ನಾಪೋಕ್ಲು: ಕಕ್ಕುಂದಕಾಡು ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ ಶ್ರಾವಣ ಶನಿವಾರ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ಜರುಗಿತು. ಬೆಳಿಗ್ಗೆ ಪಂಚಾಮೃತಾಭಿಷೇಕ ನೆರವೇರಿಸಲಾಯಿತು. ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಹಾಪೂಜೆ ಪ್ರಸಾದ ವಿತರಣೆ ಜರುಗಿತು. ಪ್ರಥಮ ಶ್ರಾವಣ ಶನಿವಾರದ ಅಂಗವಾಗಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು. ದೇವಾಲಯದ ಅರ್ಚಕ ಸುಧೀರ್‍ಕುಮಾರ್ ಕೇಕುಣ್ಣಾಯ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭ ದೇವಾಲಯದ ಅಧ್ಯಕ್ಷ ಟಿ.ಎಸ್. ಮಂಜಯ್ಯ, ಕಾರ್ಯದರ್ಶಿ ಸುಧಿಕುಮಾರ್, ಖಜಾಂಚಿ ಟಿ.ಎನ್. ರಮೇಶ್, ಮಾಜಿ ಅಧ್ಯಕ್ಷ ಪಿ.ವಿ. ಶ್ರೀನಿವಾಸ್, ಟಿ.ವಿ. ಆನಂದಸ್ವಾಮಿ, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಸೋಮವಾರಪೇಟೆ: ಶ್ರೀ ಮುತ್ತಪ್ಪ ಮತ್ತು ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಆಟಿ ಮಾಸದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು.

ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ದೇವಾಲಯ ಆವರಣದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ನೂರಾರು ಮಂದಿ ಭಕ್ತಾದಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು.ಕುಶಾಲನಗರ: ಕುಶಾಲನಗರದ ರಥಬೀದಿಯಲ್ಲಿರುವ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.

ಶನಿದೇವರ ಕಥಾ ಶ್ರಾವಣ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ದೇವರಿಗೆ ವಿಶೇಷ ಅರ್ಚನೆ, ಅಭಿಷೇಕಗಳು ಜರುಗಿದವು. ಮಹಾಮಂಗಳಾರತಿ ವೇಳೆಗೆ ಶ್ರೀ ವಾಸವಿ ದೇವರ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ವಸ್ತ್ರಗಳಿಂದ ಸಿಂಗರಿಸಿ ಅರ್ಚಕ ಸುಬ್ಬುರಾಂ ಭಟ್ ನೇತೃತ್ವದಲ್ಲಿ ಪೂಜಾ ವಿಧಿಗಳು ಜರುಗಿದವು. ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.ವೀರಾಜಪೇಟೆ: ವೀರಾಜಪೇಟೆ ಬಳಿಯ ಮಗ್ಗುಲ ಗ್ರಾಮದ ಶ್ರೀ ಶನೀಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಶ್ರಾವಣ ಪೂಜೆಯ ಅಂಗವಾಗಿ ಶನೀಶ್ವರ ದೇವಾಲಯದಲ್ಲಿ ಗಣ ಹೋಮ, ನವಗ್ರಹ ಪೂಜೆ, ಶನಿ ಶಾಂತಿ ಪೂಜೆ, ಜಪ-ತಪ ಹಾಗೂ ಅಪರಾಹ್ನ 1 ಗಂಟೆಗೆ ಮಹಾಪೂಜಾ ಸೇವೆ ಜರುಗಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.