ಷ 158 ವಿದ್ಯಾರ್ಥಿಗಳಿದ್ದರೆ ಈ ವರ್ಷ 160 ಮಂದಿ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯೋಪಾಧ್ಯಾಯರು ಸೇರಿ 8 ಮಂದಿ ಸº Àಶಿಕ್ಷಕರು ಇದ್ದಾರೆ. ಹೆಚ್ಚುವರಿ ಶಿಕ್ಷಕರನ್ನು ಈ ಶಾಲೆಗೆ ನೇಮಿಸುವದರಿಂದ ಮಕ್ಕಳ ವಿದ್ಯಾರ್ಜನೆಗೆ ಅನುಕೂಲವಾಗುತ್ತದೆ. ಕೂಡ್ಲೂರು ಚೆಟ್ಟಳ್ಳಿ ಸರಕಾರಿ ಪ್ರಾಥಮಿಕ ಶಾಲೆ ಮಕ್ಕಳ ಪ್ರವೇಶ ಇಲ್ಲದೆ ಇರುವದರಿಂದ ಮುಚ್ಚಿಹೋಗಿದ್ದು, ಆ ಶಾಲೆಯ ಶಿಕ್ಷಕರನ್ನು ಇಲ್ಲಿಗೆ ನೇಮಿಸಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.

ಹಲವು ವರ್ಷಗಳಿಂದ ಸುಣ್ಣ ಬಣ್ಣ ಕಾಣದ ವಾಲ್ನೂರು-ತ್ಯಾಗತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತಾ.ಪಂ., ಜಿ.ಪಂ. ಸದಸ್ಯರ ಅನುದಾನದಲ್ಲಿ ಸುಣ್ಣ ಬಣ್ಣ ಬಳಿಯಬೇಕೆಂದು ಪೋಷಕರಾದ ಸಣ್ಣ, ಸತೀಶ, ಗಿರಿಜಾ ಅವರುಗಳು ಒತ್ತಾಯಿಸಿದ್ದಾರೆ.

- ಅಂಚೆಮನೆ ಸುಧಿಕುಮಾರ್